ಮಳೆಗಾಲ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರದಲ್ಲಿ ಮಳೆ ನೀರಿನಿಂದ ಯಾವುದೇ ರೀತಿಯ ಅವಘಡಗಳು ನಡೆಯದಂತೆ ಈಗಾಗಲೇ ಕಳೆದ 1 ತಿಂಗಳಿಂದ ಪಾಲಿಕೆ ಅಧಿಕಾರಿಗಳು ಅಗತ್ಯ ಮುಂಜಾಗರೂಕತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ (ಜೂ.16) ಮಳೆಗಾಲ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರದಲ್ಲಿ ಮಳೆ ನೀರಿನಿಂದ ಯಾವುದೇ ರೀತಿಯ ಅವಘಡಗಳು ನಡೆಯದಂತೆ ಈಗಾಗಲೇ ಕಳೆದ 1 ತಿಂಗಳಿಂದ ಪಾಲಿಕೆ ಅಧಿಕಾರಿಗಳು ಅಗತ್ಯ ಮುಂಜಾಗರೂಕತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಹಲವು ವಾರ್ಡ್‌ಗಳಲ್ಲಿ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇನ್ನು ಕೆಲವು ವಾರ್ಡ್‌ಗಳಲ್ಲಿ ರಾಜಕಾಲುವೆಗಳ ಹೂಳೆತ್ತದೇ ಇರುವ ಹಿನ್ನೆಲೆಯಲ್ಲಿ ಕಾಲುವೆ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅಗತ್ಯ ಮುಂಜಾಗರೂಕತೆ ಕ್ರಮ ಕೈಗೊಂಡಿದ್ದಾರೆ.
ಜೂನ್ 20ಕ್ಕೆ ಚುನಾವಣೆ ನಿಗದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಯಾರಾಗ್ತಾರೆ ಮೇಯರ್?
ಪ್ರತಿ ವಲಯಕ್ಕೆ 10ಲಕ್ಷರೂ.:
ಮಳೆಯಿಂದಾಗಿ ಮಹಾನಗರದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಂಡಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 12 ವಲಯಗಳಿದ್ದು, ಪ್ರತಿ ವಲಯಕ್ಕೂ .10 ಲಕ್ಷ ಮೀಸಲಿರಿಸಿದೆ. ಪ್ರತಿ ವಲಯಕ್ಕೂ 5ರಿಂದ 6 ವಾರ್ಡ್‌ಗಳು ಬರಲಿವೆ. ಪ್ರತಿ ವಾರ್ಡ್‌ಗಳಲ್ಲಿ ಹೂಳು ತುಂಬಿದ ಚರಂಡಿಯ ಹೂಳೆತ್ತುವುದು, ದುರಸ್ತಿ, ರಾಜಕಾಲುವೆ ದುರಸ್ತಿ ಸೇರಿದಂತೆ ಹಲವು ಕೆಲಸಗಳಿಗೆ ಈ ಹಣ ಬಳಕೆಗೆ ನಿರ್ದೇಶನ ನೀಡಲಾಗಿದೆ.
ತಿಂಗಳ ಮೊದಲೇ ಕಾರ್ಯ ಪ್ರಗತಿಯಲ್ಲಿ:
ಮಳೆಗಾಲ ಆರಂಭವಾಗುವ ಪೂರ್ವದಲ್ಲಿಯೇ ಅಂದರೆ ಕಳೆದ ಮೇ ತಿಂಗಳಿಂದಲೇ ಪಾಲಿಕೆ ಮುಂಜಾಗರೂಕತೆ ಕ್ರಮಗಳನ್ನು ಕೈಗೊಂಡಿದೆ. ಹು-ಧಾ ಮಹಾನಗರದಲ್ಲಿರುವ ಶೇ.70ಕ್ಕೂ ಅಧಿಕ ರಾಜಕಾಲುವೆಗಳ ಹೂಳೆತ್ತಲಾಗಿದೆ. 12 ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಚರಂಡಿಗಳ ಹೂಳು ತೆರೆವುಗೊಳಿಸುವುದು, ದುರಸ್ತಿಗೆ ಕ್ರಮ ಕೈಗೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ದೇಶಪಾಂಡೆ ನಗರದಲ್ಲಿರುವ ರಾಜಕಾಲುವೆಯ ನೀರು ರಸ್ತೆಯ ಮೇಲೆ ಹರಿದು ಅವಾಂತರ ಸೃಷ್ಟಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತರು ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ರಾಜಕಾಲುವೆ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿರುವ ಪ್ರದೇಶದ ತೆರವಿಗೆ ಹಾಗೂ ಹೂಳೆತ್ತಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈಗಾಗಲೇ ಈ ರಾಜಕಾಲುವೆಯ ಅಕ್ಕಪಕ್ಕದಲ್ಲಿ ಒತ್ತುವರಿ ಮಾಡಿಕೊಂಡ ಜಾಗವನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಹೂಳೆತ್ತುವ ಕಾಮಗಾರಿಯೂ ಭರದಿಂದ ನಡೆಯುತ್ತಿದೆ.
