ಶಿವಮೊಗ್ಗ (ಜು.04): ಮನೆಯ ಬೀಗ ಒಡೆದು ಕಳವು ಮಾಡಿದ್ದ ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆಯ ಬೀಗ ಒಡೆದು ಕಳವು ಮಾಡಿದ್ದ ಸೊರಬ ತಾಲೂಕಿನ ಛತ್ರದಹಳ್ಳಿ ಗ್ರಾಮದ ಚಂದ್ರಪ್ಪ ಗಣೇಶಪ್ಪ ( 30 ) ಎಂಬ ಆರೋಪಿಯನ್ನು ಇಂದು ಸೊರಬ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತೈಲ ಬೆಲೆ ದುಬಾರಿ ಆಗ್ತಿದ್ದಂತೆ ಬಂಕ್‌ಗೇ ಕನ್ನ: 4.50 ಲಕ್ಷದ ಪೆಟ್ರೋಲ್ ಕಳವು..! .
ಜೂನ್ 29 ರಂದು ಗ್ರಾಮದ ರಮೇಶ್ ಕುಟುಂಬ ಸಮೇತ ಆರಿದ್ರಾ ಮಳೆ ಹಬ್ಬಕ್ಕೆಂದು ನೆರೆಯ ಗ್ರಾಮಕ್ಕೆ ತೆರಳಿದ್ದರು.
ಈ ಬಗ್ಗೆ ಮಾಹಿತಿ ಹೊಂದಿದ್ದ ಚಂದ್ರಪ್ಪ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು , ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದ.
ಕಳ್ಳತನವಾಗಿರುವ ಕುರಿತು ಮನೆ ಮಾಲೀಕ ರಮೇಶ್ ಸೊರಬ ಪೊಲೀಸರಿಗೆ ದೂರು ಸಲ್ಲಿಸಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿ ಚಂದ್ರಪ್ಪ ಒಮ್ಮೆಗೆ ಸ್ವಸಹಾಯ ಸಂಘದ ಸಾಲ 60 ಸಾವಿರ ರು. ತೀರಿಸಿರುವುದು ಬೆಳಕಿಗೆ ಬಂದಿತ್ತು .
ಕೆಲಸ ಮಾಡದೆ ಅಡ್ಡಾಡಿಕೊಂಡಿದ್ದ ಈತ ಹೇಗೆ ಸಾಲ ತೀರಿಸಿದ ಎಂಬ ಬಗ್ಗೆ ವಿಚಾರಣೆ ನಡೆಸಿದ್ದು ಈ ವೇಳೆ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಬಳಿಕ ಆರೋಪಿಯಿಂದ 10 ಗ್ರಾಂ ತೂಕದ ಚೈನ್ , 8 ಗ್ರಾಂ ಎರಡು ಕೆನ್ನೆ ಸರಪಳಿ , 6 ಗ್ರಾಂ ತೂಕದ ಉಂಗುರ ಹಾಗೂ 2 ಗ್ರಾಂ ತೂಕದ ಒಂದು ಬಟನ್ ಸೇರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅಂದಾಜು 92 ಸಾವಿರ ರೂ . ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.