ತಿಪಟೂರು ರಾಜ್ಯದಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವ ತಾಲೂಕು. ಜಿಲ್ಲಾ ಕೇಂದ್ರಕ್ಕೆ 80ಕಿ.ಮೀ ಮತ್ತು ಬೆಂಗಳೂರಿಗೆ 160 ಕಿ.ಮೀ ದೂರವಿದ್ದು, ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿರುವುದರಿಂದ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ನೂತನ ಶಾಸಕರಾದ ಕೆ. ಷಡಕ್ಷರಿಯವರಿಗೆ ಕಲ್ಪತರು ಜನಪರ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಯುವ ಮುಖಂಡರಾದ ಕೆ.ಆರ್. ಅರುಣ್‌ಕುಮಾರ್ ಒತ್ತಾಯಿಸಿದ್ದಾರೆ.
ತಿಪಟೂರು: ತಿಪಟೂರು ರಾಜ್ಯದಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವ ತಾಲೂಕು. ಜಿಲ್ಲಾ ಕೇಂದ್ರಕ್ಕೆ 80ಕಿ.ಮೀ ಮತ್ತು ಬೆಂಗಳೂರಿಗೆ 160 ಕಿ.ಮೀ ದೂರವಿದ್ದು, ಜಿಲ್ಲೆಯಾಗುವ ಎಲ್ಲಾ ಅರ್ಹತೆ ಹೊಂದಿರುವುದರಿಂದ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕೆಂದು ನೂತನ ಶಾಸಕರಾದ ಕೆ. ಷಡಕ್ಷರಿಯವರಿಗೆ ಕಲ್ಪತರು ಜನಪರ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಯುವ ಮುಖಂಡರಾದ ಕೆ.ಆರ್. ಅರುಣ್‌ಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ನೂತನ ಶಾಸಕರು ಗಮನಹರಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿರುವ ಅವರು, ತಿಪಟೂರು ತಾಲೂಕು ಕೇಂದ್ರ ಬೆಂಗಳೂರು, ಹೊನ್ನಾವರ ಹೆದ್ದಾರಿಯಲ್ಲಿ ವಿಶಾಲವಾಗಿ ಬೆಳೆದು, ನಗರಸಭೆಯಾಗಿ ಪರಿವರ್ತನೆಯಾಗಿ ವೈವಿಧ್ಯಮಯ ನಗರವಾಗಿದೆ. ಕಲ್ಪತರು ನಾಡೆಂದೇ ಹೆಸರಾಗಿರುವ ತಿಪಟೂರು ವಿಶ್ವಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಹೊಂದಿದೆ. ಶೈಕ್ಷಣಿಕವಾಗಿ ಹತ್ತಾರು ಶಾಲಾ ಕಾಲೇಜುಗಳನ್ನು ಹೊಂದಿದ್ದು ಶೈಕ್ಷಣಿಕ ನಗರಿ ಎಂದೂ ಪ್ರಸಿದ್ಧಿ ಹೊಂದಿದೆ. ಕೊಬ್ಬರಿ ಮಾರುಕಟ್ಟೆಗೆ ರಾಜ್ಯಾದ್ಯಂತ ಕೊಬ್ಬರಿ ಬೆಳೆಗಾರರು ಬಂದು ಕೊಬ್ಬರಿ ಮಾರುತ್ತಾರೆ. ದೇಶದ ಹತ್ತಾರು ರಾಜ್ಯಗಳ ವರ್ತಕರು ಬಂದು ಕೊಬ್ಬರಿ ಖರೀದಿಸುವುದರೊಂದಿಗೆ ತಾಲೂಕಿನ ಕೀರ್ತಿ ಪತಾಕೆ ಇಡೀ ದೇಶದಲ್ಲೇ ಹಬ್ಬಿದೆ.
