Crime news : ಪತ್ನಿ ಕೊಲೆ ಮಾಡಲು ಯತ್ನಿಸಿದ್ದ ಪತಿಗೆ 10 ವರ್ಷ ಕಠಿಣ ಶಿಕ್ಷೆ

By Kannadaprabha News  |  First Published Nov 29, 2022, 5:37 AM IST

ಪತ್ನಿ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದ ಪತಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು . 12 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.


 ಮೈಸೂರು (ನ. 29) :  ಪತ್ನಿ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದ ಪತಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು . 12 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಹುಣಸೂರು (Husnur)  ತಾಲೂಕು ಹೊಸಪುರ ಗ್ರಾಮದ ಲೇ. ಮಹದೇವನಾಯಕ ಎಂಬವರ ಪುತ್ರ ಕಾಳನಾಯಕ ಶಿಕ್ಷೆಗೆ ಗುರಿಯಾದವನು. ಈತ 14 ವರ್ಷಗಳ ಹಿಂದೆ ಹುಣಸೂರು ತಾಲೂಕು ಚಲ್ಲಹಳ್ಳಿ ಗ್ರಾಮದ ಮಂಗಳಮ್ಮ ಎಂಬವರನ್ನು ಮದುವೆಯಾಗಿದ್ದು (marriage) , ಇವರಿಗೆ ಇಬ್ಬರು ಮಕ್ಕಳು ಇದ್ದರು. ಮದುವೆಯಾದ 7 ರಿಂದ 8 ವರ್ಷ ಅನ್ಯೋನ್ಯತೆಯಿಂದ ಇದ್ದರು. ಆ ನಂತರದಲ್ಲಿ ಕಾಳನಾಯಕನು ಕುಡಿದು ಬಂದು ಪತ್ನಿ ಮಂಗಳಮ್ಮ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ.

Latest Videos

undefined

ಹೀಗಿರುವಾಗಿ 2017ರ ಫೆಬ್ರವರಿ 4ರ ಮಧ್ಯಾಹ್ನ 3.30ರಲ್ಲಿ ಮನೆಯಲ್ಲಿ ಮಕ್ಕಳ ಜೊತೆಗೆ ಇದ್ದ ಪತ್ನಿ ಮಂಗಳಮ್ಮನನ್ನು ನೀನು ಮನೆ ಬಿಟ್ಟು ಹೋಗು ಎಂದು ಜಗಳ ತೆಗೆದು, ನೀನು ಸತ್ತು ಹೋದರೆ, ನಾನು ಇನ್ನೊಂದು ಮದುವೆಯಾಗುತ್ತೇನೆ ಎಂದು ಹೇಳಿ ಗಲಾಟೆ ಮಾಡಿ, ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದ. ಇದರಿಂದ ಕುತ್ತಿಗೆಯಿಂದ ಪಾದದವರೆಗೂ ಶೇ.54 ರಷ್ಟುಭಾಗ ಮಂಗಳಮ್ಮ ಅವರಿಗೆ ಸುಟ್ಟಗಾಯಗಳಾಗಿದ್ದವು.

ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಎಸ್‌ಐ ಎಸ್‌.ಬಿ. ನವೀನ್‌ಗೌಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು, ಸಾಕ್ಷ್ಯಾಧಾರಗಳಿಂದ ಮಂಗಳಮ್ಮ ಅವರನ್ನು ಕಾಳನಾಯಕ ಕೊಲೆ ಮಾಡಲು ಪ್ರಯತ್ನಿಸಿರುವುದು ಸಾಬೀತಾಗಿದೆ ಎಂದು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ . 12 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್‌ ವಾದಿಸಿದ್ದರು.

ಪತ್ನಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದ  ಪತಿ ಆಂಧ್ರದಲ್ಲಿ ಶವವಾಗಿ ಪತ್ತೆ

ಇತ್ತೀಚೆಗೆ ಶೀಲ ಶಂಕಿಸಿ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯ ಮೃತದೇಹ ಆಂಧ್ರ ಪ್ರದೇಶದ ಪ್ರಾರ್ಥನಾ ಮಂದಿರವೊಂದರ ಮುಂದೆ ರಸ್ತೆ ಬದಿ ಪತ್ತೆಯಾಗಿದೆ.

ರಾಜೇಂದ್ರನಗರದ ನಿವಾಸಿ ಆಯೇಷಾ (45) ಹತ್ಯೆಗೀಡಾದ ದುರ್ದೈವಿ. ಆಂಧ್ರ ಪ್ರದೇಶದ ಪೆನುಗೊಂಡ ಪಟ್ಟಣ ಮಸೀದಿಯೊಂದರ ಬಳಿ ಮೃತಳ ಪತಿ ನಿಸಾರ್‌ (50) ಮೃತ ದೇಹ ಪತ್ತೆಯಾಗಿದ್ದು, ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಪೆಟ್ರೋಲ್‌ ತಂದು ಸುರಿದು ಬೆಂಕಿ ಹಚ್ಚಿದ:

