ಇಲ್ಲಿನ ಕಾಳಿ ನದಿಯಲ್ಲಿ ಸೇತುವೆ ಕುಸಿದ ಪ್ರಕರಣ ಸಂಬಂಧಿಸಿ ಭಾರೀ ದುರ್ಘಟನೆ ತಪ್ಪಿಸುವಲ್ಲಿ ಕಾರವಾರದ ಚಿತ್ತಾಕುಲ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಮೊನ್ನೆ ರಾತ್ರಿ ದುರ್ಘಟನೆ ಬಗ್ಗೆ ಸ್ಥಳೀಯರಿಂದ ಚಿತ್ತಾಕುಲ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಕಾರವಾರ (ಆ.08): ಇಲ್ಲಿನ ಕಾಳಿ ನದಿಯಲ್ಲಿ ಸೇತುವೆ ಕುಸಿದ ಪ್ರಕರಣ ಸಂಬಂಧಿಸಿ ಭಾರೀ ದುರ್ಘಟನೆ ತಪ್ಪಿಸುವಲ್ಲಿ ಕಾರವಾರದ ಚಿತ್ತಾಕುಲ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಮೊನ್ನೆ ರಾತ್ರಿ ದುರ್ಘಟನೆ ಬಗ್ಗೆ ಸ್ಥಳೀಯರಿಂದ ಚಿತ್ತಾಕುಲ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಚಿತ್ತಾಕುಲ ಠಾಣಾ ಪಿಎಸ್‌ಐ ಮಹಂತೇಶ್ ಹಾಗೂ ಕಾನ್ಸ್‌ಸ್ಟೇಬಲ್ ವಿನಯ್ ಕಾಣಕೋಣಕರ್ ಅವರಿಗೆ ಸೇತುವೆ ಉದ್ದಕ್ಕೂ ಕುಸಿದು ಬಿದ್ದಿರುವುದು ಹಾಗೂ ಲಾರಿ ಪಲ್ಟಿಯಾಗಿರುವುದು ಕಂಡು ಭೀತಿಯುಂಟಾಗಿತ್ತು. ಆದರೆ, ಕೂಡಲೇ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು ಕೂಡಲೇ ತಡರಾತ್ರಿ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿ ಎರಡೂ ಕಡೆಯಿಂದ ರಸ್ತೆಯನ್ನು ಬಂದ್ ಮಾಡಿ ಹೆಚ್ಚಿನ ಯಾವುದೇ ಅನಾಹುತ ನಡೆಯದಂತೆ ತಪ್ಪಿಸಿದ್ದಾರೆ.
ಯಾಕಂದ್ರೆ, ತಮಿಳುನಾಡಿನ ಬಾಲಮುರುಗನ್ ಅವರ ಟ್ರಕ್ ಹಿಂದೆ ಹಲವು ಟ್ರಕ್‌ಗಳು ಸಾಗುತ್ತಿದ್ದವು. ಅಲ್ಲದೇ, ತಡರಾತ್ರಿ ವೇಳೆಯೂ ನೂರಾರು ವಾಹನಗಳು ಗೋವಾದಿಂದ ಕಾರವಾರದತ್ತ ಆಗಮಿಸುತ್ತವೆ. ಒಂದು ವೇಳೆ ಪಿಎಸ್‌ಐ ಮಹಂತೇಶ್ ಹಾಗೂ ಪಿಸಿ ವಿನಯ್ ಇತರ ವಾಹನಗಳನ್ನು ತಡೆಯುವ ಕೆಲಸ ಮಾಡಿರದಿದ್ರೆ ಹಲವರ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿತ್ತು. ಬಳಿಕ ಸ್ಥಳೀಯ ಮೀನುಗಾರರ ಜತೆ ಸೇರಿ ಟ್ರಕ್ ಚಾಲಕ ಬಾಲ ಮುರುಗನ್ ಅವರನ್ನು ರಕ್ಷಿಸುವಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಅಂದಹಾಗೆ, ಸೇತುವೆ ಕುಸಿದು ಬೀಳುವ ವೇಳೆ ಕೆಲವು ಮೀನುಗಾರರು ಹತ್ತಿರದಲ್ಲೇ ಕಾಳಿನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.
