ಚಿಕ್ಕಮಗಳೂರಲ್ಲಿ ಮಳೆ ಆರ್ಭಟ: ರಸ್ತೆ ಸೇತುವೆಗಳ ಸಂಪರ್ಕ ಕಡಿತ, ಪ್ರವಾಹದ ಭೀತಿ

By Girish Goudar  |  First Published Jul 23, 2023, 11:56 PM IST

ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್ಆರ್ಪುರ ತಾಲ್ಲೂಕುಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲುಕುಗಳಲ್ಲೂ ಚುದುರಿದಂತೆ ಮಳೆಯಾಗುತ್ತಿದ್ದು, ಸೊರಗಿದ್ದ ಕೃಷಿ, ತೋಟಗಾರಿಕೆ ಬೆಳೆಗಳು ಚೇತರಿಸಿಕೊಳ್ಳುವಂತಾಗಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.23): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರಿದಿದ್ದು, ಮಲೆನಾಡು ಭಾಗದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದೆ. ರಸ್ತೆ, ಸೇತುವೆಗಳು ಸಂಪರ್ಕ ಕಳೆದುಕೊಂಡಿದ್ದು, ನದಿಗಳು ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹ ಭೀತಿ ಮೂಡಿಸಿವೆ. ಚಿಕ್ಕಮಗಳೂರು ಸೇರಿದಂತೆ ಮಲೆನಾಡಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಹಾಗೂ ಎನ್ಆರ್ಪುರ ತಾಲ್ಲೂಕುಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲುಕುಗಳಲ್ಲೂ ಚುದುರಿದಂತೆ ಮಳೆಯಾಗುತ್ತಿದ್ದು, ಸೊರಗಿದ್ದ ಕೃಷಿ, ತೋಟಗಾರಿಕೆ ಬೆಳೆಗಳು ಚೇತರಿಸಿಕೊಳ್ಳುವಂತಾಗಿದೆ.

Tap to resize

Latest Videos

undefined

ಗಾಂಧೀ ಮೈದಾನಕ್ಕೆ ತುಂಗಾ ನದಿ ನೀರು : 

ಶೃಂಗೇರಿ ಪಟ್ಟಣ ಸೇರಿದಂತೆ ಕಿಗ್ಗಾ, ಕೆರೆಕಟ್ಟೆ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮ ತುಂಗಾನದಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದು, ಪಟ್ಟಣದ ಶ್ರೀಪೀಠದ ಆವರಣದಲ್ಲಿರುವ ಗಾಂಧೀ ಮೈದಾನ ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲಿದ್ದ ಅಂಗಡಿ-ಮುಂಗಟ್ಟುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲುಕು ಆಡಳಿತ ತೆರವುಗೊಳಿಸಿದೆ. ಪಟ್ಟಣದ ಪ್ಯಾರಲಲ್ ರಸ್ತೆಯಾದ ಕುರುಬಗೇರಿ ರಸ್ತೆ ಸಹ ನೀರಿನಿಂದಾವೃತಗೊಂಡಿದೆ. ಕ್ಷಣ ಕ್ಷಣಕ್ಕೂ ತುಂಗಾ ನದಿ ನೀರು ಹೆಚ್ಚುತ್ತಲೇ ಇದ್ದು, ಪ್ರವಾಹದ ಭೀತಿ ಮೂಡಿಸಿದೆ.

ಕಲಬುರಗಿ ಜಿಲ್ಲಾದ್ಯಂತ ಮುಂದಿನ ಒಂದು ವಾರ ಮಳೆ

ಉಕ್ಕಿ ಹರಿದ ನೀರಿನಲ್ಲಿ ಬೈಕ್ ಓಡಿಸುವ ಹುಚ್ಚುಸಾಹಸ : 

ಮಳೆಯಿಂದ ಕಾರ್ಕಳ-ಶೃಂಗೇರಿ ರಸ್ತೆ ಮೇಲೆ ಹರಿಯುತ್ತಿರುವ ಭದ್ರಾನದಿ ನೀರಿನ ನಡುವೆಯೇ ಬೈಕ್ಗಳನ್ನು ಓಡಿಸುವ ಹುಚ್ಚು ಸಾಹಸಕ್ಕೆ ಕೆಲವು ಯುವಕರು ಮುಂದಾಗಿದ್ದು, ಸ್ಥಳೀಯರ ಆಕ್ರೋಷಕ್ಕೆ ಕಾರಣವಾಗಿದೆ. ತಾಲ್ಲೂಕಿನ ನೆಮ್ಮಾರು ಸಮೀಪ ರಸ್ತೆ ಮೇಲೆ ತುಂಗಾ ನದಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ೧೬೯ರಲ್ಲಿ ಗಂಟೆಗಳ ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಳಸ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ಹರಿವು ರುದ್ರರಮಣೀಯವಾಗಿದೆ. ಭೋರ್ಗರೆಯುತ್ತಿರುವ ಭದ್ರೆ ನೀರಿನಲ್ಲಿ ಇಂದು  ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ. ಇದರಿಂದ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದ್ದು, ವಾಹನಗಳು ಬದಲಿ ರಸ್ತೆಯಲ್ಲಿ 10 ಕಿ.ಮೀ.ಸುತ್ತಿಕೊಂಡು ಸಂಚರಿಸಬೇಕಿದೆ.ಕುದುರೇಮುಖ ಘಟ್ಟ ಪ್ರದೇಶದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ತುಂಗ-ಭದ್ರಾ ನದಿಗಳ ಒಳ ಹರಿವು ಹೆಚ್ಚಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಪ್ರವಾಹದ ಭೀತಿ ಉಂಟುಮಾಡಿವೆ.ಜಾಂಬಳೆ ಸಮೀಪ ರಸ್ತೆ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ. ಇದರಿಂದ ಕಳಸ-ಕುದುರೇಮುಖ-ಮಂಗಳೂರು ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ವಾಹನಗಳನ್ನು ಕೊಂಡೊಯ್ಯಲಾಗುತ್ತಿದೆ. 

