ಶಿಕ್ಷಣಕ್ಕೆ ನೀಡುವ ಕೊಡುಗೆ ದೇಶಕ್ಕೆ ನೀಡುವ ಕಾಣಿಕೆಯಾಗಿದೆ. ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸಲು ಪೋಷಕರು ಶಿಕ್ಷಣ ಮಾತ್ರವಲ್ಲದೇ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ತೀರ್ಥಹಳ್ಳಿ (ಜ.08): ಶಿಕ್ಷಣಕ್ಕೆ ನೀಡುವ ಕೊಡುಗೆ ದೇಶಕ್ಕೆ ನೀಡುವ ಕಾಣಿಕೆಯಾಗಿದೆ. ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸಲು ಪೋಷಕರು ಶಿಕ್ಷಣ ಮಾತ್ರವಲ್ಲದೇ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಭಾನುವಾರ ಜರುಗಿದ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದ ದಶಮಾನೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿ, ಎಲ್ಲ ಸಮುದಾಯದ ಪ್ರತಿಭಾವಂತರನ್ನು ಗುರುತಿಸಿ, ಗೌರವಿಸಿರುವ ಇಲ್ಲಿನ ಸಂಯುಕ್ತ ಮುಸ್ಲಿಂ ಒಕ್ಕೂಟದ ಕಾರ್ಯ, ಕಾಳಜಿ ಅಭಿನಂದನೀಯ ಎಂದರು.
ಹೃದಯವಂತಿಕೆ, ಮಾನವೀಯತೆ ಕರುಣೆಗೆ ಮಾದರಿ ಆಗಿರುವ ಭಾರತಕ್ಕೆ ಸರಿಸಾಟಿಯಾದ ಬೇರೆ ದೇಶವಿಲ್ಲ. ಭಾರತ ಬಲಿಷ್ಠ ಆಗಬೇಕಾದರೆ ದೇಶದ ಯುವಜನಾಂಗ ಬಲಿಷ್ಠವಾಗಬೇಕು. ಚುನಾವಣೆಗಳಿಂದ ದೇಶವನ್ನು ಬಲಿಷ್ಠಗೊಳಿಸುವುದು ಅಸಾಧ್ಯ. ಶಿಕ್ಷಣಕ್ಕೆ ಮಹತ್ವ ನೀಡುವ ಕಾರ್ಯ ದೇಶಕ್ಕೆ ನೀಡುವ ಕೊಡುಗೆಯಾಗಿದೆ. ಮುಂದಿನ ಚುನಾವಣೆ ಮುಖ್ಯವಾಗದೇ ಮುಂದಿನ ಸಮಾಜ ಮುಖ್ಯ ಎಂಬ ಒನ್ ಪಾಯಿಂಟ್ ಪ್ರೋಗ್ರಾಂ ನಮ್ಮ ಧ್ಯೇಯವಾಕ್ಯ ಆಗಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕರ ಬೇಳೆ ಬೇಯಲ್ಲ : ಶಾಸಕ ಸಿ.ಪುಟ್ಟರಂಗಶೆಟ್ಟಿ
10 ಮೊರಾರ್ಜಿ ಶಾಲೆ ಆರಂಭ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ 10 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ 5ರಂತೆ ಎಲ್‍ಕೆಜಿಯಿಂದ ಪಿಯುಸಿವರೆಗಿನ 300 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. 400 ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ 10 ತಿಂಗಳ ಐಎಎಸ್ ಮತ್ತು ಐಪಿಎಸ್ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ವರ್ಷಕ್ಕೆ 1 ಲಕ್ಷ ಶಿಕ್ಷಕರಿಗೆ ತಜ್ಞರಿಂದ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಕುಡಿಯಲು ರಾಗಿ ಮಿಶ್ರಿತ ಪೌಷ್ಠಕಾಂಶ ಉಳ್ಳ ಹಾಲು ನೀಡಲು ತೀರ್ಮಾನಿಸಲಾಗಿದೆ. ಇಲ್ಲಿನ ಮುಸ್ಲಿಂ ಒಕ್ಕೂಟ ಜಾತಿಧರ್ಮದ ಭೇದವಿಲ್ಲದೇ, ಎಲ್ಲ ಸಮುದಾಯದ ಪ್ರತಿಭಾವಂತರನ್ನು ಗುರುತಿಸಿರುವುದು ಪ್ರಶಂಸನೀಯ ಎಂದರು. ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮದ್ ಖಾನ್, ಸೌಹಾರ್ದತೆಯ ಭಾವನೆ ಭಾರತೀಯರ ರಕ್ತದಲ್ಲೇ ಬಂದಿದೆ. ಸಮಾಜವಾದಿ ಚಿಂತನೆಗೆ ಸ್ಫೂರ್ತಿ ನೀಡಿದ ಶಾಂತವೇರಿ ಗೋಪಾಲಗೌಡ, ಸಾಹಿತ್ಯ ಕ್ಷೇತ್ರದ ದಿಗ್ಗಜ ಕುವೆಂಪು ಜನಿಸಿದ ಈ ನೆಲದ ಸಂಸ್ಕೃತಿ ಅನುಕರಣೀಯ. ಎಲ್ಲ ಸಮುದಾಯದವರನ್ನು ಬೆಸೆಯುವಂತಹ ಇಂದಿನ ಈ ಕಾರ್ಯಕ್ರಮ ಅನುಕರಣೀಯವಾಗಿದೆ ಎಂದರು.
