ಕಲ್ಪತರು ನಾಡು, ಪ್ರಸಿದ್ಧ ಕೊಬ್ಬರಿ ನಗರಿಯಾದ ತಿಪಟೂರು ವಿಧಾನಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ತಾಲೂಕಿನಾದ್ಯಂತ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆಯಲ್ಲಿ ತೊಡಗಿದ್ದು ಪ್ರಸ್ತುತ ರಾಜಕೀಯ ವಾತಾವರಣ ನೋಡಿದರೆ ಇದುವರೆಗೂ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಿಂತ ವಿಭಿನ್ನವಾಗಿದೆ.
ತಿಪಟೂರು : ಕಲ್ಪತರು ನಾಡು, ಪ್ರಸಿದ್ಧ ಕೊಬ್ಬರಿ ನಗರಿಯಾದ ತಿಪಟೂರು ವಿಧಾನಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ತಾಲೂಕಿನಾದ್ಯಂತ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆಯಲ್ಲಿ ತೊಡಗಿದ್ದು ಪ್ರಸ್ತುತ ರಾಜಕೀಯ ವಾತಾವರಣ ನೋಡಿದರೆ ಇದುವರೆಗೂ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಿಂತ ವಿಭಿನ್ನವಾಗಿದೆ.
ತಾಲೂಕಿನಲ್ಲಿನ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಬಿರು ಬಿಸಿಲಿನಲ್ಲಿಯೂ ಮನೆ ಮನೆ ಬಾಗಿಲಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಅಧಿಕಾರವಿದ್ದಾಗ ಕ್ಯಾರೆ ಎನ್ನದ ಜನಪ್ರತಿನಿಧಿಗಳು ಈಗ ಅಮ್ಮ-ಅಪ್ಪ, ಅಕ್ಕ ಚೆನ್ನಾಗಿದ್ದೀರಾ, ಅಣ್ಣ ಚೆನ್ನಾಗಿದ್ದೀರಾ ಈ ಬಾರಿ ನಿಮ್ಮ ಓಟು ನನಗೇ ನೀಡಬೇಕೆಂದು ತಮ್ಮ ತಮ್ಮ ಪಕ್ಷದ ಸಾಧನೆ, ಮುಂದಿನ ಭರವಸೆಗಳ ಬಗ್ಗೆ ಹೇಳಿಕೊಂಡು ಓಟಿಗಾಗಿ ಅಂಗಲಾಚುತ್ತಿದ್ದಾರೆ.
ಪಕ್ಷದಿಂದ ಮಾಜಿ ಶಾಸಕ ಕೆ. ಷಡಕ್ಷರಿಯವರಿಗೆ ಟಿಕೆಟ್ ನಿಶ್ಚಯವಾಗಿದ್ದು ತಮ್ಮ ಅಪಾರ ಬೆಂಬಲಿಗರೊಂದಿಗೆ ಹಳ್ಳಿ ಹಳ್ಳಿಗಳಿಗೆ ತೆರಳಿ ಜನರನ್ನು ಮಾತನಾಡಿಸುತ್ತಾ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ತಾವು ಶಾಸಕರಾಗಿದ್ದಾಗ ಮಾಡಿದ ಜನಪರ ಕಾರ್ಯಗಳನ್ನು ಮಾನದಂಡವಾಗಿಟ್ಟುಕೊಂಡು ಈಗ ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಜನರಿಗೆ ಮನವರಿಕೆ ಮಾಡುತ್ತಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಷಡಕ್ಷರಿಯವರಿಗೆ ಕಾಂಗ್ರೆಸ್ ಮುಖಂಡ ಲೋಕೇಶ್ವರ ಸಹ ಸಾಥ್ ನೀಡಿದ್ದು ಕಾಂಗ್ರೆಸ್‌ಗೆ ಆನೆಬಲ ಬಂದತಾಂಗಿದೆ ಎಂಬುದು ಕಾರ್ಯಕರ್ತರ ಅನಿಸಿಕೆಯಾಗಿದೆ. ಲೋಕೇಶ್ವರರವರು ಒಂದು ಬಾರಿ ಕೆಜೆಪಿ ಮತ್ತು ಮತ್ತೊಂದು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾವಭವಗೊಂಡಿದ್ದರೂ ಸಹ ಸೋಲು-ಗೆಲುವು ಲೆಕ್ಕಿಸದೆ ಕಳೆದ ಹತ್ತಾರು ವರ್ಷಗಳಿಂದಲೂ ನಿರಂತರ ಜನಸಂಪರ್ಕದಲ್ಲಿದ್ದು ಕೊರೋನಾ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಜನ ಈಗಲೂ ಸ್ಮರಿಸುತ್ತಿದ್ದು ಎರಡೂ ಕಡೆಯ ಕಾರ್ಯಕರ್ತರು ಅಭ್ಯರ್ಥಿ ಕೆ. ಷಡಕ್ಷರಿ ಪರ ಮತಯಾಚನೆ ತೊಡಗಿದ್ದಾರೆ.