ಸರ್ಕಾರಿ ಪದವಿ ಕಾಲೇಜಿನಲ್ಲಿ 3500 ವಿದ್ಯಾರ್ಥಿಗಳು ಓದುತ್ತಿದ್ದರೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲದೆ ಇಲ್ಲಿನ ಪ್ರತಿಷ್ಠಿತ ಕಲ್ಪತರು ವಿದ್ಯಾಸಂಸ್ಥೆಯು ಮಾಂಟೆಸ್ಸರಿಯಿಂದ ಇಂಜಿನಿಯರಿಂಗ್ ಕಾಲೇಜಿನವರೆಗೂ ವಿವಿಧ ಶಾಲಾ ಕಾಲೇಜು ನಡೆಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ವಿದ್ಯಾ ಸಂಸ್ಥೆ ವಿಶ್ವವಿದ್ಯಾನಿಲಯದ ಅರ್ಹತೆ ಪಡೆದುಕೊಂಡಿದೆ. ತಾಲೂಕಿನ ಪೂರ್ವಕ್ಕೆ ಗುಬ್ಬಿ, ಪಶ್ಚಿಮಕ್ಕೆ ಅರಸೀಕೆರೆ, ಉತ್ತರಕ್ಕೆ ಚಿ.ನಾ.ಹಳ್ಳಿ, ದಕ್ಷಿಣಕ್ಕೆ ತುರುವೇಕೆರೆ ತಾಲೂಕುಗಳಿಗೆ ತಿಪಟೂರು ನಗರ ಕೇವಲ 20ಕಿ.ಮೀ ಅಂತರದಲ್ಲಿದೆ. ಜೊತೆಗೆ ಗಂಡಸಿ, ಹುಳಿಯಾರು ಮತ್ತು ನುಗ್ಗೆಹಳ್ಳಿ ಹೋಬಳಿಗಳು ಸಹ ದೊಡ್ಡ ಹೋಬಳಿಗಳಾಗಿದ್ದು, ಅವು ಕೇವಲ 25 ಕಿ.ಮಿ ಅಂತರದಲ್ಲಿದ್ದು, ತಾಲೂಕಿನ ಜೊತೆ ನೈಸರ್ಗಿಕ, ಸಾಮಾಜಿಕ ಮತ್ತು ವ್ಯವಹಾರಿಕವಾಗಿ ನಿಕಟ ಸಂಪರ್ಕ ಹೊಂದಿ ಬೆಳೆಯುತ್ತಿದ್ದು, ಎಲ್ಲೆಡೆಯು ಪ್ರಮುಖ ಬೆಳೆ ತೆಂಗು ಕಲ್ಪವೃಕ್ಷವಾಗಿ ಸಂಪದ್ಭರಿತ ನಾಡಾಗಿದೆ.
ನೂತನ ಮಂತ್ರಿಗಳ ಸಹಕಾರ ಮುಖ್ಯ: ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸಲು ನೂತನ ಮಂತ್ರಿಗಳಾದ ಡಾ. ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣನವರು ಶಾಸಕ ಕೆ. ಷಡಕ್ಷರಿಯವರಿಗೆ ಸಹಕಾರ ನೀಡಬೇಕಿದೆ. ಈಗಾಗಲೆ ತಿಪಟೂರು ಉಪವಿಭಾಗವಾಗಿ ಕೇಂದ್ರವಾಗಿಯೂ ಅಕ್ಕಪಕ್ಕದ ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲೂಕುಗಳ ನಿತ್ಯ ವ್ಯವಹಾರಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕು ಹತ್ತು ಹಲವು ಪ್ರಸಿದ್ಧ ಹಾಗೂ ಯಾತ್ರಾಸ್ಥಳಗಳನ್ನೊಳಗೊಂಡಿದ್ದು, ಸುಕ್ಷೇತ್ರ ಕೆರೆಗೋಡಿ-ರಂಗಾಪುರ, ದಸರೀಘಟ್ಟಚೌಡೇಶ್ವರಿ, ನೊಣವಿನಕೆರೆ ಕಾಡಸಿದ್ದೇಶ್ವರಮಠ, ಕೋಟನಾಯಕನಹಳ್ಳಿ ಬನಶಂಕರಿ ಮತ್ತಿತರ ಹಲವು ಪ್ರಸಿದ್ಧ ದೇವಸ್ಥಾನಗಳು ರಾಷ್ಟ್ರ, ರಾಜ್ಯದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ್ದು, ಧಾರ್ಮಿಕ ಕೇಂದ್ರವಾಗಿಯೂ ಬೆಳೆದಿದ್ದು ಜಿಲ್ಲಾ ಮಟ್ಟಕ್ಕೆ ಯೋಗ್ಯವಾಗಿರುವ ಎಲ್ಲಾ ಅರ್ಹತೆ ಹೊಂದಿದೆ.
