Bagalkot Road Accidents: ಎರಡು ಪ್ರತ್ಯೇಕ ಅಪಘಾತ: ಮೂವರ ದುರ್ಮರಣ

By Kannadaprabha NewsFirst Published Dec 29, 2021, 10:25 AM IST
Highlights

*  ಮುಧೋಳದ ಗಿರಗಾಂವ ಪುನರ್ವಸತಿ ಕೇಂದ್ರ ಬಳಿ ನಡೆದ ಘಟನೆ
*  ಈ ಕುರಿತು ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
*  ಬಾವಿಗೆ ಕಬ್ಬಿನ ಟ್ರ್ಯಾಕ್ಟರ್‌ ಬಿದ್ದು ಓರ್ವ ಸಾವು
 

ಮುಧೋಳ(ಡಿ.29):  ರಸ್ತೆ ವಿಭಜಕಕ್ಕೆ ಖಾಸಗಿ ಮಿನಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬೆಳಗಾವಿ-ವಿಜಯಪುರ(Belagavi-Vijayapura) ರಾಜ್ಯ ಹೆದ್ದಾರಿಯ ಮುಧೋಳ(Mudhol) ಹೊರ ವಲಯದ ಗಿರಗಾಂವ ಪುನರ್ವಸತಿ ಕೇಂದ್ರ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.

ಗ್ಯಾನೇಶ ಬೇವೂರ (24) ಮತ್ತು ಮುತ್ತಪ್ಪಾ ಮುರನಾಳ (32) ಸ್ಥಳದಲ್ಲಿಯೇ ಮೃತಪಟ್ಟ(Death) ದುರ್ದೈವಿಗಳು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ. ನಿಶ್ಚಿತಾರ್ಥ ಮುಗಿಸಿಕೊಂಡು ತೇರದಾಳದಿಂದ ಬಾದಾಮಿ ತಾಲೂಕಿನ ಮುಷ್ಟಿಗೇರಿಗೆ ವಾಪಸ್‌ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru Road Accident :  ಊಟಕ್ಕೆ ತೆರಳಿದ್ದ ಕೌಶಿಕ್-ಸುಷ್ಮಾಗೆ ಮೃತ್ಯುವಾದ ಟ್ಯಾಂಕರ್

ಬಾವಿಗೆ ಕಬ್ಬಿನ ಟ್ರ್ಯಾಕ್ಟರ್‌ ಬಿದ್ದು ಓರ್ವ ಸಾವು

ಇಳಕಲ್ಲ: ಕಬ್ಬು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ ಬಾವಿಯಲ್ಲಿ ಬಿದ್ದ ಪರಿಣಾಮ ಅದರಲ್ಲಿದ್ದ ಓರ್ವ ಪಾರಾದರೆ, ಮತ್ತೋರ್ವ ಬಾವಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಹತ್ತಿರ ಭಾನುವಾರ ಸಂಜೆ ನಡೆದಿದೆ.

ಹುಣಶ್ಯಾಳ ತಾಂಡಾದ ದೇವಪ್ಪ ಗೋಪಾಲಪ್ಪ ರಾಠೋಡ (26) ಎಂಬಾತ ಮೃತ ಯುವಕ. ಸುದ್ದಿ ತಿಳಿದ ನಂತರ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಟ್ರ್ಯಾಕ್ಟರ್‌, ಕಬ್ಬು ಹಾಗೂ ಮೃತ ವ್ಯಕ್ತಿಯ ಶವವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಈ ಕುರಿತು ಇಳಕಲ್ಲ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಗಾಯಾಳು ಬೈಕ್‌ ಸವಾರ ಸಾವು

ಉಳ್ಳಾಲ: ಬೈಕ್‌ ಅಪಘಾತದಲ್ಲಿ(Bike Accident) ಗಾಯಗೊಂಡಿದ್ದ ದೇರಳಕಟ್ಟೆ ಬದ್ಯಾರು ನಿವಾಸಿ ಇಸ್ಮಾಯಿಲ್‌ ಇಬ್ರಾಹಿಂ (55) ಎಂಬವರು ಮಂಗಳೂರಿನ(Mangaluru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಡಿ. 26ರಂದು ಇಬ್ರಾಹಿಂ ಅವರು ದೇರಳಕಟ್ಟೆಯಿಂದ ಕೆ.ಸಿ ರೋಡ್‌ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ಬೈಕ್‌ ಸ್ಕಿಡ್‌ ಆಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಬ್ರಾಹಿಂ ಮಂಗಳೂರಿನಲ್ಲಿ ಗುಜರಿ ಉದ್ಯಮವನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದರು. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವು

ಬ್ಯಾಡಗಿ(Byadagi): ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway) ಡಿ. 26 ರಂದು ನಡೆದಿವೆ.

Belagavi Road Accident : ಟ್ರ್ಯಾಕ್ಟರ್‌ಗೆ ಗುದ್ದಿದ ಕಾರು, ಯಲ್ಲಾಪುರದ ಮೂವರ ದುರ್ಮರಣ

ಮೋಟೆಬೆನ್ನೂರ ಗ್ರಾಮದ ಕೋಟೆಗುಡ್ಡದ ಬಳಿಯಲ್ಲಿ ರಾಣಿಬೆನ್ನೂರಿನಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಮುಂದೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ (ಸ್ಕೂಟಿ) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ಮೃತರನ್ನು ರಾಣಿಬೆನ್ನೂರ ತಾಲೂಕಿನ ಕಜ್ಜರಿ ಗ್ರಾಮದ ವೀರಣ್ಣ ಬುಡಪನಹಳ್ಳಿ ಹಾಗೂ ಬಸಪ್ಪ ಗೋಣೆಮ್ಮನವರ ಎಂದು ಗುರುತಿಸಲಾಗಿದ್ದು, ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಛತ್ರ ಬಳಿ ಬೈಕ್‌ ಡಿಕ್ಕಿ

ತಾಲೂಕಿನ ಛತ್ರ ಗ್ರಾಮದ ಸರ್ವಿಸ್‌ ರಸ್ತೆಯಲ್ಲಿ ಭಾನುವಾರ ರಾತ್ರಿ ಒಂದು ಗಂಟೆ ಸುಮಾರಿಗೆ ದ್ವಿಚಕ್ರ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ರಾಣಿಬೆನ್ನೂರಿನ ಮಾಣಿಕುಮಾರ್‌ ಪೀಸೆ (27) ಎಂದು ಗುರ್ತಿಸಲಾಗಿದೆ. ಹಾವೇರಿಯಿಂದ ರಾಣಿಬೆನ್ನೂರು ಕಡೆಗೆ ಹೋಗುತ್ತಿದ್ದ ವೇಳೆ ಛತ್ರ ಗ್ರಾಮದ ಬಳಿಯಲ್ಲಿನ ಸರ್ವಿಸ್‌ ರಸ್ತೆಯಲ್ಲಿನ ಡಿವೈಡರ್‌ಗೆ ಬೈಕ್‌ ಡಿಕ್ಕಿ ಹೊಡೆದಿದೆ, ಘಟನೆಗಳ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
 

click me!