ದಶಕಗಳ ಹಿಂದೆ ನಿಸಾರ್‌ ಹಾಗೂ ಆಯೇಷಾ ವಿವಾಹವಾಗಿದ್ದು, ರಾಜೇಂದ್ರ ನಗರದಲ್ಲಿ ದಂಪತಿ ನೆಲೆಸಿದ್ದರು. ಇತ್ತೀಚೆಗೆ ಪತ್ನಿ ನಡವಳಿಕೆ ಮೇಲೆ ಗುಮಾನಿಗೊಂಡ ಆತ, ಇದೇ ವಿಚಾರವಾಗಿ ಮನೆಯಲ್ಲಿ ಜಗಳ ಮಾಡುತ್ತಿದ್ದ. ಕೊನೆಗೆ ಪತ್ನಿ ಕೊಲೆ ಮಾಡಲು ನ.19ರಂದು ಬಂಕ್‌ನಿಂದ ಪೆಟ್ರೋಲ್‌ ಖರೀದಿಸಿ ಮನೆಗೆ ಬಂದಿದ್ದ. ಮಧ್ಯಾಹ್ನ 3ರ ಸುಮಾರಿಗೆ ಮನೆಯಲ್ಲಿದ್ದ ಪತ್ನಿ ಮೇಲೆ ಪೆಟ್ರೋಲ್‌ ಸುರಿದು ಆತ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆಗ ಆಯೇಷಾ, ಪತಿಯನ್ನು ಬಲವಂತವಾಗಿ ಹೊರಗೆ ದೂಡಿ ಬಾಗಿಲು ಹಾಕಿಕೊಂಡಿದ್ದಳು. ಇದರಿಂದ ಕೆರಳಿದ ಆತ, ಕಿಟಕಿ ಗಾಜನ್ನು ಒಡೆದು ಬೆಂಕಿ ಕಡ್ಡಿ ಗೀರಿ ಪತ್ನಿ ಮೇಲೆ ಎಸೆದಿದ್ದಾನೆ. ಈ ವೇಳೆ ಕಿಟಕಿ ಗಾಜು ಚುಚ್ಚಿ ನಿಸಾರ್‌ ಕೈಗೆ ಗಂಭೀರ ಪೆಟ್ಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೆಟ್ರೋಲ್‌ ಸುರಿದ್ದರಿಂದ ಬೆಂಕಿ ಕಡ್ಡಿ ತಾಕಿದ ಕೂಡಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಆಯೇಷಾ ಪಾರಾಗಲು ಸಾಧ್ಯವಾಗಲಿಲ್ಲ. ಆಗ ರಕ್ಷಣೆಗೆ ಆಕೆ ಕೂಗಿಕೊಳ್ಳುತ್ತಿದ್ದಂತೆ ನಿಸಾರ್‌ ಓಡಿ ಹೋಗಿದ್ದ. ಬಳಿಕ ಅಲ್ಲಿಂದ ಆಂಧ್ರ ಪ್ರದೇಶಕ್ಕೆ ಬಸ್‌ನಲ್ಲಿ ಹೋಗಿದ್ದನು. ಇತ್ತ ಆಯೇಷಾಳನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮರುದಿನ ಕೊನೆಯುಸಿರೆಳೆದಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಸಾಯುವ ಮುನ್ನ ಆಯೇಷಾ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಆಕೆಯ ಪತಿ ಪತ್ತೆಗೆ ಹುಡುಕಾಟ ಆರಂಭಿಸಿದ್ದರು. ಆದರೆ ಮೊಬೈಲ್‌ ಸ್ವಿಚ್‌ಆಫ್‌ ಮಾಡಿಕೊಂಡಿದ್ದ ಆರೋಪಿ ಕೊನೆ ಬಾರಿಗೆ ಆಂಧ್ರ ಪ್ರದೇಶದಲ್ಲಿ ಸಂಪರ್ಕ ಹೊಂದಿದ್ದು ಗೊತ್ತಾಯಿತು. ಈ ಸುಳಿವು ಆಧರಿಸಿ ಆಂಧ್ರ ಪ್ರದೇಶದ ಮದನಪಲ್ಲಿಗೆ ತೆರಳಿದ್ದ ಪೊಲೀಸರು, ಎರಡು ದಿನ ಹುಡುಕಾಡಿ ನಗರಕ್ಕೆ ಮರಳಿತು. ಆದರೆ ಭಾನುವಾರ ಮೃತನಿಗೆ ಆತನ ಪುತ್ರ ಕರೆ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ಸ್ಥಳೀಯರು, ಪೆನುಗೊಂಡದ ಮಸೀದಿ ಸಮೀಪ ನಿಮ್ಮ ತಂದೆ ಮೃತದೇಹ ಪತ್ತೆಯಾಗಿದೆ ಎಂದಿದ್ದಾರೆ. ಕೂಡಲೇ ಈ ಮಾಹಿತಿಯನ್ನು ಆಡುಗೋಡಿ ಪೊಲೀಸರಿಗೆ ಆತ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!