ಕರ್ನಾಟಕದ ಉತ್ತರ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ, ಬಂಡವಾಳ ಹೂಡಿಕೆದಾರರ ಮನವೊಲಿಸುವ ಸಾಹಸ, ಕೈಗಾರಿಕಾ ಕಾರಿಡಾರ್, ಎಸ್‌ಇಝಡ್ ಸ್ಥಾಪನೆ, ಎಫ್‌ಎಂಜಿ ಕ್ಲಸ್ಟರ್, ಎನ್‌ಜಿಇಎಫ್‌ಗೆ ಉತ್ತೇಜನ.
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ(ಮೇ.29): ಉತ್ತರ ಕರ್ನಾಟಕದಲ್ಲೂ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಆ ಮೂಲಕ ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಬೆಂಗಳೂರು, ಮಂಗಳೂರುಗಳಿಗೆ ಜನರು ‘ಗುಳೆ’ ಹೋಗುವುದನ್ನು ತಪ್ಪಿಸಬೇಕೆಂದು ಬಿಜೆಪಿಯ ಜಗದೀಶ ಶೆಟ್ಟರ್, ಮುರಗೇಶ ನಿರಾಣಿ ಕಂಡ ಕನಸು ನನಸು ಮಾಡುವ ಹೊಣೆ ಇದೀಗ ಕಾಂಗ್ರೆಸ್ಸಿನ ಎಂ.ಬಿ. ಪಾಟೀಲ್ ಅವರ ಹೆಗಲಿಗೆ ಬಿದ್ದಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿರುವ ಎಂ.ಬಿ. ಪಾಟೀಲ್ ಅವರಿಗೆ ಶನಿವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ವಹಿಸಿಕೊಂಡಿದ್ದರಿಂದ ಉತ್ತರ ಕರ್ನಾಟಕದ ಖಾಲಿ ಕೈಗಳು ಇವರತ್ತ ಹೊಸ ನಿರೀಕ್ಷೆಯಿಂದ ನೋಡುತ್ತಿವೆ.
ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಹಣ ಬಿಡುಗಡೆ ತಡೆ ಆದೇಶಕ್ಕೆ ಆಕ್ರೋಶ
‘ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ’ಯ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಇತ್ತೀಚಿನ ದಶಕಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಎಲ್ಲ ಪಕ್ಷಗಳೂ ಈ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ಉತ್ತರದ ನಾಯಕರ ಹೆಗಲಿಗೆ ಹಾಕಿ, ಅಸಮಾನತೆಯನ್ನು ನೀವೇ ನಿವಾರಿಸಿ ಎನ್ನುತ್ತಿವೆ.
ಹಾಗಾಗಿ, ತಿರಗಾ-ಮುರಗಾ ಉತ್ತರ ಕರ್ನಾಟಕದ ನಾಯಕರ ಕೈಗೆ ಬರುತ್ತಿದೆ ಈ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ. ಆರ್.ವಿ.ದೇಶಪಾಂಡೆ, ಜಗದೀಶ ಶೆಟ್ಟರ್ ತಲಾ ಒಮ್ಮೆ, ಮುರುಗೇಶ ನಿರಾಣಿ ಎರಡು ಬಾರಿ ಈ ಖಾತೆ ನಿಭಾಯಿಸಿದ್ದಾರೆ. ಆದಾಗ್ಯೂ ಗಮನಾರ್ಹವಾದ ಯಾವುದೇ ಬದಲಾವಣೆಯಾಗದೇ ಜನರು ಉದ್ಯೋಗ ಅರಸಿ ‘ಗುಳೇ’ ಹೋಗುವುದು ಒಂದು ರೀತಿ ಸಂಪ್ರದಾಯವಾಗಿದೆ.
