ಚಿಕ್ಕಮಗಳೂರಿನಲ್ಲಿ ರೈತರಿಗೆ ಉತ್ತಮ ಧಾರಣೆ ಸಿಗಬೇಕು ಹಾಗೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಹಣ್ಣು ತರಕಾರಿಗಳು ದೊರೆಯುವಂತಾಗಬೇಕು. ಈ ಸದುದ್ದೇಶದಿಂದ ಹಾಪ್ ಕಾಮ್ಸ್ ಮಳಿಗೆ ಪ್ರಾರಂಭಿಸಲಾಗಿದೆ ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನರಸಿಂಹರಾಜಪುರ(ಜೂ.16): ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ರಾಜ್ಯಾದ್ಯಂತ ಒಂದೇ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ತರಕಾರಿ ಕೊಳ್ಳುವ ಗ್ರಾಹಕರು ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್. ಸದಾಶಿವ ಹೇಳಿದರು.
ಪಟ್ಟಣ ತರಕಾರಿ ಮಾರುಕಟ್ಟೆಯ ಮೇಲ್ಭಾಗದ ಪಟ್ಟಣ ಪಂಚಾಯಿತಿ ಮಳಿಗೆಯಲ್ಲಿ ಸೋಮವಾರ ಹಾಪ್‌ಕಾಮ್ಸ್ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಉತ್ತಮ ಧಾರಣೆ ಸಿಗಬೇಕು ಹಾಗೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಹಣ್ಣು ತರಕಾರಿಗಳು ದೊರೆಯುವಂತಾಗಬೇಕು. ಈ ಸದುದ್ದೇಶದಿಂದ ಹಾಪ್ ಕಾಮ್ಸ್ ಮಳಿಗೆ ಪ್ರಾರಂಭಿಸಲಾಗಿದೆ. ಈಗಾಗಲೇ ಜಿಲ್ಲೆಯ 5 ತಾಲೂಕುಗಳಲ್ಲಿ ಹಾಪ್ ಕಾಮ್ಸ್ ಶಾಖೆ ಪ್ರಾರಂಭಿಸಲಾಗಿದೆ. ಸಾವಯವ ಗೊಬ್ಬರದಿಂದ ಬೆಳೆದ ತರಕಾರಿಗಳನ್ನು ಮಾತ್ರ ಖರೀದಿಸಲಾಗುತ್ತದೆ. ಕೊರೋನಾ ಸಂಕಷ್ಟದಲ್ಲಿ ಕೆಲವು ತರಕಾರಿ, ಹಣ್ಣಿನ ಅಂಗಡಿಗಳವರು ದುಪ್ಪಟ್ಟು ದರಗಳಿಗೆ ಹಣ್ಣು- ತರಕಾರಿ ಮಾರಾಟ ಮಾಡುತ್ತಿದ್ದರು ಎಂದರು.
ತಾ.ಪಂ. ಅಧ್ಯಕ್ಷೆ ಈ.ಸಿ. ಜಯಶ್ರೀ ಮೋಹನ ಹಾಪ್ ಕಾಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿ, ಹಾಪ್‌ಕಾಮ್ಸ್ ಸಂಸ್ಥೆ ಹಣ್ಣು ಮತ್ತು ತರಕಾರಿ ಖರೀದಿ ಮತ್ತು ಮಾರಾಟ ಮಳಿಗೆ ಪ್ರಾರಂಭ ಸಂತಸ ತಂದಿದೆ. ಇದರಿಂದ ರೈತರು ಬೆಳೆದ ಹಣ್ಣು, ತರಕಾರಿಗಳಿಗೆ ಉತ್ತಮ ಬೆಲೆ ದೊರಕುವುದು. ಅಲ್ಲದೆ, ಗ್ರಾಹಕರಿಗೂ ಎಪಿಎಂಸಿ ದರದಲ್ಲಿಯೇ ಹಣ್ಣು ಮತ್ತು ತರಕಾರಿಗಳು ದೊರಕಲಿವೆ ಎಂದರು.
ಹಾಪ್‌ಕಾಮ್ಸ್ ನಿರ್ದೇಶಕ ಯಡಗೆರೆ ರವಿ ಮಾತನಾಡಿ, ಕಳೆದ ಬಾರಿ ಸಾಮಾನ್ಯ ಸಭೆಯಲ್ಲಿ ಹಾಪ್‌ಕಾಮ್ಸ್ ಮುಚ್ಚುವ ಭೀತಿ ಎದುರಾಗಿತ್ತು. ಆ ಸಂದರ್ಭ ರೈತರು ಧೈರ್ಯ ಮೂಡಿಸಿದ್ದರು. ಜನಪ್ರತಿನಿಧಿಗಳು ಕೆಎಚ್‌ಎಫ್ ಸಾಲ ನೀಡುವ ಭರವಸೆ ನೀಡಿದ್ದಾರೆ. ಹಾಪ್‌ಕಾಮ್ಸ್ ಸಂಸ್ಥೆ ಜಿಲ್ಲೆಯಲ್ಲಿ 5ನೇ ವರ್ಷದತ್ತ ಸಾಗುತ್ತಿದೆ. ಒಟ್ಟು 125 ಸದಸ್ಯರಿದ್ದಾರೆ. ಈ ಮಳಿಗೆಯಲ್ಲಿ ಪ್ರತಿನಿತ್ಯ ಎಪಿಎಂಸಿ ನಿಗದಿಪಡಿಸಿದ ದರದಲ್ಲಿಯೇ ವ್ಯಾಪಾರ ಮಾಡಲಾಗುತ್ತದೆ. ಹಾಗೆಯೇ, ರೈತರಿಂದ ಹಣ್ಣು, ತರಕಾರಿಗಳನ್ನು ಖರೀದಿಸಲಾಗುತ್ತದೆ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ. ಅಂಶುಮಂತ್, ಪ.ಪಂ. ಸದಸ್ಯ ಪ್ರಶಾಂತ್ ಎಲ್. ಶೆಟ್ಟಿ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ವೈ.ಎಸ್. ರವಿ, ಸೀತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಪಿ. ರವಿ, ಪ.ಪಂ. ಮುಖ್ಯಾಧಿಕಾರಿ ಕುರಿಯಕೋಸ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಯದೇವ, ಪ್ರಗತಿಪರ ಕೃಷಿಕ ಜಾನಕಿರಾಂ, ಕಾಂಗ್ರೆಸ್ ಮುಖಂಡ ಕೆ.ಎ. ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.