ಆಯುರ್ವೇದ ಔಷಧದಿಂದ ದೇಹಕ್ಕೆ ಅಡ್ಡಪರಿಣಾಮವಿಲ್ಲ; ಸಚಿವ ಸಿ.ಟಿ. ರವಿ

By Kannadaprabha News  |  First Published Jun 16, 2020, 11:00 AM IST

ಹೋಮಿಯೋಪತಿ ಔಷಧಗಳನ್ನು ಬಳಸುವುದರಿಂದ ಯಾವುದೇ ರೀತಿ ಅಡ್ಡಪರಿಣಾಮಗಳು ಬೀರುವುದಿಲ್ಲ. ಬದಲಿಗೆ ನಿಧಾನವಾಗಿ ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸಿ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಕಾರಿಯಾಗಲಿದೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚಿಕ್ಕಮಗಳೂರು(ಜೂ.16): ಆಯುರ್ವೇದ ಔಷಧದಿಂದ ಮಾನವನ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿ ಕೆಲ ರೋಗಗಳಿಂದ ಮುಕ್ತರಾಗಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.

ಸೋಮವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯುಷ್‌ ನಿರ್ದೇಶನಾಲಯ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಕೊರೋನಾ ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯೋಜಿಸಿದ್ದ ಆಯುಷ್‌ ಔಷಧ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

ಹೋಮಿಯೋಪತಿ ಔಷಧಗಳನ್ನು ಬಳಸುವುದರಿಂದ ಯಾವುದೇ ರೀತಿ ಅಡ್ಡಪರಿಣಾಮಗಳು ಬೀರುವುದಿಲ್ಲ. ಬದಲಿಗೆ ನಿಧಾನವಾಗಿ ದೇಹದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸಿ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಕಾರಿಯಾಗಲಿದೆ. ಔಷಧಿಯೇ ಆಹಾರವಲ್ಲ, ಆದರೆ ಆಹಾರದಲ್ಲಿ ಔಷಧಿ ಇರಲಿದ್ದು, ನಾವೂ ದಿನ ನಿತ್ಯ ಬಳಸುವ ಆಹಾರ ಬದಲಿಸಿ ವ್ಯವಸ್ಥಿತ ಆಗಿರುವುದರ ಜೊತೆಗೆ ಆಯುರ್ವೇದ ಔಷಧಿಗಳನ್ನು ಬಳಸುವುದರಿಂದ ಆಂತರಿಕ ಬಲ ವೃದ್ಧಿ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ದೊರಕುವ ಆಯುರ್ವೇದ ಔಷಧಗಳನ್ನು ಬಳಸುವುದರಲ್ಲಿ ನಮ್ಮವರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಭಯಬೇಡ. ಇವುಗಳಿಂದ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರಾಜ್ಯಾದ್ಯಂತ ಏಕದರ ನಿಗದಿ

