ರಾಮನಗರ (ಡಿ.23): ನಾಲ್ಕು ವರ್ಷ ಶಾಸಕನಾಗಿ (MLA) ನಾನೇನು ಅಭಿವೃದ್ಧಿ ಮಾಡಿದ್ದೇನೆ ಎಂಬುದನ್ನು ಮುದ್ರಿಸಿ ಕಿರುಹೊತ್ತಿಗೆ ಹೊರ ತಂದಿದ್ದೀನಿ. ಮಾಜಿ ಶಾಸಕರು 10 ವರ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಸಾಧನೆಗಳ ಸಾಕ್ಷಿ ಗುಡ್ಡೆ ಏನೆಂಬುದನ್ನು ತೋರಿಸಲಿ ಎಂದು ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು. ಬಿಡದಿ (Bidadi) ಪುರಸಭೆಯ ಚುನಾವಣೆ ಹಿನ್ನೆಲೆಯಲ್ಲಿ ‘ಬಿಡದಿ ಸಾಧನೆಯ ಹಾದಿಯಲ್ಲಿ‘ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಮಾತನಾಡಿದರೆ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಾರೆ. ನನಗೆ ಚುನಾವಣಾ (Election) ಕಣವೇ ಚರ್ಚಾ ಕಣ ಎಂದರು.
ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಿಗೆ ಮಂಚನ ಬೆಲೆ ಜಲಾಶಯದಿಂದ ಕುಡಿಯುವ ನೀರು ಸರಬರಾಜಿಗೆ 73.40 ಕೋಟಿ ಮತ್ತು ಒಳಚರಂಡಿಗೆ ಯೋಜನೆಗೆ 98.20 ಕೋಟಿ ಯೋಜನೆ ಮಂಜೂರು ಮಾಡಿಸಿದ್ದೇನೆ. ಇದು ಸಾಧನೆ ಅಲ್ಲವೇ ಎಂದು ಕಾಂಗ್ರೆಸ್ (Congress) ನಾಯಕರನ್ನು ಪ್ರಶ್ನಿಸಿದರು. ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಿಡದಿ ಮತ್ತು ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಕಾಂಗ್ರೆಸ್ ನ ಸಂಸದರು, ಎಂ.ಎಲ್.ಸಿಗಳ (MLC) ಏನು ಕೊಡುಗೆ ಎಂಬುದನ್ನು ತಿಳಿಸಲಿ ಎಂದರು.
undefined
ಬಿಡದಿ ವ್ಯಾಪ್ತಿಯಲ್ಲಿ ತಾವು ಶಾಸಕರಾಗಿ, ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಸಹಕಾರದಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ತಡೆಯುವಂತೆ ಸಂಸದರು ಪತ್ರ ಬರೆದಿದ್ದಾರೆ. ಸಂಸದರಿಗೆಯೇ ಗೊತ್ತಿಲ್ಲದಂತೆ ಅವರಿಂದ ಇಂತಹ ಕೆಲಸ ಮಾಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಕೊನೆ ಉಸಿರು ಇರುವವರೆಗೂ ಜೆಡಿಎಸ್ (JDS) ಪಕ್ಷದಲ್ಲಿಯೇ ಇರುತ್ತೇನೆ. ನಾನು ಬಿಜೆಪಿ (BJP) ಸೇರುತ್ತೇನೆಂದು ಮಾಜಿ ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಂತೆ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ವ್ಯಕ್ತಿ ನಾನಲ್ಲ. ಸಚಿವ ಅಶ್ವತ್ಥ ನಾರಾಯಣ (Ashwath Narayan) ನನಗೆ ಒಳ್ಳೆಯ ಸ್ನೇಹಿತರು. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ನನ್ನ ಮತ್ತು ಅಶ್ವತ್ಥ ನಾರಾಯಣ ನಡುವಿನ ಸ್ನೇಹದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ.
-ಎ.ಮಂಜುನಾಥ್ , ಶಾಸಕರು, ಮಾಗಡಿ)
ಯೋಜನೆಗಳ ವಿಚಾರವಾಗಿಯೇ ಬಹಿರಂಗ ಚರ್ಚೆಗೆ ಬರಲಿ : ನಾನು ಶಾಸಕನಾಗಿದ್ದ (MLA ) ಅವಧಿಯಲ್ಲಿ ಮಂಜೂರು ಮಾಡಿಸಿರುವ ಯೋಜನೆಗಳನ್ನು ಬಿಡದಿ ಸಾಧನೆಯ ಹಾದಿಯಲ್ಲಿ ಎಂಬ ಕಿರುಹೊತ್ತಿಗೆಯಲ್ಲಿ ಮುದ್ರಿಸಿಕೊಂಡಿದ್ದಾರೆ. ಆ ಯೋಜನೆಗಳ ವಿಚಾರವಾಗಿಯೇ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಎ.ಮಂಜುನಾಥ್ (A Manjunath) ಅವರಿಗೆ ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಸವಾಲು ಹಾಕಿದರು.