ಬ್ಲಾಕ್ ಸ್ಪಾಟ್ ಗುರುತು:
ಬೆಂಗಳೂರಿನಲ್ಲಿ ಆಗುವ ಹಾನಿಯಂತೆ ಹು-ಧಾ ಮಹಾನಗರದಲ್ಲಿ ಹಾನಿಮಾಡಬಹುದಾದ ಯಾವುದೇ ಪ್ರದೇಶಗಳಿಲ್ಲ. ಆದರೂ ಮಳೆಯಾದರೆ ಹೆಚ್ಚಿನ ತೊಂದರೆ ಮಾಡುವ ಪ್ರದೇಶಗಳನ್ನು ಪಾಲಿಕೆ ಗುರುತಿಸಿದೆ. ಅವುಗಳಲ್ಲಿ ಪ್ರಮುಖವಾಗಿರುವ ಕೆಎಂಎಫ್ ಪ್ರದೇಶ, ಹಳೇ ಹುಬ್ಬಳ್ಳಿ, ಮೋಮಿನ್ ಪ್ಲಾಟ್, ಕಸಬಾಪೇಟೆ ಈ ಪ್ರದೇಶಗಳನ್ನು ಪಾಲಿಕೆ ಬ್ಲಾಕ್ ಸ್ಪಾಟ್ ಎಂದು ಗುರುತಿಸಿದ್ದು, ಅಲ್ಲಿ ಮಳೆಯಿಂದಾಗಿ ಏನಾದರೂ ತೊಂದರೆಯಾಗದಂತೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ.
ಪಾಲಿಕೆ ಅಧಿಕಾರಿಗಳು ಹಾಗೂ ಮೇಯರ್ ಮಳೆಯಾದಲ್ಲಿ ಜನರಿಗೆ ಹೆಚ್ಚಿನ ತೊಂದರೆಯಾಗದಂತೆ ಅಗತ್ಯ ಮುಂಜಾಗರೂಕತೆ ಕೈಗೊಂಡಿರುವುದು ಅವಳಿ ನಗರದಲ್ಲಿ ಸಂಚರಿಸಿದ ವೇಳೆ ಕಂಡುಬರುವ ಸ್ಥಿತಿಗತಿ.
4 ತುರ್ತುವಾಹನ ವ್ಯವಸ್ಥೆ
ಮಳೆಯಿಂದ ಹಾನಿ, ಚರಂಡಿ ತುಂಬುವುದು, ಕಾಲುವೆ ನೀರು ನುಗ್ಗುವುದು ಸೇರಿದಂತೆ ಯಾವುದಾದರೂ ಅವಘಡ ನಡೆದರೆ ಹಾನಿಯಾದ ಸ್ಥಳಕ್ಕೆ ತುರ್ತಾಗಿ ಹೋಗಲು ಪಾಲಿಕೆಯಿಂದ 4 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇವು ಘಟನೆ ನಡೆದ ಅರ್ಧಗಂಟೆಯಲ್ಲಿಯೇ ಸ್ಥಳಕ್ಕೆ ತೆರಳಿ ಅಲ್ಲಿನ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುತ್ತಿವೆ.
ಧಾರವಾಡ: ಮಳೆಗಾಲಕ್ಕೆ ಮುನ್ನ ಮಹಾನಗರ ರಾಜಕಾಲುವೆ ಒತ್ತುವರಿ ತೆರವು
ಮಳೆಗಾಲದಲ್ಲಿ ಹು-ಧಾ ಮಹಾನಗರದಲ್ಲಿ ಯಾವುದೇ ತೊಂದರೆಯಾಗದಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಭಾಗಶಃ ಎಲ್ಲ ವಾರ್ಡ್‌ಗಳಲ್ಲಿರುವ ಚರಂಡಿ, ಕಾಲುವೆಗಳ ಹೂಳೆತ್ತಲಾಗಿದೆ. ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ತೆರವುಗೊಳಿಸಿ ಮತ್ತೆ ಅಲ್ಲಿ ಕಟ್ಟಡ ನಿರ್ಮಿಸದಂತೆ ತಾಕೀತು ಮಾಡಲಾಗಿದೆ.
- ಈರೇಶ ಅಂಚಟಗೇರಿ, ಹು-ಧಾ ಮಹಾನಗರ ಪಾಲಿಕೆ ಮೇಯರ್