
ಬೆಂಗಳೂರು (ಜು.31): ದಿನನಿತ್ಯದ ನಾನಾ ಕೆಲಸಗಳಿಗೆ ನಂಬಿಕಸ್ಥ ಕೆಲಸಗಾರರು ಸಿಗದೆ ಪರದಾಡುತ್ತಿರುವ ಸಾರ್ವಜನಿಕರಿಗೆ ಹಾಗೂ ತಮ್ಮ ಕೌಶಲ್ಯಕ್ಕೆ ತಕ್ಕ ಕೆಲಸ ಹುಡುಕುತ್ತಿರುವ ಕಾರ್ಮಿಕರಿಗೆ ನೆರವಾಗಲು ಬನವಾಸಿ ಸಮೀಪದ ಕೃಷಿಕ ಹಾಗೂ ಐಟಿ ಎಂಜಿನಿಯರ್ ಗೌತಮ್ ಬೆಂಗಳೆ ಎಂಬುವವರು 'ದ ಮೇಸ್ತ್ರಿ' (The Mestri) ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿದ್ದುಕೊಂಡೇ ಅತ್ಯುತ್ತಮ ಮಾದರಿಯ ಐಟಿ ಕಂಪನಿ ನಡೆಸುತ್ತಿರುವ ಗೌತಮ್ ಬೆಂಗಳೆ ಅವರ ಈ ಆವಿಷ್ಕಾರವು, ಸಮಾಜದ ಪ್ರತಿಯೊಬ್ಬರಿಗೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ಸೇವೆಗಳನ್ನು ಬೆರಳ ತುದಿಯಲ್ಲೇ ಒದಗಿಸುವ ಉದ್ದೇಶವನ್ನು ಹೊಂದಿದೆ.
ಈ ಅಪ್ಲಿಕೇಶನ್‌ನಲ್ಲಿ ವಿವಿಧ ರಂಗಗಳ ಕೌಶಲ್ಯಪೂರಿತ ಕೆಲಸಗಾರರು ಹಾಗೂ ಸೇವಾ ಪೂರೈಕೆದಾರರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಮುಖ್ಯವಾಗಿ ಈ ಅಪ್ಲಿಕೇಶನ್ ಮೂಲಕ ಎಲೆಕ್ಟ್ರಿಷಿಯನ್,ಪ್ಲಂಬಿಂಗ್ ಕೆಲಸಗಾರರು, ಪೇಂಟರ್, ಅಡುಗೆ ಕೆಲಸದವರು, ಬಾಡಿಗೆ ವಾಹನ ಮಾಲೀಕರು ಮತ್ತು ಚಾಲಕರು, ಮಣ್ಣು ಹೊಯ್ದುಕೊಡುವವರು, ತೋಟದ ಕೆಲಸ ಹಾಗೂ ಮದ್ದು ಸಿಂಪಡಿಸುವ ಕಾರ್ಮಿಕರು, ಜೆಸಿಬಿ (JCB) ಹಾಗೂ ಇತರ ಯಂತ್ರೋಪಕರಣ ಪೂರೈಕೆದಾರರು ಸೇರಿದಂತೆ ಹಲವು ಕ್ಷೇತ್ರದ ಕೆಲಸಗಾರರು ಇದರಲ್ಲಿ ಸಿಗುತ್ತಾರೆ.
ಸಾಮಾನ್ಯ ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ತಮ್ಮ ಸ್ಥಳಕ್ಕೆ ಹತ್ತಿರದಲ್ಲಿರುವ ಅಥವಾ ಕೆಲಸದ ದರದ ಆಧಾರದ ಮೇಲೆ ತಮಗೆ ಇಷ್ಟವಾದ ಕೆಲಸಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದು ಕೆಲಸ ಹುಡುಕುವವರಿಗೂ ಮತ್ತು ಕೆಲಸದ ಅವಶ್ಯಕತೆ ಇರುವವರಿಗೂ ಅತ್ಯುತ್ತಮ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
ಈಗಾಗಲೇ ಈ ಅಪ್ಲಿಕೇಶನ್‌ನಲ್ಲಿ 2,500ಕ್ಕೂ (ಎರಡೂವರೆ ಸಾವಿರ) ಹೆಚ್ಚು ವಿವಿಧ ಕೌಶಲ್ಯ ಹೊಂದಿರುವ ಕೆಲಸಗಾರರು ನೋಂದಾಯಿಸಿಕೊಂಡಿದ್ದು, ಪ್ರತಿದಿನ ಹೊಸ ನೋಂದಣಿಗಳು ನಡೆಯುತ್ತಿವೆ. ಸದ್ಯಕ್ಕೆ ಪ್ರಾಥಮಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇದನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.
ಪ್ಲೇ ಸ್ಟೋರ್‌ನಲ್ಲಿ (Google Play Store) "The mestri" ಎಂದು ಟೈಪ್ ಮಾಡಿ ಸರ್ಚ್ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಈ ಅಪ್ಲಿಕೇಶನ್ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.