ಕೊಟ್ಟಿಗೆಹಾರ (ಡಿ.23): ಚಾರ್ಮಾಡಿ ಘಾಟ್ (charmadi Ghat) ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ. ಅರಣ್ಯ ಇಲಾಖೆಯೊಂದಿಗೆ (Forest Department) ಚರ್ಚೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಾಗಿ (National Highway) ಪರಿವರ್ತಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದರು. ಕೊಟ್ಟಿಗೆ ಹಾರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಮಾಡಿ ಘಾಟಿ (Charmadi Ghat) ಪ್ರತಿವರ್ಷ ಮಳೆಗಾಲದಲ್ಲಿ (Monsoon) ಮಳೆಗೆ ಮಣ್ಣು ಕುಸಿಯುವುದು ಹಾಗೂ ಗುಡ್ಡ ಕುಸಿಯುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಚಾರ್ಮಾಡಿ ಚತುಷ್ಪತಾ ರಸ್ತೆಯನ್ನಾಗಿ ಮಾಡಲು ಅಪೇಕ್ಷೆ ಇದೆ. ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆಯೂ ಸದ್ಯದಲ್ಲೇ ಬರಬಹುದು ಎಂದರು.
ಅರಣ್ಯ ಇಲಾಖೆಯ (Forest Department) ಜೊತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಿಸಿ ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ (National Highway) ಮಾರ್ಪಡಿಸಿ ಚತುಷ್ಪತಾ ರಸ್ತೆ ಮಾಡಲು ಪ್ರಯತ್ನ ನಡೆದಿದೆ. ಮೂಲಭೂತ ಸೌಲಭ್ಯಕ್ಕೆ ಯಾವುದೇ ಅರಣ್ಯದ (Forest) ಕಾಯ್ದೆ ಅಡಚಣೆಯಾಗದಂತೆ ಸಡಿಲಗೊಳಿಸಲು ಕೇಂದ್ರ ಪರಿಸರ ಮಂತ್ರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಕೊಟ್ಟಿಗೆಹಾರದಿಂದ ಮೂಡಿಗೆರೆ ಬೇಲೂರು (Beluru) ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು ಶೀಘ್ರದಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗುತ್ತದೆ ಎಂದರು ಶೋಭಾ ಕರಂದ್ಲಾಜೆ.
ಮತಾಂತರ ನಿಷೇಧ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿರುವ ಎಲ್ಲಾ ಕಾನೂನುಗಳನ್ನು (Law) ಬಲವಾಗಿ ಜಾರಿಗೊಳಿಸಲು ನಮ್ಮ ಅಪೇಕ್ಷೆ ಇದೆ. ಕಾಂಗ್ರೆಸ್ (Congress) ಇದನ್ನು ವಿರೋಧಿಸುತ್ತಿದೆ. ಬೇರೆ ಧರ್ಮದವರನ್ನು ಮತಕ್ಕಾಗಿ ಓಲೈಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಕುರ್ಚಿ ಗಟ್ಟಿ ಮಾಡುವ ಕೆಲಸ ಕಾಂಗ್ರೆಸ್ (Congress) ಮಾಡುತ್ತಿದೆ ಎಂದರು.
ಮತಾಂತರ ಎನ್ನುವುದು ಸಮಾಜಕ್ಕೆ ಮಾರಕವಾಗಿದೆ. ಅನಾರೋಗ್ಯ (Health Issues), ಬಡತನ, ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲಿಯೂ ನಡೆಯುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಸಾವಿರಾರು ಹೆಣ್ಣು ಮಕ್ಕಳು ಮತಾಂತರ ಆಗುತ್ತಿದ್ದಾರೆ. ಅವರಿಗೆ ನೆಲೆ ಇಲ್ಲದ ಪರಿಸ್ಥಿತಿಯನ್ನು ನಾವು ಹಲವಾರು ಪ್ರದೇಶದಲ್ಲಿ ನೋಡುತ್ತಿದ್ದೇವೆ. ಇಂತಹ ಕೆಟ್ಟವ್ಯವಸ್ಥೆಗಳು ಸಮಾಜದಲ್ಲಿ ಇರಬಾರದು. ಅದಕ್ಕಾಗಿ ಇದಕ್ಕೆ ನಿಷೇಧ ಮಾಡಬೇಕು ಎಂಬ ನಮ್ಮ ಪ್ರಯತ್ನ ನಡೆಯುತ್ತಿದೆ. ಯಾವುದೇ ಧರ್ಮದವರು ಅದೇ ಧರ್ಮದಲ್ಲಿ ಮುಂದುವರೆದರೆ ಯಾರ ಅಭ್ಯಂತರವೂ ಇಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ.ಎಂ.ಭರತ್, ಟಿ.ಎಂ.ಗಜೇಂದ್ರ, ನರೇಂದ್ರಗೌಡ, ಪರೀಕ್ಷಿತ್ ಜಾವಳಿ ಇದ್ದರು.
ಬೀಳುತ್ತೆ ದಂಡ : ಪ್ರತಿ ಮಳೆಗಾಲದಲ್ಲಿಯೂ ರಸ್ತೆ ಬದಿ ಗುಡ್ಡ ಜರಿಯುವುದು, ವಾಹನಗಳು ಬ್ಲಾಕ್ ಆಗುವಂತಹ ಸಮಸ್ಯೆಗಳು ಚಾರ್ಮಾಡಿ ಘಾಟ್ ರಸ್ತೆಗಳಲ್ಲಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದೆ.
ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದ್ದು, ವಾಹನ ನಿಲ್ಲಿಸಿದರೆ ಪೊಲೀಸರು ಕೇಸು ದಾಖಲಿಸಿಕೊಳ್ಳಲಿದ್ದಾರೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಈ ಬಗ್ಗೆ ಸೂಚನೆ ನೀಡುತ್ತಿದ್ದಾರೆ.
ಸೂಚನೆ ನಾಮಫಲಕ ಹಾಕಿರುವ ಜಿಲ್ಲಾಡಳಿತ ಮಳೆಯ ನಡುವೆ ವಾಹನ ನಿಲ್ಲಿಸಿ ಆಪಾಯ ಸ್ಥಳಗಳ ಜನರ ಓಡಾಟವನ್ನು ಸಂಪೂರ್ಣ ನಿಷೇಧಿಸಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ ವಿಭಾಗದಲ್ಲಿರುವ ಚಾರ್ಮಾಡಿ ಘಾಟ್‌ನಲ್ಲಿ ಮಳೆಗಾಲದಲ್ಲಿ ಅಪಾಯ ಸಂಭವಿಸುತ್ತದೆ.
ಗುಡ್ಡಗಳ ಮಧ್ಯೆ ರಸ್ತೆ ಹಾದು ಹೋಗುವುದರಿಂದ ರಸ್ತೆಯ ಬದಿಯಲ್ಲಿ ದೊಡ್ಡ ಜಲಪಾತಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ಬಹಳಷ್ಟು ಜನ ಇದನ್ನು ನೋಡಲೆಂದೇ ಪ್ರಯಾಣಿಸುತ್ತಾರೆ. ರಸ್ತೆ ಮಧ್ಯೆ ಇಳಿದು ವಿಡಿಯೋ, ಪೋಟೋ ತೆಗೆಯುವುದನ್ನು ಮಾಡುತ್ತಾರೆ.