ಮುಂಬರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಭವಿಷ್ಯ ನುಡಿದರು.
ಹುಣಸೂರು : ಮುಂಬರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಭವಿಷ್ಯ ನುಡಿದರು.
ಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಆವರಣದ ಬಳಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 80-85ರ ಆಜುಬಾಜಿನಲ್ಲಿ ಗೆಲ್ಲಬಹುದು. ಇದನ್ನು ಆಯಾ ಪಕ್ಷಗಳ ಮುಖಂಡರೇ ಹೇಳುತ್ತಿದ್ದಾರೆ. ನನ್ನ ಪ್ರಕಾರ ಜೆಡಿಎಸ್ 40-50 ಸ್ಥಾನಗಳನ್ನು ಗಳಿಸಲಿದೆ. ಕುಮಾರಣ್ಣ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಣಸೂರಿನಲ್ಲಿ ಪಕ್ಷದ ಅಭ್ಯರ್ಥಿಯಾಗಿ ನನ್ನ ಪುತ್ರ ಜಿ.ಡಿ. ಹರೀಶ್‌ಗೌಡರನ್ನು ಪಕ್ಷ ಕಣಕ್ಕಿಳಿಸಿದೆ. ಕುಮಾರಣ್ಣರಾದಿಯಾಗಿ ಹೆಚ್ಚಿನ ಜನರು ಹರೀಶ್‌ಗೌಡರನ್ನು ಚಾಮರಾಜ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸೂಚಿಸಿದ್ದರು. ಆದರೆ ಹುಣಸೂರು ನನ್ನ ಕರ್ಮಭೂಮಿ. ನಾನು 20ವರ್ಷಗಳ ಹಿಂದೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಬೇಕಿದ್ದು, ನನ್ನ ಪುತ್ರನ ಮೂಲಕ ಆಗಬೇಕಿದೆ. ಹಾಗಾಗಿ ನನ್ನ ಪುತ್ರನನ್ನು ತಾಲೂಕಿನ ಜನರ ಮಡಿಲಿಗೆ ಹಾಕಿದ್ದೇನೆ. ಹರಸಿ ಬೆಳೆಸಿರೆಂದು ಕೋರುತ್ತೇನೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪರಿಗೆ ಅಧಿಕಾರ ನೀಡಲಿಲ್ಲ ಎಂಬ ಕಾರಣದಿಂದ ನಾನು ಬಿಜೆಪಿ ಸೇರಿದೆ. ಆದರೆ ನನ್ನನ್ನು ಜೆಡಿಎಸ್ ಅಭಿಮಾನಿಗಳಾದ ನೀವು ಕತ್ತರಿಸಿ ಹಾಕಿದಿರಿ. 15 ವರ್ಷಗಳಿಂದ ನನಗೆ ವನವಾಸ ನೀಡಿದಿರಿ. ನೀವು ಅನುಭವಿಸಿದ್ದೀರಿ. ಇನ್ನು ವನವಾಸ ಮುಗಿಯಿತು ಎಂದುಕೊಳ್ಳೋಣ ಎಂದು ಹೇಳಿದರು.
ಯಾರಿಂದ ದಬ್ಬಾಳಿಕೆ?
