Tumakur : ರೈತರ ಧರಣಿಗೆ ವಕೀಲರ ಬೆಂಬಲ

By Kannadaprabha News  |  First Published Mar 6, 2023, 5:41 AM IST

ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿರುವುದರಿಂದ ಹಾಗೂ ಬೆಂಬಲ ಬೆಲೆಯನ್ನೂ ಹೆಚ್ಚಿಸದಿರುವುದರಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ತಾಲೂಕು ವಕೀಲರ ಸಂಘವು ಬೆಂಬಲ ಸೂಚಿಸಿದೆ.


  ತಿಪಟೂರು :  ಕೊಬ್ಬರಿ ಬೆಲೆ ತುಂಬಾ ಕಡಿಮೆಯಾಗಿರುವುದರಿಂದ ಹಾಗೂ ಬೆಂಬಲ ಬೆಲೆಯನ್ನೂ ಹೆಚ್ಚಿಸದಿರುವುದರಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ತಾಲೂಕು ವಕೀಲರ ಸಂಘವು ಬೆಂಬಲ ಸೂಚಿಸಿದೆ.

ಧರಣಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಉಮೇಶ್‌ ಮಾತನಾಡಿ, ಕೊಬ್ಬರಿಗೆ ಲಾಭದಾಯಕ ಬೆಂಬಲ ಬೆಲೆ ನೀಡುವಂತೆ ವಿವಿಧ ಭಾಗಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೆ ರೈತರ ಕಷ್ಟಕ್ಕೆ ಸ್ಪಂದಿಸಿ ಅವರ ಬೇಡಿಕೆಯನ್ನು ಈಡೇರಿಸಬೇಕು. ಬೆಂಬಲ ಬೆಲೆಗಾಗಿ 2 ವಾರಗಳಿಂದ ಈ ಭಾಗದ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು.

Tap to resize

Latest Videos

ವಕೀಲರ ಸಂಘದ ಕಾರ್ಯದರ್ಶಿ ನಟರಾಜು ಮಾತನಾಡಿ, ಸಾಲಸೂಲ ಮಾಡಿ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಬೆಲೆಗಾಗಿ ಬೀದಿಯಲ್ಲಿ ಹೋರಾಟ ಮಾಡುವಂತಹ ಸ್ಥಿತಿ ರೈತರಿಗೆ ಬಂದಿದೆ. ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಹೇಳುವ ರಾಜಕಾರಣಿಗಳು ರೈತರ ಬೆನ್ನಿಗೆ ನಿಂತು ಬೆಂಬಲ ಬೆಲೆ ನೀಡದಿರುವುದು ದುರದೃಷ್ಟಕರ ಸಂಗತಿ. ಸರ್ಕಾರ ರೈತಪರವಾಗಿ ಕೆಲಸ ಮಾಡಬೇಕು. ಕೊಬ್ಬರಿಗೆ ಬೆಂಬಲ ಬೆಲೆ ನೀಡಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದರು.

ಧರಣಿಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಅಜಯ್‌, ಹಿರಿಯ ವಕೀಲರಾದ ಬಸವರಾಜು, ವಕೀಲರಾದ ವಿದ್ಯಾಶಂಕರ್‌, ನಂದೀಶ್‌, ಪ್ರಶಾಂತ್‌, ಶೋಭಾದೇವಿ, ಉಮಾದೇವಿ, ಚಂದ್ರಕಲಾ, ಕೃಷ್ಣೇಗೌಡ್ರು, ಮಡೇನೂರು ಬಸಪ್ಪ ಸೇರಿದಂತೆ ಎಲ್ಲಾ ವಕೀಲರು ಹಾಗೂ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ, ಪೊ›. ಟಿ.ಬಿ. ಜಯಾನಂದಯ್ಯ, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ತಾಲೂಕು ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಸಹ ಕಾರ್ಯದರ್ಶಿ ಸಿದ್ದಯ್ಯ, ರೈತ ಮುಖಂಡರಾದ ಮನೋಹರ ಪಟೇಲ್‌, ದೇವರಾಜು ತಿಮ್ಲಾಪುರ, ಆರ್‌ಕೆಎಸ್‌ನ ಲೋಕೇಶ್‌ ಭೈರನಾಯ್ಕನಹಳ್ಳಿ ಮತ್ತಿತರರಿದ್ದರು. 

ದಿನನಿತ್ಯ ಕುಸಿಯುತ್ತಿರುವ ಬೆಲೆ

  ತಿಪಟೂರು:  ದೇಶದಲ್ಲೇ ಕೊಬ್ಬರಿ ನಗರ ಎಂದೇ ಪ್ರಸಿದ್ಧವಾಗಿರುವ ತಿಪಟೂರಿನ ವಿಶ್ವವಿಖ್ಯಾತ ಕೊಬ್ಬರಿ ಮಾರುಕಟ್ಟೆಯಲ್ಲಿ, ಕಳೆದ ವರ್ಷ ಕ್ವಿಂಟಲ್‌ಗೆ ರು.18 ಸಾವಿರದವರೆಗೆ ಇದ್ದ ಕೊಬ್ಬರಿಯ ಬೆಲೆ, ಕಳೆದ ಶನಿವಾರ ಕನಿಷ್ಠ ರು. 10200ಕ್ಕೆ ಕುಸಿಯುವ ಮೂಲಕ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ತೀವ್ರ ಕುಸಿತವಾಗಿರುವುದು ಇಲ್ಲಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟು ಮಾಡಿದೆ