ಕೈಗಾರಿಕಾ ಕಾರಿಡಾರ್:
ಮಹಾನಗರಗಳನ್ನು ಕೇಂದ್ರೀಕರಿಸಿ ಕೈಗಾರಿಕೆಗಳನ್ನು ಸ್ಥಾಪಿಸುತ್ತ ಬಂದಿರುವ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರು ಮತ್ತು ದಕ್ಷಿಣದ ಪ್ರಮುಖ ನಗರಗಳಾದ ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಿದ್ದರಿಂದ ಪ್ರಾದೇಶಿಕ ಅಸಮಾನತೆಯ ಕೂಗು ದಟ್ಟವಾಗಿತ್ತು. ಡಾ. ನಂಜುಂಡಪ್ಪ ಸಮಿತಿ ಕೂಡ ಕೈಗಾರಿಕೆ ಸ್ಥಾಪನೆಯಲ್ಲಾಗಿರುವ ತಾರತಮ್ಯವನ್ನು ನಿವಾರಿಸಿ ಎಂದು ಶಿಫಾರಸು ಮಾಡಿದೆ.
ಹಿಂದೆ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಈ ಖಾತೆ ವಹಿಸಿಕೊಂಡಿದ್ದ ಆರ್.ವಿ. ದೇಶಪಾಂಡೆ ಅವರು, ಸರ್ಕಾರಿ ಸ್ವಾಮ್ಯದ ಎನ್‌ಜಿಎಫ್ ಬೆಂಗಳೂರು ಘಟಕ ಬಾಗಿಲು ಮುಚ್ಚಿದರೂ ಹುಬ್ಬಳ್ಳಿ ಘಟಕವನ್ನು ಜೀವಂತವಾಗಿ ಇರಿಸಿದರು. ಹೀಗೆ ಹಲವು ಕಾರ್ಯಗಳನ್ನು ಮಾಡುವ ಮೂಲಕ ಅಸಮಾನತೆಯ ಗೆರೆ ಅಳಿಸಲು ಯತ್ನಿಸಿದರು.
ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಈ ಖಾತೆ ವಹಿಸಿಕೊಂಡಿದ್ದ ಮುರುಗೇಶ ನಿರಾಣಿ ‘ಕೈಗಾರಿಕಾ ಕಾರಿಡಾರ್, ಭೂ ಬ್ಯಾಂಕ್’ ಎಂಬ ಹೊಸ ಕಲ್ಪನೆ ಹುಟ್ಟುಹಾಕಿ ಬೆಂಗಳೂರು-ಪುಣೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲದ ನೆಲವನ್ನು ಕೈಗಾರಿಕೆ ಪ್ರದೇಶ ಎಂದು ಘೋಷಿಸಿದರು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಕ್ಕೂ ಉದ್ಯಮಿಗಳು ಬರುವಂತೆ ಮಾಡಿದರು. ಮತ್ತೊಂದು ಬಾರಿ ಖಾತೆ ವಹಿಸಿಕೊಂಡಾಗಲೂ ಉತ್ತರದತ್ತ ಕೈಗಾರಿಕೆಗಳನ್ನು ಕರೆತರಲು ಯತ್ನಿಸಿದರು.
ಬಿಯಾಂಡ್ ದಿ ಬೆಂಗಳೂರು:
ಯಡಿಯೂರಪ್ಪ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾಗಿದ್ದ ಜಗದೀಶ ಶೆಟ್ಟರ್ ಒಂದು ಹೆಜ್ಜೆ ಮುಂದೆ ಹೋಗಿ ‘ಬಿಯಾಂಡ್ ದಿ ಬೆಂಗಳೂರು’ ಎನ್ನುವ ಹೊಸ ಕಲ್ಪನೆ ಹುಟ್ಟುಹಾಕಿ ರಾಜಧಾನಿ ಬೆಂಗಳೂರು ಹೊರತು ಪಡಿಸಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ, ಹಾವೇರಿಯಲ್ಲೂ ಕೈಗಾರಿಕೆ ಸ್ಥಾಪನೆಗೆ ವೇದಿಕೆ ಸಜ್ಜು ಮಾಡಿದ್ದರು.
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿ 14 ಜಿಲ್ಲೆಗಳಲ್ಲೂ ಒಂದಿಲ್ಲಾ ಒಂದು ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ಆಯಾ ಜಿಲ್ಲೆಯ ಜನತೆಗೆ ಅಲ್ಲಲ್ಲೇ ಉದ್ಯೋಗ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಎಸ್‌ಇಝಡ್ (ವಿಶೇಷ ಆರ್ಥಿಕ ವಲಯ) ಸ್ಥಾಪನೆ ಎಲ್ಲ ಸಿದ್ಧತೆಯೂ ಆಗಿ ಘೋಷನೆಯೊಂದೇ ಬಾಕಿ ಇತ್ತು.