ಹರೀಶ್‌ಗೌಡ ಗೆದ್ದರೆ ಹುಣಸೂರಿನಲ್ಲಿ ಒಕ್ಕಲಿಗರದ್ದೇ ಹಾವಳಿ, ದೌರ್ಜನ್ಯ ಹೆಚ್ಚಲಿದೆ ಎಂದು ಹಾಲಿ ಶಾಸಕರು ಅಪಪ್ರಚಾರ ನಡಸುತ್ತಿದ್ದಾರೆ. ಸಣ್ಣಪುಟ್ಟಸಮುದಾಯಗಳನ್ನು ತುಳಿಯುತ್ತಾರೆ ಎಂದು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ನನ್ನ 40 ತಿಂಗಳ ಅದಿಕಾರಾವಧಿಯಲ್ಲಿ ಎಷ್ಟುಸಣ್ಣಪುಟ್ಟಸಮುದಾಯಗಳ ನಾಯಕರನ್ನು ಬೆಳೆಸಿದ್ದೇನೆ ಎನ್ನುವುದನ್ನು ತಾಲೂಕಿನ ಜನತೆ ನೋಡಿದ್ದಾರೆ. 15 ವರ್ಷದಿಂದ ನೀನೆಷ್ಟುನಾಯಕರನ್ನು ಹುಟ್ಟುಹಾಕಿದ್ದೀಯ ತಿಳಿಸಪ್ಪಾ? ಜಾತಿ ಜಾತಿ ನಡುವೆ ಒಡಕು ತಂದು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ಹಾಕಿಸಿರುವುದೇ ನಿನ್ನ ಸಾಧನೆ. 4 ಬಾರಿ ಚುನಾವಣೆ ಎದುರಿಸಿ ಒಮ್ಮೆಯೂ ಸ್ವಯಂ ಬಲದಿಂದ ನೀನು ಗೆಲ್ಲಲಿಲ್ಲ. 5 ವರ್ಷಗಳ ಕಾಲ ನಿಮ್ಮದೇ ಸರ್ಕಾರವಿತ್ತಲ್ಲ? ಹುಣಸೂರಿಗೆ ನೀನೇನು ಮಾಡಿದ್ದೀಯ ಎನ್ನುವುದನ್ನು ತಿಳಿಸಪ್ಪಾ ಎಂದು ಹೆಸರು ಹೇಳದೇ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಚಾಟಿ ಬೀಸಿದರು.
ಜೆಡಿಎಸ್ ಘೋಷಿತ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಕ್ಷೇತ್ರದ ಶಾಸಕರು ತಮ್ಮ ವಿರುದ್ಧ ಸಹಕಾರಿ ಸಂಘಗಳ ದುರ್ಬಳಕೆ ಮಾಡಿಕೊಂಡಿದ್ದೇನೆ ಎಂದು ಆರೋಪಿಸುತ್ತಾರೆ. ಡಿಸಿಸಿ ಬ್ಯಾಂಕ್ ಮೂಲಕ ತಾಲೂಕಿಗೆ . 122 ಕೋಟಿ ಸಾಲ ಮನ್ನಾ ಮಾಡಿಸಿದ್ದೇನೆ. ಕೇವಲ 25 ಡೈರಿಗಳಿದ್ದ ಹುಣಸೂರಿನಲ್ಲಿ ಇಂದು 205 ಡೈರಿ ಸ್ಥಾಪಿಸಲಾಗಿದೆ. 15 ಸೊಸೈಟಿಗಳಿಗೆ ಒಟ್ಟು . 2.5 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ನಿಮ್ಮ 15 ವರ್ಷದ ಅವಧಿಯಲ್ಲಿ ನೀವು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದರು.
ಕೋಡಿ ಪಾಪಣ್ಣ ಶಾಸಕರಾಗಿದ್ದ ವೇಳೆ ಆಶ್ರಯ ಯೋಜನೆಯಡಿ 870 ಫಲಾನುಭವಿಗಳಿಗೆ ನೀಡಿದ್ದ ನಿವೇಶನಗಳ ಹಂಚಿಕೆ ನಿಮ್ಮಿಂದ ಆಗಿಲ್ಲ. ಜಿ.ಟಿ. ದೇವೇಗೌಡರು ಕಾವೇರಿ ಕುಡಿಯುವ ನೀರು, ವಿದ್ಯುತ್ ಉಪಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕಾಲೇಜುಗಳನ್ನು ತಂದರು. ನೀವೇನು ನೀಡಿದ್ದೀರಿ? ನಿಮ್ಮ ಸರ್ಕಾರ ಇತ್ತಲ್ಲ. ಆಗಲಾದರೂ ಅಭಿವೃದ್ದಿ ಮಾಡಬಹುದಿತ್ತಲ್ಲ? ನಾವು ಸಣ್ಣಪುಟ್ಟಸಮುದಾಯಗಳನ್ನು ತುಳಿಯುತ್ತೇವೆ ಎಂದಾದರೆ ನೀವು ಎಷ್ಟುಸಮಾಜದ ನಾಯಕರನ್ನು ಹುಟ್ಟುಹಾಕಿದ್ದೀರಿ ಎಂದು ಉತ್ತರಿಸಿ ಎಂದು ಕುಟುಕಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ತಾಲೂಕು ಹಂಗಾಮಿ ಅಧ್ಯಕ್ಷ ದೇವರಾಜ ಒಡೆಯರ್, ಮುಖಂಡರಾದ ಸಿ.ಟಿ. ರಾಜಣ್ಣ, ಹಜರತ್ ಜಾನ್, ಫಜಲ್ ಅಹಮದ್, ರಂಜಿತಾ ಚಿಕ್ಕಮಾದು, ಹಬ್ಬನಕುಪ್ಪೆ ಜಯರಾಂ, ಗಣೇಶ್ ಗೌಡ, ಕಟ್ಟನಾಯಕ, ಬಸವಲಿಂಗಯ್ಯ, ವರದರಾಜು, ರಾಣಿ ಪೆರುಮಾಳ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಇದ್ದರು.
