ಕಾಲ ಕಾಲಕ್ಕೆ ಜನಗಣತಿ ಮತ್ತು ಜಾತಿಗಣತಿ ನಡೆದರೆ ಮಾತ್ರ ರಾಷ್ಟ್ರದ ಸಂಪತ್ತು ಸಮಾನವಾಗಿ ಹಂಚಿಕೆಯಾಗಲು ಸಾಧ್ಯ ಎಂದು ಹೈಕೋಟ್‌ನ ನಿವೃತ್ತ ನ್ಯಾಯಮೂರ್ತಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.
ಮೈಸೂರು: ಕಾಲ ಕಾಲಕ್ಕೆ ಜನಗಣತಿ ಮತ್ತು ಜಾತಿಗಣತಿ ನಡೆದರೆ ಮಾತ್ರ ರಾಷ್ಟ್ರದ ಸಂಪತ್ತು ಸಮಾನವಾಗಿ ಹಂಚಿಕೆಯಾಗಲು ಸಾಧ್ಯ ಎಂದು ಹೈಕೋಟ್‌ನ ನಿವೃತ್ತ ನ್ಯಾಯಮೂರ್ತಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.
ನಗರದ ಒಡಲು ಟ್ರಸ್ಟ್ ರಮಾಗೋವಿಂದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಟ್ರಸ್ಟ್ ಉದ್ಘಾಟನೆ ಮತ್ತು ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿ ನ್ಯಾಯ ದೊರಕಬೇಕಾದರೆ ನಿಗದಿತ ಅವಧಿಗೆ ಗಣತಿ ಕಾರ್ಯ ನಡೆಯಬೇಕು. ದೇಶದ ಜನಸಾಮಾನ್ಯರಿಗೆ ಇನ್ನೂ ಕೂಡ ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ದೊರಕಿಲ್ಲ. ಇದಕ್ಕಾಗಿ ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ್ದೇವಾ ಅಥವಾ ನಮ್ಮ ಬೇಡಿಕೆಗಳ ಹೋರಾಟದ ಧ್ವನಿ ಕ್ಷೀಣಿಸಿದೆಯಾ ಎಂಬುದನ್ನು ಕುರಿತು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷವಾದರೂ ದೇಶದಲ್ಲಿ ಬಡತನ ಕಡಿಮೆಯಾಗಿಲ್ಲ. ಇಂದಿಗೂ ಬಡ ಜನರು ಅಕ್ಕಿಗಾಗಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನಮ್ಮ ನಾಯಕರು ಜನರಿಗೆ ಹೊಟ್ಟೆ ತುಂಬಾ ಊಟವನ್ನೇ ನೀಡಲು ಸಾಧ್ಯವಾಗಿಲ್ಲ. ಅಷ್ಟೊಂದು ಬಡಜನರನ್ನು ದೇಶಾದ್ಯಂತ ಉಳಿಸಿಕೊಂಡಿದ್ದೇವೆ. ಇದರಿಂದಾಗಿ ಅವರ ದನಿ ಕ್ಷೀಣವಾಗಿದೆ. ಅಂತಹವರಿಂದ ಎಂತಹ ಹೋರಾಟ ನಿರೀಕ್ಷಿಸಬಹುದು ಎಂದು ಅವರು ಪ್ರಶ್ನಿಸಿದರು.
ಹಣದಿಂದ ಚುನಾವಣೆ ಗೆಲ್ಲುವವರಿಂದ ನಾವು ಜನಪರ ನಿಲುವು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದಾಗಿ ಮತದಾರರು ಯೋಗ್ಯರಿಗೆ ಮತ ಚಲಾಯಿಸಬೇಕು. ಅಲ್ಲದೇ, ಮೇಲು ಕೀಳೆಂಬ ಅನಿಷ್ಠ ಪದ್ದತಿ ದೇಶಾದ್ಯಂತ ಇನ್ನೂ ಜೀವಿಂತವಾಗಿದೆ. ನಮ್ಮ ಸರ್ಕಾರಗಳೂ ಕೂಡ ಜಾತಿ ಸಂಘಟನೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ. ಪ್ರಸ್ತುತ ಸನ್ನಿವೇಶದಲ್ಲಿ ಜಾತಿಯನ್ನು ಸಡಿಲಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದಾಗ ಕೆಲವು ಕೆಲವೇ ಮೇಲ್ವರ್ಗದ ಜನರ ಕೈಯಲ್ಲಿ ದೇಶದ ಸಂಪತ್ತು ಕ್ರೂಢೀಕರಣವಾಗಿದೆ. ಜಾತಿ ಪದ್ಧತಿ ದೂರವಾಗುವ ತನಕ ಆರ್ಥಿಕ ಸಂಪತ್ತು ಸಮಾನವಾಗಿ ಹಂಚಿಕೆ ಆಗುವುದು ಅಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮೀಸಲಾತಿ ಸವಾಲು ಮತ್ತು ಸಾಧ್ಯತೆ ಕುರಿತು ಪ್ರಾಧ್ಯಾಪಕಿ ಡಾ. ಕವಿತಾ ರೈ ಹಾಗೂ ಜಾತಿ ಗಣತಿ ಅನಿವಾರ್ಯತೆ ಮತ್ತು ಸಾಮಾಜಿ ನ್ಯಾಯ ವಿಷಯ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎಸ್. ಲಿಂಗಪ್ಪ ಮಾತನಾಡಿದರು.
ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ ಅಧ್ಯಕ್ಷತೆ ವಹಿಸಿದ್ದರು. ಒಡಲು ಟ್ರಸ್ಟ್ ಧರ್ಮದರ್ಶಿ ಎಸ್. ನರೇಂದ್ರಕುಮಾರ್, ಕಾರ್ಯದರ್ಶಿ ಕೆ.ಎನ್. ಶಿವಲಿಂಗಯ್ಯ ಇದ್ದರು.