ಹುಬ್ಬಳ್ಳಿಯಲ್ಲಿ ನಡೆದ ‘ಬಿಯಾಂಡ್ ದಿ ಬೆಂಗಳೂರು’ ಸಮಾವೇಶದಲ್ಲಿ ಸಾಕಷ್ಟುಅನುದಾನ ಹರಿದು ಬಂದು, ಕೊಪ್ಪಳದಲ್ಲಿ ಆಟಿಗೆ ಕ್ಲಸ್ಟರ್, ಹಲವು ಜಿಲ್ಲೆಗಳಲ್ಲಿ ಜವಳಿ ಪಾರ್ಕ್, ಫುಡ್ ಪಾರ್ಕ್ಗಳಿಗೆ ಅನುಮೋದನೆ ದೊರೆತಿದೆ.
ಎಫ್‌ಎಂಜಿ ಕ್ಲಸ್ಟರ್ ಸ್ಥಾಪನೆಗೆ ಶೆಟ್ಟರ್ ಸಾಕಷ್ಟುಶ್ರಮ ಹಾಕಿ ಒಂದು ಹಂತಕ್ಕೆ ತಂದಿದ್ದಾರೆ. ಅದನ್ನು ಅಷ್ಟೇ ವೇಗದಲ್ಲಿ ಮುಂದುವರೆಸಿದರೆ ಸಾವಿರಾರು ಜನರಿಗೆ ಉದ್ಯೋಗ ಸಿಗುವ ಜತೆಗೆ ಜನತೆಗೆ ಅಗ್ಗದ ದರದಲ್ಲಿ ನಿತ್ಯೋಪಯೋಗಿ ವಸ್ತುಗಳು ಈ ಭಾಗದ ಜನತೆಗೆ ಲಭಿಸುತ್ತವೆ. ದೊಡ್ಡ ಮಟ್ಟದ ಬಂಡವಾಳ ಹರಿದು ಬರುವ ಯೋಜನೆ ಇದು.
Karnataka cabinet: ಕಲಘಟಗಿ ಕ್ಷೇತ್ರಕ್ಕೆ ಸಂತೋಷ್ ತಂದ ಲಾಡ್ ಸಚಿವ ಸ್ಥಾನ!
ಸ್ವಂತ ಉದ್ಯಮ ಅಭಿವೃದ್ಧಿ:
ಎರಡು ಬಾರಿ ಕೈಗಾರಿಕೆ ಸಚಿವರಾಗಿದ್ದ ಮುರಗೇಶ ನಿರಾಣಿ ಒಂದೇ ಒಂದು ಸರ್ಕಾರಿ ಕೈಗಾರಿಕೆ ಆರಂಭಿಸಲಿಲ್ಲ. ಬದಲಾಗಿ ತಮ್ಮ ‘ನಿರಾಣಿ ಗ್ರೂಫ್ಸ್’ ಸಾಕಷ್ಟುವಿಸ್ತರಿಸಿ 17 ಕೈಗಾರಿಕೆಗಳನ್ನು ಅದರ ಮಡಿಲಿಗೆ ಹಾಕಿದರು. ಶೆಟ್ಟರ್ ಕೂಡ ಸರ್ಕಾರಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಿಲ್ಲ ಎನ್ನುವ ಅಪಸ್ವರ ದಟ್ಟವಾಗಿದೆ.
ಚಾಲ್ತಿಯಲ್ಲಿರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಉತ್ತರಕ್ಕೆ ಬಂಡವಾಳ ಹರಿದು ಬರುವಂತೆ ಮಾಡುವುದು. ಜತೆಗೆ ಸರ್ಕಾರಿ ಕೈಗಾರಿಕೆ ಸ್ಥಾಪಿಸುವ ಕುರಿಂದತೆ ಎಂ.ಬಿ.ಪಾಟೀಲರ ಮೇಲೆ ಉತ್ತರದ ಜನ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.