ಹರೀಶ್‌ಗೌಡರ ಹೆಸರಿನಲ್ಲಿ ಮೂಡಿಬಂದಿರುವ ಹಾಡಿನ ಸಿಡಿ ಬಿಡುಗಡೆ ಮಾಡಲಾಯಿತು.
ದೇಣಿಗೆ ಸುರಿಮಳೆ
ಸಭೆಯಲ್ಲಿ ತಾಲೂಕು ವೀರಶೈವ ಸಮಾಜದ ಮುಖಂಡರು ಹರವೆ ಶ್ರೀಧರ್ ನೇತೃತ್ವದಲ್ಲಿ ಚುನಾವಣಾ ವೆಚ್ಚಕ್ಕಾಗಿ . 25 ಲಕ್ಷ ನಗದು ಮತ್ತು ಮಹದೇವಪುರ ಮಂಜು . 30 ಲಕ್ಷ ಚೆಕ್ ಅನ್ನು ಹರೀಶ್‌ಗೌಡರಿಗೆ ಹಸ್ತಾಂತರಿಸಿದರು. ಈ ಹಿಂದೆ ಕಾಡನಕೊಪ್ಪಲಿನಲ್ಲಿ ಗ್ರಾಮಸ್ಥರು . 10 ಲಕ್ಷ ದೇಣಿಗೆ ನೀಡಿದ್ದರು.
ಲವ್ ಮಾಡಿ ಮದುವೆಯಾದರೆ ಮತ ನೀಡಬೇಕಾ?
ಜಿ.ಟಿ.ದೇವೇಗೌಡ ಮಾತನಾಡುತ್ತಾ, ಪರಿಶಿಷ್ಟಜಾತಿಯ ಹೆಣ್ಣು ಮಗಳನ್ನು ಮದುವೆಯಾದರೆ ಎಸ್ಸಿಗಳೆಲ್ಲಾ ವೋಟ್ ಮಾಡಬೇಕಂತೆ, ಇದೀಗ ಪುತ್ರ ಒಕ್ಕಲಿಗ ಹೆಣ್ಣು ಮಗಳನ್ನು ಮದುವೆಯಾಗುತ್ತಾರಂತೆ. ಅದಕ್ಕೆ ಒಕ್ಕಲಿಗರೆಲ್ಲಾ ವೋಟ್ ಮಾಡಬೇಕಂತೆ. ಇದು ಯಾವ ರಾಜಕಾರಣ ಸ್ವಾಮಿ ಎಂದು ಪರೋಕ್ಷವಾಗಿ ಶಾಸಕ ಮಂಜುನಾಥ್‌ರಿಗೆ ಕುಟುಕಿದಾಗ ಸಭಿಕರು ಹೋ ಎಂದು ಕೂಗಿ ನಗೆಗಡಲಲ್ಲಿ ತೇಲಿದರು.
ಕೇಸ್ ದಾಖಲಿಸುವುದು ನಿಮ್ಮ ರಕ್ತದಲ್ಲೇ ಬಂದಿದೆ
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ. ವಿನಾಕಾರಣ ಎಲ್ಲರ ಮೇಲೂ ಕೇಸ್ ದಾಖಲಿಸಿದ್ದೇ ನಿಮ್ಮ ಸಾಧನೆ. ಅದು ನಿಮ್ಮ ರಕ್ತದಲ್ಲೇ ಬಂದಿದೆ. ಇನ್ನು ಮುಂದೆ ಇದು ನಡೆಯೊಲ್ಲ. ಪಕ್ಷದ ಕಾರ್ಯಕರ್ತರನ್ನು ತೊಂದರೆಗೊಳಪಡಿಸಿದರೆ ಕಾನೂನಾತ್ಮಕ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಜಿ.ಡಿ. ಹರೀಶ್‌ಗೌಡ ಶಾಸಕ ಮಂಜುನಾಥ್‌ರನ್ನು ಎಚ್ಚರಿಸಿದರು.