ಈ ಸಲ ಬಿಬಿಎಂಪಿ ಬಜೆಟ್ ಗಾತ್ರ 19000 ಕೋಟಿ: ಮಾ.28ರಂದು ಮಂಡನೆ!

Published : Mar 26, 2025, 08:51 AM ISTUpdated : Mar 26, 2025, 09:13 AM IST
ಈ ಸಲ ಬಿಬಿಎಂಪಿ ಬಜೆಟ್ ಗಾತ್ರ 19000 ಕೋಟಿ: ಮಾ.28ರಂದು ಮಂಡನೆ!

ಸಾರಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್‌ನ್ನು ಅಂತಿಮವಾಗಿ ಮಾ.28 ರಂದು ಮಂಡಿಸಲು ತೀರ್ಮಾನಿಸಲಾಗಿದ್ದು, ಸುಮಾರು ₹19 ಸಾವಿರ ಕೋಟಿ ಬಜೆಟ್‌ ಮಂಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. 

ಬೆಂಗಳೂರು (ಮಾ.26): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್‌ನ್ನು ಅಂತಿಮವಾಗಿ ಮಾ.28 ರಂದು ಮಂಡಿಸಲು ತೀರ್ಮಾನಿಸಲಾಗಿದ್ದು, ಸುಮಾರು ₹19 ಸಾವಿರ ಕೋಟಿ ಬಜೆಟ್‌ ಮಂಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬಿಬಿಎಂಪಿಯ ಅಧಿಕಾರಿಗಳು ಈಗಾಗಲೇ ಸರ್ಕಾರದ ₹7 ಸಾವಿರ ಕೋಟಿ ಅನುದಾನ ನಿರೀಕ್ಷೆ ಇಟ್ಟುಕೊಂಡು ಬಜೆಟ್‌ ಮಂಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸೋಮವಾರ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶಾಸಕರ ಸಭೆ ನಡೆಸಲಾದ ಬಳಿಕ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾ.27ರ ಗುರುವಾರದ ಬದಲಿಗೆ ಮಾ.28ರಂದು ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಬಿಬಿಎಂಪಿಯ ಆಡಳಿತಾಧಿಕಾರಿ, ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಬಜೆಟ್‌ ಮಂಡಿಸಲಿದ್ದಾರೆ.

ದಾಖಲೆಯ ₹19 ಸಾವಿರ ಕೋಟಿ ಬಜೆಟ್‌?: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆ ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹7 ಸಾವಿರ ಕೋಟಿ ಅನುದಾನ 2025-26ನೇ ಸಾಲಿನಲ್ಲಿ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆಸ್ತಿ ತೆರಿಗೆ ಹಾಗೂ ಸರ್ಕಾರದ ಅನುದಾನ ನೆಚ್ಚಿಕೊಂಡು ಬಜೆಟ್‌ ಮಂಡಿಸುವ ಬಿಬಿಎಂಪಿಗೆ ಈ ಬಾರಿಯ ಸರ್ಕಾರದ ದೊಡ್ಡ ಮೊತ್ತದ ಅನುದಾನ ಘೋಷಣೆಯಿಂದ ಬಹುದೊಡ್ಡ ಬಲ ಸಿಕ್ಕಂತಾಗಿದೆ. ಇದರೊಂದಿಗೆ ಸಾರ್ವಜನಿಕರಿಗೆ ಹೊರೆಯಾಗದಂತೆ ಜಾಹೀರಾತು, ಪ್ರೀಮಿಯಂ ಎಫ್‌ಎಆರ್‌ ಸೇರಿದಂತೆ ಹೊಸ ಆದಾಯ ಮೂಲಗಳನ್ನು ಹುಡುಕಾಟದಲ್ಲಿದ್ದು, ಆ ಎಲ್ಲವನ್ನೂ ಒಟ್ಟುಗೂಡಿಸಿ ಸುಮಾರು ₹19 ಸಾವಿರ ಕೋಟಿ ಬಜೆಟ್‌ ಮಂಡಿಸಲು ಮುಂದಾಗಿದೆ.

ಪ್ರಮುಖವಾಗಿ ₹40 ಸಾವಿರ ಕೋಟಿ ವೆಚ್ಚದ ಪೂರ್ವ-ಪಶ್ಚಿಮ ಹಾಗೂ ಉತ್ತರ- ದಕ್ಷಿಣ ಸುರಂಗ ಕಾರಿಡಾರ್‌ ಯೋಜನೆಗೆ ಬಜೆಟ್‌ನಲ್ಲಿ ಬುನಾದಿ ಹಾಕುವ ಸಾಧ್ಯತೆ ಇದೆ. ಜತೆಗೆ, ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ, ಕೆರೆ, ಪ್ರವಾಹ ನಿಯಂತ್ರಣ ಕಾಮಗಾರಿಗಳು, ವಿಶ್ವ ಬ್ಯಾಂಕ್‌ ನೆರವಿನ ಯೋಜನೆಗಳು ಬಿಬಿಎಂಪಿಯ ಬಜೆಟ್‌ನಲ್ಲಿ ಅಡಕವಾಗಿರುವ ಸಾಧ್ಯತೆ ಇದೆ. ಉಳಿದಂತೆ ಕಲ್ಯಾಣ ಯೋಜನೆಗಳು, ನಿರ್ವಹಣೆ ಕಾಮಗಾರಿ ಸೇರಿದಂತೆ ಮೊದಲಾದವುಗಳಿಗೆ ಅನುದಾನ ಮೀಸಲಿಡಲಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಂವಿಧಾನ ಬದಲು ಹೇಳಿಕೆ: ಡಿ.ಕೆ.ಶಿವಕುಮಾರ್‌ ವಿರುದ್ಧ ಬೀದಿಗಿಳಿದ ಬಿಜೆಪಿ, ರಾಜ್ಯವ್ಯಾಪಿ ಪ್ರತಿಭಟನೆ

ಬಜೆಟ್‌ ಲೆಕ್ಕಾಚಾರ: ಕಳೆದ 2024-25ನೇ ಸಾಲಿನಲ್ಲಿ ಬಿಬಿಎಂಪಿಯು ₹12,369 ಕೋಟಿ ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. ಸರ್ಕಾರ ಅನುಮೋದನೆ ವೇಳೆ ಹೆಚ್ಚುವರಿ ₹745 ಕೋಟಿ ನೀಡುವ ಭರವಸೆಯೊಂದಿಗೆ ₹13,114 ಕೋಟಿ ಗಾತ್ರಕ್ಕೆ ಹೆಚ್ಚಿಸಿ ಅನುಮೋದನೆ ನೀಡಿತ್ತು. ಸಾಮಾನ್ಯವಾಗಿ ಶೇ.5 ರಿಂದ 8ರಷ್ಟು ಬಜೆಟ್‌ ಗಾತ್ರ ವಾರ್ಷಿಕವಾಗಿ ಹೆಚ್ಚಿಸಲಾಗುತ್ತದೆ. ರಾಜ್ಯ ಸರ್ಕಾರ ಈ ಬಾರಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ಅನುದಾನ ನೀಡಿರುವುದರಿಂದ ಆಯವ್ಯಯ ಗಾತ್ರ ₹19 ಸಾವಿರ ಕೋಟಿ ಇರಲಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