2022ರ ಜನವರಿಯಿಂದ ಇಲ್ಲಿಯವರೆಗೂ ಹಲವು ಏಳು ಬೀಳುಗಳ ನಡುವೆಯೂ ಕ್ವಿಂಟಲ್‌  ಬೆಲೆ ರು.18ಸಾವಿರವರೆಗೂ ಇದ್ದು, ಬೆಳೆಗಾರರಲ್ಲಿ ಒಂದು ರೀತಿಯ ನೆಮ್ಮದಿ ತಂದಿತ್ತು. ಕಳೆದ 4-5ತಿಂಗಳುಗಳಿಂದ ಕೊಬ್ಬರಿ ಬೆಲೆ ಇಳಿಮುಖವಾಗುತ್ತಲೇ ಕ್ವಿಂಟಲ್‌ಗೆ ರು.13 ಸಾವಿರದ ಆಸುಪಾಸಿನಲ್ಲಿತ್ತು. ಆದರೆ ಇತ್ತೀಚಿನ ಒಂದೆರಡು ತಿಂಗಳುಗಳಿಂದ ಕೊಬ್ಬರಿ ಬೆಲೆ ಕುಸಿಯುತ್ತಲೇ ಜ.21ರ ಶನಿವಾರದ ಹರಾಜು ಯಲ್ಲಿ ಕನಿಷ್ಠ ದರ 10200ಕ್ಕೆ ಕುಸಿತ ಕಂಡಿದ್ದು ಮುಂದಿನ ಬುಧವಾರದ ಹರಾಜಿನಲ್ಲಿ ಬೆಲೆ ಮತ್ತಷ್ಟುಕಡಿಮೆಯಾಗಲಿದೆ ಎಂಬ ಭಯದಲ್ಲಿ ವರ್ತಕರು ಹಾಗೂ ತೆಂಗು ಬೆಳೆಗಾರರು ತೀವ್ರ ಆತಂಕದಲ್ಲಿರುವುದು ಕಂಡು ಬರುತ್ತಿದೆ.

ಈಗಿನ ತೋಟಗಾರಿಕಾ ಕೃಷಿಯ ವೆಚ್ಚ ದುಬಾರಿಯಾಗಿದ್ದು, ಒಂದು ಕ್ವಿಂಟಲ್‌ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ ರು. 16 ಸಾವಿರ ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಲ್‌ ಕೊಬ್ಬರಿಗೆ ರು. 18ಸಾವಿರವಾದರೂ ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ಕಟ್ಟಿಕೊಳ್ಳಬಹುದಾಗಿದೆ. ಆದರೆ ಪ್ರಸ್ತುತ 10 ಸಾವಿರ ಆಸುಪಾಸಿನಲ್ಲಿ ಕೊಬ್ಬರಿ ಬೆಲೆ ಇದ್ದು ಬೆಳೆಗಾರರು ತೀವ್ರ ನಷ್ಟಅನುಭವಿಸುವಂತಾಗಿದೆ. ತೆಂಗು ಬೆಳೆಗಾರರಿಗೆ ತೋಟಗಾರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಮುಖವಾಗಿ ಬೆಳೆಯ ತಾಂತ್ರಿಕತೆ ಹಾಗೂ ಮಾರುಕಟ್ಟೆಯ ದಿಢೀರ್‌ ಕುಸಿತ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ಕಪ್ಪುತಲೆ ಹುಳುರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡಕೊರಕ ಇತ್ಯಾದಿ ರೋಗಗಳ ಜೊತೆ ಜೊತೆಗೆ ತೋಟಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲೂ ಸಹ ಬೆಲೆ ಕುಸಿತ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ.

18ಸಾವಿರಕ್ಕೆ ಬೆಂಬಲ ಬೆಲೆ ನಿಗದಿಯಾಗಲಿ:

ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಯನ್ನು ರು.11 ಸಾವಿರಕ್ಕೆ ಈ ಹಿಂದೆ ನಿಗದಿಪಡಿಸಿದ್ದು ಕಳೆದ 15 ದಿನಗಳ ಹಿಂದೆ ಇದನ್ನು ರು. 11,750 ಏರಿಸಿದ್ದರೂ ಇದು ಸರ್ಕಾರಿ ಆದೇಶವಾಗಿ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ. ಕೊಬ್ಬರಿಯ ವೈಜ್ಞಾನಿಕ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ರು. 18 ಸಾವಿರಕ್ಕಾದರೂ ಏರಿಸಬೇಕೆಂದು ಬೆಳೆಗಾರರ, ಪ್ರತಿಪಕ್ಷದ ರಾಜಕಾರಣಿಗಳ ಸಾಕಷ್ಟುಹೋರಾಟಗಳು, ಒತ್ತಾಯಗಳು ಸರ್ಕಾರಕ್ಕೆ ಮುಟ್ಟಿದ್ದರಿಂದ ಸರ್ಕಾರ ಕ್ವಿಂಟಲ್‌ಗೆ ಕೇವಲ ರು. 750 ಮಾತ್ರ ಏರಿಸಿ ಪ್ರಚಾರ ಪಡೆದಿದ್ದು ಬಿಟ್ಟರೆ, ಕೂಡಲೆ ಜಾರಿಗೆ ಬರುವಂತೆ ಆದೇಶಿಸದಿರುವುದು ಸರ್ಕಾರದ ನಿರ್ಲಕ್ಷ ಧೋರಣೆಗೆ ಸಾಕ್ಷಿಯಾಗಿದೆ.

click me!