ಜೆಡಿಎಸ್ ಪಕ್ಷದಿಂದ ಸಮಾಜ ಸೇವಕ ಕೆ.ಟಿ. ಶಾಂತಕುಮಾರ್‌ಗೆ ಟಿಕೆಟ್ ಎಂದು ಖುದ್ದು ಪಕ್ಷದ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿಯವರೇ ಪಂಚರತ್ನ ರಥಯಾತ್ರೆಯ ವೇಳೆ ಘೋಷಣೆ ಮಾಡಿದ್ದು ಪಕ್ಷದಿಂದ ಬಿಡುಗಡೆ ಮಾಡಿದ ಪಟ್ಟಿಯಲ್ಲಿಯೂ ಶಾಂತಕುಮಾರ್ ಹೆಸರು ಇದ್ದು ಇವರೇ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ. ತಾಲೂಕಿನ ಜನತೆಯ ನಿರಂತರ ಸಂಪರ್ಕದಲ್ಲಿದ್ದು ಹಲವಾರು ಸೇವೆಗಳನ್ನು ಮಾಡುತ್ತ ಬಂದಿದ್ದಾರೆ. ತಾವು ಮಾಡಿರುವ ಸೇವೆಗಳನ್ನು ಜನತೆಗೆ ನೆನಪಿಸುವ ಮೂಲಕ ತಮ್ಮ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ನನಗೊಂದು ಬಾರಿ ಅವಕಾಶ ಕೊಡಿ ಎಂದು ಮತಯಾಚಿಸುತ್ತಿದ್ದಾರೆ.
ಬಿಜೆಪಿ ಪಕ್ಷದಿಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತ ಪ್ರಚಾರದಲ್ಲಿ ತೊಡಗಿದ್ದು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಪಕ್ಷದ ಪ್ರಣಾಳಿಕೆಯ ಬಗ್ಗೆಯೂ ಜನರಿಗೆ ಮನವರಿಕೆ ಮಾಡುತ್ತಾ ಮತ್ತೊಂದು ಬಾರಿ ಅವಕಾಶ ಕೊಡಿ ಎಂದು ಜನತೆಯಲ್ಲಿ ಮನವಿ ಮಾಡುತ್ತಿರುವುದು ಕಂಡುಬರುತ್ತಿದೆ.
ಮತ್ತೋರ್ವ ಕಾಂಗ್ರೆಸ್ ಮುಖಂಡ ಟೂಡ ಸಿ.ಬಿ. ಶಶಿಧರ್ ಸಹ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿ ಹೋರಾಟ ಕಟ್ಟಿಹತ್ತು ಹಲವಾರು ಸಭೆಗಳನ್ನು ನಡೆಸಿ ಜತೆಗೆ ತೀರಾ ಹತ್ತಿರದಲ್ಲಿದ್ದು ಸದ್ಯ ಟಿಕೆಟ್ ಷಡಕ್ಷರಿಯವರಿಗೆ ಸಿಕ್ಕಿರುವುದರಿಂದ ಇವರ ನಡೆ ನಿಗೂಡವಾಗಿದ್ದು ನನಗೇ ಬಿ ಫಾರಂ ಸಿಗಲಿದೆ ಎಂಬ ಆಶಾಭಾವನೆಯಲ್ಲಿದ್ದಾರೆ. ಇವರೂ ಸಹ ಕೊರೋನಾ ಸಂದರ್ಭದಲ್ಲಿ ಮಾಡಿದ ಸೇವೆ ಮತ್ತು ಮಹಿಳೆಯರ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರಗಳು, ಯುವಕರ ಉದ್ಯೋಗಕ್ಕಾಗಿ ಉಚಿತ ತರಬೇತಿ ಕೌಶಲ್ಯ ಕೇಂದ್ರ ಹೀಗೆ ಯುವಕರು, ಮಹಿಳೆಯರನ್ನು ಆಕರ್ಷಿಸುವಂತಹ ಹಲವು ಕಾರ್ಯಕ್ರಮಗಳನ್ನು ಮಾಡಿ ತಮ್ಮದೇ ಅಭಿಮಾನಿಗಳನ್ನು ಹುಟ್ಟುಹಾಕಿದ್ದಾರೆ. ಒಂದು ವೇಳೆ ಮಾಜಿ ಶಾಸಕ ಕೆ. ಷಡಕ್ಷರಿಯವರಿಗೆ ಬಿ ಫಾರಂ ದೊರೆತರೆ ಇವರು ಪಕ್ಷೇತರವಾಗಿ ನಿಲ್ಲುವರೆ ಅಥವಾ ಷಡಕ್ಷರಿಯವರಿಗೆ ಬೆಂಬಲ ನೀಡುವರೆ ಕಾದು ನೋಡಬೇಕಿದೆ.
ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ. ನಾರಾಯಣ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್)ದಿಂದ ಕೆರಿಕೆರೆ ಗಂಗಾಧರ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು ಇವರೂ ಸಹ ತಮ್ಮದೇ ಶೈಲಿಯಲ್ಲಿ ಮತಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟಾರೆ ಅಭ್ಯರ್ಥಿಗಳು ತಮ್ಮ ಪ್ರಚಾರದಲ್ಲಿ ತೊಡಗಿದ್ದು ಯಾರಿಗೇನೂ ಕಡಿಮೆ ಇಲ್ಲವೆಂಬಂತೆ ನೂರಾರು ಕಾರ್ಯಕರ್ತರೊಂದಿಗೆ ಹಳ್ಳಿ ಹಳ್ಳಿಗಳತ್ತ ಪಯಣ ಬೆಳೆಸುತ್ತಾ ಮತಭಿಕ್ಷೆ ಬೇಡುತ್ತಿದ್ದಾರೆ. ಆದರೆ ಮತದಾರ ಪ್ರಭು ಯಾರನ್ನು ಆಯ್ಕೆ ಮಾಡುತ್ತಾನೆಂಬುದು ಚುನಾವಣಾ ಫಲಿತಾಂಶ ಬರುವವರೆಗೂ ಕಾಯ್ದುನೋಡಬೇಕಿದೆ.
ಫೋಟೋ 9-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರಿನ ಪ್ರಸಿದ್ದ ಎಪಿಎಂಸಿ ಫೋಟೋ ಕಳುಹಿಸಲಾಗಿದೆ.