ಜಿಲ್ಲಾ ಮಟ್ಟಕ್ಕೆ ಅಗತ್ಯವಿರುವ ಮಿನಿ ವಿಧಾನಸೌಧ, ಸರ್ಕಾರಿ ಕಛೇರಿಗಳು, ನ್ಯಾಯಾಲಯಗಳು, ಸಾರಿಗೆ ಕಛೇರಿ, ಬಸ್‌ಡಿಪೋ ಸಹ ನಗರ ಹೊಂದಿದ್ದು, ಅಗ್ನಿಶಾಮಕದಳ ಹಾಗೂ 2 ರೈಲ್ವೆ ನಿಲ್ದಾಣಗಳನ್ನು ಪಡೆದ ಖ್ಯಾತಿ ಪಡೆದಿದೆ. ತಾಲೂಕಿನಲ್ಲಿಯೇ ಹೇಮಾವತಿ, ಎತ್ತಿನಹೊಳೆ ನಾಲೆಗಳು ಹಾಯ್ದು ಹೋಗಿದ್ದು ಸಾಕಷ್ಟುನೀರು ಸಿಗುವ ಭರವಸೆ ದೊರೆತಿದ್ದು ಜಿಲ್ಲಾ ಕೇಂದ್ರಕ್ಕೆ ಸಾಕಷ್ಟುನೀರು ಸಹ ಸಿಗಲಿದೆ.
ತಿಪಟೂರು ನಗರ ಬೆಂಗಳೂರು, ಶಿವಮೊಗ್ಗ, ಹೊನ್ನಾವರ, ಹುಬ್ಬಳ್ಳಿ, ಹಾಸನ, ಮಂಗಳೂರಿಗೆ ಸಂಪರ್ಕ ಸೇತುವೆಯಾಗಿ ರೈಲ್ವೆ ಸಾರಿಗೆ ವ್ಯವಸ್ಥೆ ಹೊಂದಿದ್ದು, ಜಿಲ್ಲೆಯಾಗಲು ಎಲ್ಲಾ ಅರ್ಹತೆ ಪಡೆದಿದೆ. ತಿಪಟೂರು ಮುಂದೆ ಜಿಲ್ಲೆಯಾಗಿ ಮಾರ್ಪಾಡಾದರೆ ಕೈಗಾರಿಕಾ ವಲಯ ಹಾಗೂ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಅಭಿವೃದ್ದಿಯಾಗುತ್ತದೆ. ಸರ್ಕಾರಕ್ಕೆ ಅಭಿವೃದ್ಧಿಯ ದೃಷ್ಟಿಯಿಂದ ಚಿಕ್ಕ ಜಿಲ್ಲೆಗಳ ಅವಶ್ಯಕತೆ ತುಂಬಾ ಉಪಯುಕ್ತವಾಗಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮುಖಂಡರು ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಕಲ್ಪತರು ನಾಡಿನ ಸಂಘ ಸಂಸ್ಥೆಗಳು ಸ್ಥಳೀಯ ಜನಪ್ರತಿನಿಧಿಗಳು ಹೋರಾಟಕ್ಕಿಳಿಯಬೇಕೆಂದು ಅರುಣ್‌ಕುಮಾರ್ ಮನವಿ ಮಾಡಿದ್ದಾರೆ.
ಅರುಣ್‌ಕುಮಾರ್