ನಾಗೇಶ, ಸೂರಜ್ ಹಾಗೂ ಕರಣ್ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಸೇತುವೆ ಕುಸಿತವಾಗಿದ್ದನ್ನು ಕಂಡು ಬಂದಿದ್ದು, ಆತಂಕಗೊಂಡು ತಕ್ಷಣ ಸ್ಥಳೀಯ ಜನರನ್ನು ಎಬ್ಬಿಸಿ ಕರೆದಿದ್ದಾರೆ. ಅಲ್ಲದೇ, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸೇತುವೆಯ ಕೆಳಭಾಗದಲ್ಲಿ ಲಾರಿಯ ಮೇಲ್ಬಾಗ ಕಾಣಿಸುತ್ತಿತ್ತು. ಅಲ್ಲಿ ಓರ್ವ ವ್ಯಕ್ತಿ ರಕ್ಷಣೆಗೆ ಕೂಗಿ ಕೊಳ್ಳುತ್ತಿದ್ದನ್ನು ಗಮನಿಸಿದ ಈ ಮೀನುಗಾರರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಲಾರಿ ಬಿದ್ದ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಸಾಕಷ್ಟು ಅಸ್ವಸ್ಥಗೊಂಡಿದ್ದ ಚಾಲಕ ಬಾಲ ಮುರುಗನ್‌ನನ್ನು ಮೀನುಗಾರರು ಪೊಲೀಸರ ಸಹಾಯದಿಂದ ರಕ್ಷಿಸಿದ್ದು, ಬಳಿಕ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಲಾಗಿದೆ.
ಸಂಡೂರು ಬೆಟ್ಟಗಳಲ್ಲಿನ ಗುಹೆಯೊಳಗೆ ನಿಧಿ ಶೋಧ: ಹೊಸ ಟೆಕ್ನಾಲಜಿ ಬಳಸಿ ಖದೀಮರಿಂದ ಶೋಧನೆ
ಈ ಕಾರ್ಯಾಚರಣೆಗೆ ಸ್ಥಳೀಯ ಇತರ ಮೀನುಗಾರರಾದ ಸತೀಶ, ಕುಶಾಲ ಮೊರ್ಜೆ, ಸುದೇಶ ಸಾರಂಗ, ಲಕ್ಷ್ಮೀಕಾಂತ, ದಿಲೀಪ್ ರಾತ್ರಿ ಪೂರ್ತಿ ಸ್ಥಳದಲ್ಲೇ ಸಾಥ್ ನೀಡಿದ್ದಾರೆ. ಈ ಹಿನ್ನೆಲೆ ಪಿಎಸ್‌ಐ ಮಹಂತೇಶ್, ಪಿಸಿ ವಿನಯ್ ಹಾಗೂ ಸ್ಥಳೀಯ ಮೀನುಗಾರರಿಗೆ ಸಚಿವ ಮಾಂಕಾಳು ವೈದ್ಯ ಅಭಿನಂದಿಸಿದ್ದಾರೆ. ಅಲ್ಲದೇ, ಆಗಸ್ಟ್ 15ರಂದು ಪಿಎಸ್‌ಐ ಮಹಂತೇಶ್, ಪಿಸಿ ವಿನಯ್ ಹಾಗೂ ರಕ್ಷಣೆಯಲ್ಲಿ ಭಾಗವಹಿಸಿದ ಸ್ಥಳೀಯ ಮೀನುಗಾರರನ್ನು ಗೌರವಿಸಲು ನಿರ್ಧರಿಸಲಾಗಿದೆ.