ಬಿಡದಿ ಪುರಸಭೆಯ 2ನೇ ವಾರ್ಡಿನಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಚಂದ್ರಕಲಾ ಪರ ಚುನಾವಣಾ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ಧೈರ್ಯ ಹಾಗೂ ಮಾನ ಮರ್ಯಾದೆ ಇದ್ದರೆ ಕಿರುಹೊತ್ತಿಗೆಯಲ್ಲಿ ಉಲ್ಲೇಖಿಸಿರುವ ಯೋಜನೆಗಳ ವಿಚಾರವಾಗಿಯೇ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಅವರೇ ದಿನಾಂಕ ಮತ್ತು ಸ್ಥಳ ನಿಗದಿ ಮಾಡಲಿ ಎಂದರು.
ಕಿರುಹೊತ್ತಿಗೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಅವರೇ ಮಾಡಿದ್ದರೆ ಬಹಿರಂಗ ಚರ್ಚೆಗೆ ಬರಲು ಏಕೆ ಹಿಂದೇಟು ಹಾಕುತ್ತಿದ್ದಾರೆ. ಚುನಾವಣಾ ಕಣವೇ ಚರ್ಚಾ ಕಣವಾಗಿದ್ದರೆ, ಜನರೇ ಉತ್ತರ ನೀಡುವುದಾಗಿದ್ದರೆ ಕಿರು ಹೊತ್ತಿಗೆ ಏಕೆ ಬಿಡುಗಡೆ ಮಾಡಿದರು. ನಮ್ಮ ಕೊಡುಗೆ ಬಗ್ಗೆ ಏಕೆ ಪ್ರಸ್ತಾಪಿಸಿದರು ಎಂದು ಪ್ರಶ್ನಿಸಿದರು.
ಮಂಚನಬೆಲೆ ಜಲಾಶಯದಿಂದ ಬಿಡದಿಗೆ ಕುಡಿಯುವ ನೀರು ಸರಬರಾಜು ಯೋಜನೆ, ಒಳಚರಂಡಿ (ಯುಜಿಡಿ)ಯೋಜನೆ ಯಾವ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರಕಿದೆ. 2018ರ ಸೆಪ್ಟೆಂಬರ್ 5ರಂದೇ ಅನುಮೋದನೆ ಪಡೆದು ಯೋಜನೆಗೆ ಚಾಲನೆ ನೀಡಿದರೆ ಎಂದು ಪ್ರಶ್ನಿಸಿದರು. ಸಿಎಸ್ ಆರ್ (CSR) ಅನುದಾನದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಡೇರಿ, ಸಣ್ಣಪುಟ್ಟರಸ್ತೆಗಳ ನಿರ್ಮಾಣ, ಶೌಚಾಲಯ ನಿರ್ಮಿಸಿದ್ದನ್ನು ಎಲ್ಲವನ್ನು ತಮ್ಮ ಸಾಧನೆಗಳೆಂದು ಶಾಸಕರು ಉಲ್ಲೇಖಿಸಿದ್ದಾರೆ.
ರಾಮನಗರ ಜಿಲ್ಲೆ ಅಭಿವೃದ್ಧಿ ಹೊಂದಿದ್ದರೆ ಅದರಲ್ಲಿ ಸಂಸದ ಡಿ.ಕೆ.ಸುರೇಶ್ ಪಾಲು ಹೆಚ್ಚಾಗಿದೆ. ಅಲ್ಲದೆ, ಶಾಸಕ ಎ.ಮಂಜುನಾಥ್ ರಾಜಕೀಯವಾಗಿ ಬೆಳೆಯಲು ಸಂಸದರ ಆಶೀರ್ವಾದ ಇದೆ ಎಂಬುದನ್ನು ಮರೆಯಬಾರದು. ನಡೆದು ಬಂದ ದಾರಿಯನ್ನು ಮಂಜುನಾಥ್ ರವರು ನೆನೆದು ಕೊಳ್ಳಲಿ.
ಕಾಂಗ್ರೆಸ್ (Congress) ಪಕ್ಷ ಜೆಡಿಎಸ್ ನಂತೆ 25 ಸ್ಥಾನ ಬರುವ ಪಕ್ಷ ಅಲ್ಲ. 120 - 125 ಸೀಟು ಬರುವ ಪಕ್ಷ. ಹಾಗೊಂದು ವೇಳೆ ಜೆಡಿಎಸ್ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ನಾನೇ ರಾಜಕೀಯದಿಂದ ದೂರ ಸರಿಯುತ್ತೇನೆ. 25 ಸೀಟು ಬರುವುದಾಗಿದ್ದರೆ ನಾನು ಮುಂದಿನ ಮುಖ್ಯಮಂತ್ರಿ ಯಾರೆಂದು ಹೇಳುತ್ತಿದ್ದೆ. ನಮ್ಮದು ಸರ್ವ ಜನಾಂಗದ ಪಕ್ಷ. ನಮ್ಮಲ್ಲಿ ಎಲ್ಲ ವರ್ಗದ ಪ್ರಬಲ ನಾಯಕರು ಇದ್ದಾರೆ. ಜೆಡಿಎಸ್ ಪಕ್ಷದಲ್ಲಿ ಯಾವ ವರ್ಗದ ನಾಯಕರು ಇದ್ದಾರೆ ಎಂಬುದನ್ನು ತೋರಿಸಲಿ ಎಂದರು.