ಭಾರೀ ಮಳೆ: ದೂಧಸಾಗರ ಜಲಾಶಯ ವೀಕ್ಷಣೆಗೆ ನಿರ್ಬಂಧ

ಹೇಮಾವತಿ ನದಿಯಿಂದ ನೆರೆ ಭೀತಿ : 

ಕಳಸ ತಾಲ್ಲೂಕಿನ ಸಂಪಿಗೆಕಾನ್ ಗ್ರಾಮದಲ್ಲಿ ಜಾನುವಾರುಗಳಿಗೆ ಹುಲ್ಲು ಕೊಯ್ಯುತ್ತಿದ್ದ ಶಂಕರೇಗೌಡ ಎಂಬುವವರ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಅವರಿಗೆ ಕಳಸದ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಕಳಿಸಲಾಗಿದೆ.ಮೂಡಿಗೆರೆ ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿಯಿಂದ ಮಳೆ ಬಿರುಸಾಗಿದ್ದು, ಹೇಮಾವತಿ ನದಿ ಉಕ್ಕಿ ಹರಿಯಲಾರಂಭಿಸಿದೆ. ತಾಲ್ಲೂಕಿನ ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಎಲ್ಲೆಡೆ ವರುಣಾರ್ಭಟ ಹೆಚ್ಚಾಗಿದ್ದು, ನೆರೆ ಭೀತಿ ಆವರಿಸಿದೆ. ತಾಲ್ಲೂಕಿನ  ಬಕ್ಕಿ-ಕಿತ್ತಲೆಗಂಡಿಯಲ್ಲಿ ಹೇಮಾವತಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. 

ರಸ್ತೆಗೆ ಬಿದ್ದ ಮರಗಳು: 

ಚಿಕ್ಕಮಗಳೂರು ನಗರ ಸಮೀಪ ವಸ್ತಾರೆ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಇದರಿಂದ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ೧೭೩ರಲ್ಲಿ ಸಂಚಾರ ಬಂದ್ಆಗಿದ್ದು, ವಾಹನ ಸವಾರರು ಆಲ್ದೂರು ಮೂಲಕ ಮೂಡಿಗೆರೆಗೆ ತೆರಳಿ ಅಲ್ಲಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ನೆರವಿನಲ್ಲಿ ಮರ ತೆರವುಗೊಳಿಸುವ ಕಾರ್ಯ ನಡೆದಿದೆ.ಚಂದ್ರದ್ರೋಣ ಗಿರಿ ತಪ್ಪಲಿನಲ್ಲೂ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಪ್ರಸಿದ್ಧ ಪ್ರವಾಸಿ ಕೇಂದ್ರ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದು ಅಲ್ಲಂಪುರದಿಂದ ಕೈಮರ ಚೆಕ್ ಪೋಸ್ಟ್ವರೆಗೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡಬೇಕಾಯಿತು.ಕೊಪ್ಪ ತಾಲ್ಲೂಕಿನಲ್ಲೂ ವ್ಯಾಪಕ ಮಳೆಯಾಗುತ್ತದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲ್ಲೂಕಿನ ಕುಂಚೂರು ಗ್ರಾಮದಲ್ಲಿ ನಾಗೇಶ್ ಎಂಬುವವರಿಗೆ ಸೇರಿದ ತೋಟದಲ್ಲಿ ಮಳೆ-ಗಾಳಿಯಿಂದಾಗಿ ಸುಮಾರು 50 ಕ್ಕೂ ಹೆಚ್ಚು ಅಡಿಕೆ ಗಿಡಗಳು ನೆಲಕ್ಕುರುಳಿವೆ.ಇಂದು ದಿನವಿಡೀ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದು, ಹೀಗೆಯೇ ಮುಂದುವರಿದಲ್ಲಿ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳಿವೆ ಈ ಕಾರಣಕ್ಕೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ತುರ್ತು ಪರಿಹಾರ ಕ್ರಮಗಳಿಗೆ ಸಿದ್ಧತೆ ಮಾಡಿಕೊಂಡಿದೆ.

click me!