
ಮೈಸೂರು : ಯುವಜನರಿಗೆ ತಮ್ಮ ಉತ್ಸಾಹಿ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ಕ್ಷೇತ್ರದಲ್ಲಿ ಅಪಾರ ಅವಕಾಶವಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.
ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಟಿ. ನರಸೀಪುರ ತಾಲೂಕು ಹನುಮನಾಳು ಗ್ರಾಮದ ಶ್ರೀ ಶಾರದ ಶಿಕ್ಷಣ ಟ್ರಸ್ಟ್ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಸಹಕಾರ ಕುರಿತು ಪಿಯು ವಿಭಾಗದ ಚರ್ಚಾ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಉದ್ಯಮ ಮತ್ತು ವ್ಯವಹಾರ ಪ್ರಜ್ಞೆ ಬೆಳೆಸುವಲ್ಲಿ ಸಹಕಾರ ಕ್ಷೇತ್ರದ ಸಾಧನೆ ಅಪಾರ. ಅಲ್ಲಿನ ಜನ ಜೀವನದೊಂದಿಗೆ ಒಳಗೊಂಡು ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ದೇಶವನ್ನು ಪ್ರಪಂಚದ ಮುಂಚೂಣಿಗೆ ತರಲು ಉದ್ಯಮಶೀಲತೆ ಮುಖ್ಯ. ಅಂತಹ ವಾತಾವರಣ ಸೃಷ್ಟಿಗೆ ಸಹಕಾರ ಕ್ಷೇತ್ರದ ಕಾರ್ಯ ಪ್ರಮುಖ ಎಂದು ಅವರು ಹೇಳಿದರು.
ತಮ್ಮ ಸುತ್ತಲಿನ ಸಮಾಜಕ್ಕೆ ಸೌಕರ್ಯ ಕಲ್ಪಿಸಲು ಅಗತ್ಯ ಸಂಸ್ಥೆಗಳನ್ನು ಕಟ್ಟಲು ಸಹಕಾರ ಕ್ಷೇತ್ರದ ಸಹಾಯ ಮುಖ್ಯ. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಭವಿಷ್ಯವಾಗಿದೆ. ವಾಣಿಜ್ಯ ಮಾತ್ರವಲ್ಲದೇ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೂ ಇಲ್ಲಿ ತಿಳಿದುಕೊಳ್ಳಲು ಅನೇಕ ಸಂಗತಿಗಳಿವೆ ಎಂದರು.
ಚರ್ಚಾ ಸ್ಪರ್ಧೆಯಲ್ಲಿ ಸದ್ವಿದ್ಯಾ ಪಿಯು ಕಾಲೇಜಿನ ಎಸ್. ಶಿವರಾಜು(ಪ್ರಥಮ), ನಂಜನಗೂಡು ತಾಲೂಕು ದೇವನೂರಿನ ಸರ್ಕಾರಿ ಪಿಯು ಕಾಲೇಜಿನ ಶ್ರುತಿ(ದ್ವಿತೀಯ), ಬನ್ನೂರಿನ ಸರ್ಕಾರಿ ಪಿಯು ಕಾಲೇಜಿನ ಚಂದು (ತೃತೀಯ), ಸದ್ವಿದ್ಯಾ ಪಿಯು ಕಾಲೇಜಿನ ಪಿ.ಟಿ. ಅನಿರುದ್ಧ(ಸಮಾಧಾನಕ) ಬಹುಮಾನ ಪಡೆದರು.
ಪ್ರಬಂಧ ಸ್ಪರ್ಧೆಯಲ್ಲಿ ಬೇಡನ್ ಪೊವೆಲ್ ಪಬ್ಲಿಕ್ ಶಾಲೆಯ ಮಿಶಾ ಪಿ. ಗೌಡ(ಪ್ರಥಮ), ಟಿ. ನರಸೀಪುರದ ಶಾರದಾ ಪ್ರೌಢಶಾಲೆಯ ಪುಣ್ಯಶ್ರೀ(ದ್ವಿತೀಯ) ಹಾಗೂ ಹುಣಸೂರಿನ ಗಾಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಧುಮಿತ(ತೃತೀಯ) ಬಹುಮಾನ ಪಡೆದರು.
ಒಕ್ಕೂಟದ ನಿರ್ದೇಶಕರಾದ ಎಂ.ಬಿ. ಮಂಜೇಗೌಡ, ಎಚ್.ಎಸ್. ಪ್ರಶಾಂತ್ ತಾತಾಚಾರ್, ಟ್ರಸ್ಟ್ ವ್ಯವಸ್ಥಾಪಕ ಹನುಮನಾಳು ಸಿದ್ದೇಗೌಡ, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಆರ್. ಮಂಜುನಾಥ್, ತೀರ್ಪುಗಾರರಾದ ಪ್ರೊ. ಮಹೇಂದ್ರಕುಮಾರ್, ಚಂದ್ರಶೇಖರ್ ಮೊದಲಾದವರು ಇದ್ದರು.