Ballari: ಹುಟ್ಟಿದ ಕಂದ ಸುಖಪಟ್ಟಿತಲೇ ಪರಾಕ್: ಮೈಲಾರ ಲಿಂಗೇಶ್ವರನ ನಿಗೂಢ ಭವಿಷ್ಯವಾಣಿ!

Published : Oct 22, 2026, 11:24 AM IST
ballari mylaralingeshwara karnika

ಸಾರಾಂಶ

ಬಳ್ಳಾರಿಯ ಯರಿಂಗಳಿಗಿ ಮತ್ತು ಚಿಕ್ಕಮಗಳೂರಿನ ಬೀರೂರಿನ ಮೈಲಾರ ಲಿಂಗೇಶ್ವರ ದೇವಸ್ಥಾನಗಳಲ್ಲಿ ದಸರಾ ಹಬ್ಬದ ಅಂಗವಾಗಿ ಕಾರ್ಣಿಕೋತ್ಸವ ಜರುಗಿತು. ಈ ಬಾರಿಯ ಭವಿಷ್ಯವಾಣಿಯಲ್ಲಿ ಉತ್ತಮ ಮಳೆ-ಬೆಳೆಯ ಮುನ್ಸೂಚನೆ ನೀಡಲಾಗಿದ್ದು, ಮುಂಬರುವ ರಾಜಕೀಯ ಸಂಘರ್ಷಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ. ಭಕ್ತರು ಸರಪಳಿ ಪವಾಡ ಮತ್ತು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.

ಬಳ್ಳಾರಿ: ಕುರುಗೋಡು ತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಮಂಗಳವಾರ ನಡೆದ ಕಾರ್ಣಿಕೋತ್ಸವದಲ್ಲಿ ನವೀನ್ ಬಡಿಗೇರ್ ಹುಟ್ಟಿದ ಕಂದ ಸುಖಪಟ್ಟಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದರು.

ಏಳುದಿನಗಳ ಕಾಲ ಉಪವಾಸ ವ್ರತ ಆಚರಿಸುವ ಧಾರವಾಡ ಮೂಲದ ನವೀನ್ ಬಡಿಗೇರ್ ಕಾರ್ಣಿಕ ನುಡಿದರು. ಈ ಬಾರಿ ಮಳೆ, ಬೆಳೆ ಹುಲುಸಾಗಿರುತ್ತವೆ ಎಂದು ಕಾರ್ಣಿಕದ ಭವಿಷ್ಯದ ನುಡಿ ರೈತರು ವ್ಯಾಖ್ಯಾನಿಸಿದರು. ಯರಿಂಗಳಿಗಿ ಗ್ರಾಮವೂ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು.

ಶುಕ್ರವಾರ ದೇವಸ್ಥಾನದಲ್ಲಿ ಸರಪಳಿ ಸೇವೆ ಜರುಗಿತು. ನವೀನ್ ಬಡಿಗೇರ್, ವಿಠ್ಠೋಬಪ್ಪ, ಕಾರ್ತಿಕ್ ಮತ್ತು ರಾಜು ಸ್ವಾಮಿ ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು.

ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾಳಪ್ಪ ಆಚಾರಿ ಎನ್ನುವವರು ಪ್ರಾರಂಭದಿಂದ ಸರಪಳಿ ಪವಾಡ ಮತ್ತು ಕಾರ್ಣಿಕ ನುಡಿಯುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಅವರ ಮಗ ನವೀನ್ ಬಡಿಗೇರ್ ಆರು ವರ್ಷಗಳಿಂದ ಕಾರಣಿಕ ನುಡಿಯುತ್ತಿದ್ದಾರೆ.

ಕಾರ್ಣಿಕೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಸೋಮವಾರ ಮತ್ತು ಮಂಗಳವಾರ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮೈಲಾರ ಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

ಸೃಷ್ಟಿಗೆ ನಾಡು ಸಿರಿ ಆಯಿತು, ಮೈಲಾರಲಿಂಗೇಶ್ವರ ಕಾರ್ಣಿಕ

ಬೀರೂರು (ಚಿಕ್ಕಮಗಳೂರು): ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ‘ಸೃಷ್ಟಿಗೆ ನಾಡು ಸಿರಿಯಾಯಿತು’, ಮದಗಜಗಳು ಕಾದಾಡಿದರು, ಕತ್ತಲೆಯ ದೀಪಕ್ಕೆ ಬೆಳಕಾಯಿತು, ಸರ್ವರು ಎಚ್ಚರದಿಂದಿರಬೇಕು... ಪರಾಕ್. ಇದು ಮೈಲಾರಲಿಂಗ ಸ್ವಾಮಿಯ ದಶರಥ ಪೂಜಾರ ಕಾರ್ಣಿಕದ ನುಡಿಗಳು.

ಮೈಲಾರಲಿಂಗಸ್ವಾಮಿ ದಸರಾ ಕಾರ್ಣಿಕದ ನುಡಿಮುತ್ತುಗಳು ಬುಧವಾರ ಬೆಳಗ್ಗಿನ ಜಾವ 4.50ಕ್ಕೆ ನಡೆದವು. ಪ್ರಕೃತಿಯ ಕೃಪೆ ಮತ್ತು ಉತ್ತಮ ಮಳೆ-ಬೆಳೆಯಿಂದಾಗಿ ನಾಡು-ನುಡಿ ಸಮೃದ್ಧಿಯಾಗಲಿದೆ. ಸಮಾಜದಲ್ಲಿ ಅಥವಾ ರಾಜಕೀಯ ರಂಗದಲ್ಲಿ ದೊಡ್ಡ ಮಟ್ಟದ ಅಧಿಕಾರ ಸ್ಪರ್ಧೆ, ವಾಗ್ವಾದ ನಡೆಯಬಹುದು. ಅಜ್ಞಾನ ಅಥವಾ ಕಷ್ಟಗಳೆಂಬ ‘ಕತ್ತಲು’ ಆವರಿಸಿದಾಗ, ಸತ್ಯ, ನ್ಯಾಯ ಅಥವಾ ದೈವಿಕ ಶಕ್ತಿಯು ‘ದೀಪ’ವಾಗಿ ಸಮಾಜಕ್ಕೆ ದಾರಿತೋರಲಿದೆ.

ಮುಂಬರುವ ದಿನಗಳಲ್ಲಿ ಪ್ರಕೃತಿಯ ಬದಲಾವಣೆಗಳಿರಬಹುದು, ಸಾಮಾಜಿಕ ಸವಾಲು, ವ್ಯಕ್ತಿಗಳ ನಡುವಿನ ಸಂಘರ್ಷ ಇರಬಹುದು, ಎಲ್ಲದರಲ್ಲೂ ಜನರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಾರ್ಣಿಕವನ್ನು ವರ್ಣಿಸಲಾಗಿದೆ.

PREV
Read more Articles on
click me!

Recommended Stories

ಸಾಗರ ದಸರಾ: ಬನ್ನಿ ಶಾಸ್ತ್ರದಲ್ಲಿ ತಹಶೀಲ್ದಾರ್ ಡಾ.ಪ್ರತಿಭಾ ಕಣ್ಣೀರು ಹಾಕಿದ್ದೇಕೆ?
ನಡುರಾತ್ರಿ ಬೆಂಗಳೂರಿನಲ್ಲಿ ಸದ್ದು: ಪಟಾಕಿ ಸಿಡಿಸಿದ್ದಕ್ಕೆ ನಟಿ ರಮ್ಯಾ ಕಿಡಿ, ಪೊಲೀಸರಿಗೆ ದೂರು!