ಪ್ರಧಾನಮಂತ್ರಿ ಮೋದಿ ‘ಆತ್ಮ ನಿರ್ಭರ್‌’ ಯೋಜನೆಯಡಿ ಪ್ರತಿಯೊಬ್ಬರು ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದ್ದಾರೆ. ಆದ್ದರಿಂದಾಗಿ ಈ ಆಯುರ್ವೇದ ಔಷಧಗಳನ್ನು ಬಳಸುವುದರಿಂದಾಗಿ ನಮ್ಮ ಪೂರ್ವಜರು ಕಾಪಾಡಿಕೊಂಡಂತಹ ಆರೋಗ್ಯಕರವಾದ ಸುಖಿಕರ ಬದುಕನ್ನು ಕಟ್ಟಿಕೊಳ್ಳಬಹುದು. ಕೋವಿಡ್‌-19 ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಗಲಿರುಳು ಕಾರ್ಯನಿರ್ವಹಿಸಿದ ಕೊರೋನಾ ವಾರಿಯರ್ಸ್‌ಗಳಿಗೆ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಆಯುಷ್‌ ಔಷಧಿಗಳನ್ನು ವಿತರಿಸಲಾಗುತ್ತಿದೆ. ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಜನರಿಗೂ ಈ ಔಷಧಿ ವಿತರಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈವರೆಗೆ ಇದ್ದ ಎಲ್ಲ ಪಾಸಿಟಿವ್‌ ಪ್ರಕರಣಗಳವರೂ ಗುಣಮುಖರಾಗಿದ್ದಾರೆ. ಓರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಪಾಸಿಟಿವ್‌ ಪ್ರಕರಣವನ್ನು ಹೆಚ್ಚಿನ ತಪಾಸಣೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಪ್ರಾರಂಭದ ಹಂತದಲ್ಲಿ ಲಾಕ್‌ಡೌನ್‌ ಮಾಡಿದ್ದರಿಂದ ಪಾಸಿಟಿವ್‌ ಪ್ರಕರಣಗಳು ಕಡಿಮೆ ಇದೆ ಹಾಗೂ ಸಾವಿನ ಸಂಖ್ಯೆಗಳು ಕೂಡ ಬೇರೆ ದೇಶಗಳಿಗಿಂತ ಹೋಲಿಸಿದ್ದಲ್ಲಿ ಸಾಕಷ್ಟುಕಡಿಮೆ ಇದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಅನೇಕ ಸುರಕ್ಷತಾ ಕ್ರಮಗಳಿಂದ ಕೊರೋನಾ ಸೋಂಕು ಪಾಸಿಟಿವ್‌ ಪ್ರಕರಣಗಳು ಕಡಿಮೆ. ಸ್ವದೇಶಿ ಆಯುರ್ವೇದ ಔಷಧಿಗಳನ್ನು ಬಳಸುವುದರಿಂದಾಗಿ ದೇಹದಲ್ಲಿ ಸೋಂಕು ತಡೆಗಟ್ಟುವ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಿ ಸುರಕ್ಷಿತವಾಗಿರಲು ಸಹಕಾರಿ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಆಯುಷ್‌ ಇಲಾಖೆಯಿಂದ ಪೌರ ಕಾರ್ಮಿಕರಿಗೆ ಹಾಗೂ ಕೊರೋನಾ ವಾರಿಯರ್‌ಗಳಿಗೆ ಆಯುಷ್‌ ಔಷಧಿಗಳನ್ನು ಪರಿಚಯಿಸುವ ಕಾರ್ಯವಾಗುತ್ತಿದೆ, ಮನೆಯ ಮದ್ದು ಹಾಗೂ ಯೋಗದ ಬಗ್ಗೆ ತಿಳಿಸಲು ಸಹಕಾರಿಯಾಗುತ್ತಿದೆ. ಮುಂದಿನ 3 ತಿಂಗಳು ಮಳೆಗಾಲ ಆಗಿರುವುದರಿಂದಾಗಿ ಸೋಂಕನ್ನು ಎದುರಿಸುವುದು ಸವಾಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಹೇಳಿದಂತೆ ಜೀವ ಉಳಿದರೆ ಜೀವನ ನಡೆಸಬಹುದು. ಹಾಗಾಗಿ ಜೀವದ ಉಳಿಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ನಂತರದಲ್ಲಿ ಆರ್ಥಿಕತೆಯ ಬಗ್ಗೆ ಚಿಂತಿಸಬೇಕು. ಜೀವದ ಉಳಿವಿಗೆ ಸ್ವದೇಶಿ ಆಯುರ್ವೇದ ಔಷಧಗಳನ್ನು ಬಳಸಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಂಡೆ, ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಎಸ್‌.ಗೀತಾ, ಮೈಸೂರು ವಿಭಾಗದ ನೋಡಲ್‌ ಅಧಿಕಾರಿ ಡಾ. ವಿರುಪಾಕ್ಷಪ್ಪ ಉಪಸ್ಥಿತರಿದ್ದರು.
 

click me!