ಸಾಗರ ಕ್ಷೇತ್ರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಾತಿಧರ್ಮದ ಭೇದವೆಣಿಸದೇ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಬೇಕಿದೆ. ಒಬ್ಬ ಕಿಡಿಗೇಡಿ ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ. ಏರ್ ಪೋರ್ಟಿಗೆ ಬಾಂಬ್ ಹಾಕುವ ಯತ್ನದ ಬಗ್ಗೆ ಮಾತನಾಡದೇ ಕಿಡಿಗೇಡಿಯೊಬ್ಬ ಮಾಡಿದ ಕೃತ್ಯವನ್ನು ಉದಾಹರಣೆಯಾಗಿ ಸಮುದಾಯವನ್ನು ದೇಶದ್ರೋಹಿಗಳಂತೆ ಬಿಂಬಿಸುವುದು ಯಾವ ನ್ಯಾಯ ಎಂದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಘಟನೆಯನ್ನು ಉದಾಹರಿಸಿ ಹೇಳಿ, ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಕಡ್ಡಾಯವಾಗಿ ಅವರಿಗೆ ಶಿಕ್ಷಣ ಕೊಡಿಸಬೇಕು ಎಂದೂ ಆಗ್ರಹಿಸಿದರು.
ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಾತನಾಡಿ, ₹52 ಸಾವಿರ ಕೋಟಿ ವೆಚ್ಚದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಟೀಕಿಸುವವರು ಕೆಲವೇ ಉದ್ಯಮಿಗಳ ₹12 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದನ್ನು ಪ್ರಶ್ನೆ ಮಾಡುತ್ತಿಲ್ಲ. ಪ್ರಸ್ತುತ ದೇಶದ ಆರ್ಥಿಕ ನೀತಿ ಬಡವರ ವಿರುದ್ಧ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾತಿಧರ್ಮದ ಆಧಾರದಲ್ಲಿ ಜಾರಿಗೆ ತಂದಿಲ್ಲ. ಹಸಿದವರ ಸಂಕಷ್ಟ ಅರಿಯದ ಶೇ.90ರಷ್ಟು ಶ್ರೀಮಂತರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ವಿರೋಧ ಇದ್ದಾರೆ. 2018 ರಲ್ಲಿ ಅಧಿಕಾರದಲ್ಲಿದ್ದವರು ಘೋಷಣೆ ಮಾಡಿದ್ದ 605 ಕಾರ್ಯಕ್ರಮಗಳಲ್ಲಿ ಒಂದನ್ನೂ ಜಾರಿ ಮಾಡಿರಲಿಲ್ಲ ಎಂದರು.
ಗೋಹತ್ಯೆ ನಿಷೇಧ ಮಾಡಬೇಕು ಅನ್ನೋರು ಈ ದೇಶದಿಂದ ರಫ್ತಾಗುತ್ತಿರುವ ₹27 ಸಾವಿರ ಕೋಟಿ ಮೊತ್ತದ ಗೋಮಾಂಸದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ? ಗೋಮಾಂಸ ಮಾಡುವುದರಲ್ಲಿ ಭಾರತವೇ ನಂ-1. ವ್ಯಾಪಾರ ಬದುಕಿಗೆ ಸಂಬಂಧಿಸಿದ್ದು. ಇದಕ್ಕೆ ಜಾತಿ-ಧರ್ಮದ ಕಟ್ಟುಪಾಡುಗಳಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮನೋಧರ್ಮ ನಮ್ಮದಾಗಬೇಕು ಎಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಈ ತಾಲೂಕಿನ ಅಭಿವೃದ್ಧಿಯಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಶೈಕ್ಷಣಿಕವಾಗಿಯೂ ಈ ಸಮುದಾಯದ ಮಕ್ಕಳು ಉತ್ತಮ ಸಾಧನೆ ತೋರುತ್ತಿರುವುದು ಗಮನಾರ್ಹ ಎಂದರು.
ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ?: ವಿಜಯೇಂದ್ರ ಹೇಳಿದ್ದೇನು?
ಶಾಸಕ ಆರಗ ಜ್ಞಾನೇಂದ್ರ ಸಭಾ ಕಾರ್ಯಕ್ರಮಕ್ಕೆ ಮುನ್ನ ಆಗಮಿಸಿ, ಶುಭ ಕೋರಿದರು. ಅಧ್ಯಕ್ಷತೆಯನ್ನು ಸಂಯುಕ್ತ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಸುಲೇಮಾನ್ ಸಾಹೇಬ್ ವಹಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸಂಯುಕ್ತ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಇಬ್ರಾಹಿಂ ಷರೀಫ್, ಉಪಾಧ್ಯಕ್ಷ ದಸ್ತಗೀರ್, ಸಂಚಾಲಕ ಡಿ.ಎಸ್.ಅಬ್ದುಲ್ ರಹಮಾನ್ ವೇದಿಕೆಯಲ್ಲಿದ್ದರು.