
ತುಮಕೂರು : ರಾಜ್ಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಹಲವಾರು ವಿಚಾರಗಳು ಕಾರಣವಾಗಿವೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಶಾಸಕ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸೋಮವಾರ ಸಿದ್ಧಗಂಗಾ ಮಠಕ್ಕೆ ಆಗಮಿಸಿ, ಹಿರಿಯ ಲಿಂ. ಡಾ.ಶಿವಕುಮಾರಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸೋಲಿನ ಬಗ್ಗೆ ಈಗಾಗಲೇ ಪಕ್ಷದ ಮುಖಂಡರು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುವುದು. ರಾಜ್ಯದಲ್ಲಿನ ಸೋಲಿನ ಕುರಿತು ಪಕ್ಷದ ಹಿರಿಯರು ವರಿಷ್ಠರು ಕುಳಿತು ಸಮಗ್ರವಾಗಿ ಅವಲೋಕನ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು, ಪಕ್ಷವನ್ನು ಪುನರ್ ಸಂಘಟನೆ ಹೇಗೆ ಮಾಡಬೇಕು ಎಂಬುದರ ಚರ್ಚೆ ನಡೆಯಲಿದೆ. ಪಕ್ಷಕ್ಕೆ ಹಿನ್ನಡೆಯಾಗಿದೆ ಅದಕ್ಕೆ ಸಾಕಷ್ಟುಕಾರಣಗಳಿವೆ, ಕಾರಣಗಳ ಕುರಿತು ಚರ್ಚೆ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್… ಅಥವಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್…. ಸಂತೋಷ್ ಅವರನ್ನು ಸೋಲಿಗೆ ಹೊಣೆಗಾರರನ್ನಾಗಿ ಮಾಡೋದು ಸರಿಯಲ್ಲ. ಬಿಎಸ್‌ವೈ ಇನ್ನೂ ಗಟ್ಟಿಯಾಗಿದ್ದಾರೆ. ಅವರು ಇನ್ನೂ ಕೂಡ ಪಕ್ಷ ಸಂಘಟನೆ ಮಾಡಲಿದ್ದಾರೆ. ನಮ್ಮಂತ ಯುವಕರು ಶಾಸಕರು ತುಂಬಾ ಜನ ಗೆದ್ದಿದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದರು.
ಎಂಪಿ ಚುನಾವಣೆ ಮೇಲೆ ಪರಿಣಾಮವಿಲ್ಲ:
ವಿಧಾನಸಭಾ ಚುನಾವಣೆಯ ಸೋಲು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಎರಡರ ಮಾನದಂಡಗಳು ಬೇರೆ ಬೇರೆ. ಈ ಸೋಲನ್ನ ಒಪ್ಪಿಕೊಂಡಿದ್ದೇವೆ, ಸೋಲಿನಿಂದ ಪಾಠ ಕಲಿತು ಎಚ್ಚೆತ್ತು ಕೆಲಸ ಮಾಡಿ ನರೇಂದ್ರ ಮೋದಿಯವರ ಕೈ ಬಲ ಪಡಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮೋದಿಯವರ ಕೈ ಬಲ ಪಡಿಸುತ್ತೇವೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಅಯಿತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ ಇನ್ನೂ ಗಟ್ಟಿಯಾಗಿದ್ದಾರೆ. ಪಕ್ಷವನ್ನು ಸಂಘಟಿಸುವ ಶಕ್ತಿ ಇನ್ನೂ ಅವರಲ್ಲಿ ಉಳಿದಿದೆ. ಕೇವಲ ಒಂದು ಸಮುದಾಯದ ಮತಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಿಕಾರಿಪುರ ಕ್ಷೇತ್ರದಲ್ಲಿ ಲಿಂಗಾಯತರು ಸೇರಿದಂತೆ ಹಾಲುಮತ ಸಮಾಜ, ಎಸ್ಸಿ, ಎಸ್ಟಿಸಮಾಜಗಳು ಸೇರಿ ನನ್ನನ್ನ ಗೆಲ್ಲಿಸಿದ್ದಾರೆ ಎಂದರು.
ತಂದೆಯವರಂತೆ ಆಶೀರ್ವಾದ ಪಡೆಯುವುದು ವಾಡಿಕೆ:
ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರು,ಮುಖಂಡರು ಹಗಲಿರುಳೆನ್ನದೆ ದುಡಿದು ನನ್ನನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ.ಅವರ ಆಶೀರ್ವಾದದ ಜೊತೆಗೆ, ಸಿದ್ದಗಂಗಾ ಶ್ರೀಗಳ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಮ್ಮ ತಂದೆಯವರು ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ ನಾನು ಕೂಡ ವಿಧಾನಸಭೆ ಪ್ರವೇಶಿಸುವ ಮೊದಲು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ, ಯಡಿಯೂರಿಗೂ ಹೋಗಿ ಪೂಜೆ ಸಲ್ಲಿಸಲಿದ್ದೇನೆ ಎಂದು ವಿಜಯೇಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರ ಪತ್ನಿ ಪ್ರೇಮ, ಪುತ್ರಿಯರಾದ ಮೈತ್ರಿ, ಜಾನ್ಸಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ಜಿಲ್ಲಾ ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ ಇತರರಿದ್ದರು.