
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.08): ಜಿಲ್ಲೆಯಲ್ಲಿ 2018 ರಲ್ಲಿ ಹಲವು ಗ್ರಾಮಗಳಲ್ಲಿ ಭೀಕರ ಭೂಕುಸಿತವಾಗಿ ಹತ್ತಾರು ಜನರು ಸಾವನ್ನಪ್ಪಿದ್ದರು. ಅಷ್ಟೇ ಅಲ್ಲ 2019 ರಲ್ಲೂ ಮಡಿಕೇರಿ ತಾಲ್ಲೂಕಿನ ಕೋರಂಗಾಲದಲ್ಲಿ ಭೂಕುಸಿತವಾಗಿ ಮಣ್ಣಿನಡಿ 10 ಜನರು ಸಿಲುಕಿ 5 ಜನರು ಜೀವಂತ ಸಮಾಧಿಯಾಗಿದ್ದರು. ಜೊತೆಗೆ ಉಳಿದ ಐದು ಜನರು ಗಾಯಗೊಂಡಿದ್ದರು. ಅದರಲ್ಲಿ ಒಬ್ಬರಾದ ಲಕ್ಷ್ಮಣ್ ಎಂಬುವರ ಸೊಂಟದ ಮೂಳೆ ಮೂರು ಕಡೆಗಳಲ್ಲಿ ಮುರಿದು ಹೋಗಿತ್ತು. ಹೀಗಾಗಿ ಲಕ್ಷ್ಮಣ್ ಅವರ ಕುಟುಂಬದವರು ಮಡಿಕೇರಿ ನಂತರ ಸುಳ್ಯದಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಸರಿ ಹೋಗಲೇ ಇಲ್ಲ. ಪರಿಣಾಮ ಸೊಂಟದ ಕೆಳಭಾಗದಿಂದ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದಾರೆ.
ಇಂದಿಗೂ ಅವರು ಮಲಗಿದ್ದಲೇ ಬದುಕು ಸವೆಸುವಂತೆ ಆಗಿದೆ. ಹೆಚ್ಚೆಂದರೆ ಮೇಲೆದ್ದು ಮೆನ್ನಲೇ ಓಡಾಡಬಹುದು ಅಷ್ಟೇ. ಯಾವುದೇ ಕೆಲಸ ಮಾಡುವುದಕ್ಕೂ ಸಾಧ್ಯವಿಲ್ಲ. ಇಷ್ಟಾದರೂ ಸರ್ಕಾರದಿಂದ ನಯಾಪೈಸೆ ಪರಿಹಾರ ದೊರೆತ್ತಿಲ್ಲ. ಅವಘಡಕ್ಕೂ ಮೊದಲು ಕೂಲಿ ಮಾಡಿ ಬದುಕು ದೂಡುತ್ತಿದ್ದ ಲಕ್ಷ್ಮಣ ಅವರು ಈಗ ವೃದ್ಧ ತಾಯಿಗೆ ಬರುವ ವೃದ್ಧಾಪ್ಯ ವೇತನದಿಂದಲೇ ಬದುಕು ದೂಡಬೇಕಾದ ಪರಿಸ್ಥಿತಿ ಬಂದಿದೆ. ಇದು ಲಕ್ಷ್ಮಣ ಅವರ ದುಸ್ಥಿತಿಯಾದರೆ ಇದೇ ಭೂಕುಸಿತದಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥವಾಗಿರುವ ಮೂರು ಮಕ್ಕಳು ಈಗ ಕಣ್ಣೀರಿನಲ್ಲಿ ಕೈತೊಳೆಯಬೇಕಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭರವಸೆಯ ಬೆಳಕು: ಎಸ್.ಆರ್.ಪಾಟೀಲ
ಹೌದು ಕೋರಂಗಾಲದಲ್ಲಿ ನಡೆದ ಭೂಕುಸಿತದಲ್ಲಿ ಬಾಲಕೃಷ್ಣ ಮತ್ತು ಯಮುನಾ ದಂಪತಿ ಜೀವಂತ ಸಮಾಧಿಯಾಗಿದ್ದರು. ಆಗ ಅವರ ಮೂವರು ಮಕ್ಕಳು ಇನ್ನೂ ಏನೂ ಅರಿಯದ ಬಾಲಕಿಯರಾಗಿದ್ದರು. ತಂದೆ ತಾಯಿ ಇಬ್ಬರು ಮೃತಪಟ್ಟು ಅನಾಥವಾದ ಮಕ್ಕಳ ಬದುಕಿನ ಭದ್ರತೆಗಾಗಿ ಮಕ್ಕಳು ದೊಡ್ಡವರಾಗಿ ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗ ದೊರಕಿಸುವ ಭರವಸೆಯನ್ನು ಅಂದಿನ ಜಿಲ್ಲಾಧಿಕಾರಿ ಕಣ್ಮಣಿ ಜಾಯ್ ಅವರು ನೀಡಿದ್ದರಂತೆ. ಇಂದು ಮಕ್ಕಳು ದೊಡ್ಡವರಾಗಿದ್ದು ಉದ್ಯೋಗ ಕೇಳಿದರೆ ಅಂದು ನಿಮಗೆ ಕೊಟ್ಟಿರುವ ಭರವಸೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರಂತೆ.
ಇರುವುದಕ್ಕೆ ಸರಿಯಾದ ಒಂದು ಮನೆಯೂ ಇಲ್ಲದೆ ಸೀಮೆಂಟ್ ಶೀಟ್ ಹೊದಿಸಿ ಶೆಡ್ಡಿನಂತ ಮನೆಯನ್ನು ಮಾಡಿ ಅದರಲ್ಲೇ ಬದುಕು ದೂಡುತ್ತಿದ್ದಾರೆ. ಮೂವರಲ್ಲಿ ಇಬ್ಬರು ಇನ್ನೂ ಓದುತ್ತಿದ್ದು, ಅವರ ಓದಿನ ವೆಚ್ಚವನ್ನು ಹಿರಿಯ ಮಗಳು ಲಕ್ಷಿತಾ ಕೆಲಸ ಮಾಡಿ ಭರಿಸುತ್ತಿದ್ದಾರೆ. ಇದು ಈ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಅನಾಥ ಮಕ್ಕಳ ವಾಸಕ್ಕೆ ಯೋಗ್ಯವಾದ ಮನೆ, ದುಡಿಯುವುದಕ್ಕೆ ಒಂದು ಉದ್ಯೋಗ ಕಲ್ಪಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ. ಇದು ಈ ಎರಡು ಕುಟುಂಬಗಳ ಕಣ್ಣೀರ ಕಥೆಯಾದರೆ ಮತ್ತೊಂದೆಡೆ ಅಂದು ಭೂಕುಸಿತವಾಗಿ ಪಟ್ಟೇದಾರ್ ಅವರ ಐನ್ ಮನೆ ಸಂಪೂರ್ಣ ನಾಶವಾಗಿತ್ತು.
ಮೆಜೆಸ್ಟಿಕ್ ಗೆಳತಿ ಮರೆಯಾಗಿದ್ದು ಎಲ್ಲಿ?: ಆಕೆ ಚೆಲುವಿನ ಚಿತ್ತಾರದ ಲವ್ ಸ್ಟೋರಿ ಹೇಳಿದ್ಯಾಕೆ?
ಆದರೆ ಆ ಮನೆಗೆ ಇಂದಿಗೂ ಪರಿಹಾರ ದೊರೆತ್ತಿಲ್ಲ. ಭೂಕುಸಿತದ ಸಂದರ್ಭ ಕೊಚ್ಚಿಹೋದ ಮನೆಯಲ್ಲಿ ಯಶವಂತ ಎಂಬುವರ ಕುಟುಂಬ ವಾಸವಾಗಿತ್ತು. ಆದರೆ ಅವರಿಗೆ ಈ ಹಿಂದೆಯೇ ಪಂಚಾಯಿತಿಯಿಂದ ಮನೆ ಕೊಟ್ಟಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ. ಪರಿಹಾರಕ್ಕಾಗಿ ನಾವು ಐದಾರು ತಿಂಗಳ ಕಾಲ ಅಲೆದಾಡಿ ಸಾಕಷ್ಟು ಹಣ ಕಳೆದುಕೊಂಡು ಸುಮ್ಮನಾಗಿಬಿಟ್ಟಿದ್ದೇವೆ ಎಂದು ಮನೆ ಕಳೆದುಕೊಂಡಿರುವ ಪ್ರಸನ್ನ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಐದು ವರ್ಷಗಳ ಹಿಂದೆ ನಡೆದ ಪ್ರಾಕೃತಿಕ ವಿಕೋಪದಲ್ಲಿ ನೋವನ್ನೇ ಉಂಡವರು ಇಂದಿಗೂ ಪರಿಹಾರ ದೊರೆಯದೆ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ.