ಸಂಸತ್ ಭವನದಲ್ಲಿ ನಡೆದ ಗಲಾಟೆ ಹಾಗೂ ಭಯೋತ್ಪಾದಕ ರೀತಿಯ ಕೃತ್ಯ ಆಘಾತಕಾರಿ. ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಧಾರವಾಡ (ಡಿ.15): ಸಂಸತ್ ಭವನದಲ್ಲಿ ನಡೆದ ಗಲಾಟೆ ಹಾಗೂ ಭಯೋತ್ಪಾದಕ ರೀತಿಯ ಕೃತ್ಯ ಆಘಾತಕಾರಿ. ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ಕಾನೂನು ಬಾಹಿರವಾಗಿ ಈ ರೀತಿಯ ಭಯೋತ್ಪಾದಕ ಕೃತ್ಯ ಖಂಡನೀಯ. ಸಂಸತ್ ಭವನದಲ್ಲಿನ ಗಲಾಟೆಯ ವಿಷಯವನ್ನು ಯಾರೂ ಒಪ್ಪುವುದಿಲ್ಲ, ಇದರ ಹಿಂದೆ ಕಾಂಗ್ರೆಸ್ ಕುತಂತ್ರ ಇರಬಹುದು. ಬುದ್ಧಿಜೀವಿಗಳ ಮೂಲಕ ಕಾಂಗ್ರೆಸ್ ಹೀಗೆ ಮಾಡಿಸಿರಬಹುದು.
ಸಂಸದ ಪ್ರತಾಪ್ ಸಿಂಹ ಅವರನ್ನು ಇಲ್ಲಿ ಗುರಿಯಾಗಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.ಲೋಕಸಭೆ ಚುನಾವಣೆ ಹಿನ್ನೆಲೆ ಇಂಥ ಕೃತ್ಯ ಬಿಜೆಪಿ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಹಸಿಸುಳ್ಳು. ಇಂತಹ ಕೃತ್ಯ ಮಾಡಿದರೇ ಜನರು ಏಕೆ ಮತ ಹಾಕುತ್ತಾರೆ ಎಂದು ಪ್ರಶ್ನಿಸಿದರು. ಆರು ಜನ ಆರೋಪಿಗಳು ಬೇರೆ ಬೇರೆ ರಾಜ್ಯದವರು. ಇವರೆಲ್ಲ ಹೇಗೆ ಒಂದೆಡೆ ಸೇರಿದರು ಎಂಬುದು ಆಘಾತಕಾರಿ ವಿಷಯ. ಜೆಎನ್ಯುದಲ್ಲಿ ದೇಶದ್ರೋಹಿ ಘೋಷಣೆ ಕೂಗಿದರು. ಅದೇ ಮಾದರಿಯಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಈ ಘಟನೆ ನಡೆದಿದ್ದು ಸ್ಪಷ್ಟ ಎಂದು ತಿಳಿಸಿದರು.
ನನಗೆ ಈಶ್ವರಪ್ಪ ಭೇಟಿ ಆಗುವ ಅವಶ್ಯಕತೆ ಇಲ್ಲ: ಜಗದೀಶ್ ಶೆಟ್ಟರ್
ದೇಶದ 140 ಕೋಟಿ ಜನರಿಗೆ ಹರ್ಷ: ಕೇಂದ್ರ ಸರ್ಕಾರವು ಆರ್ಟಿಕಲ್ 370ನ್ನು ರದ್ದು ಮಾಡಿದ್ದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದರಿಂದ ದೇಶದ 140 ಕೋಟಿ ಜನರಿಗೂ ಹರ್ಷ ತಂದಿದೆ. ಆನಂದವನ್ನು ಉಂಟು ಮಾಡಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 370ನೇ ವಿಧಿ ಮರು ಜಾರಿಗೊಳಿಸುವುದಾಗಿ ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕಾಂಗ್ರೆಸ್ ಮುಖಭಂಗಕ್ಕೀಡಾಗಿದೆ ಎಂದರು.
370ನೇ ವಿಧಿ ರದ್ದಾದ ಬಳಿಕ ಜಮ್ಮು- ಕಾಶ್ಮೀರದಲ್ಲಿ ಶಾಂತಿ ಮರುಕಳಿಸಿದೆ. ಸಣ್ಣಪುಟ್ಟ ಭಯೋತ್ಪಾದನೆ ಕೃತ್ಯಗಳು ನಡೆಯುತ್ತಿವೆ ಅಷ್ಟೇ. ಕಲ್ಲು ಹೊಡೆಯುತ್ತಿದ್ದವರು ಕಾಲೇಜಿಗೆ ಹೋಗ್ತಿದಾರೆ. ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತಿದೆ. ಇದಕ್ಕೆ ಕಾರಣರಾದ ಕೇಂದ್ರ ಸರ್ಕಾರ ಹಾಗು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಭ್ರಷ್ಟಾಚಾರಕ್ಕೆ ಸಾಕ್ಷಿ: ಐಟಿ ದಾಳಿ ವೇಳೆ ಕಾಂಗ್ರೆಸ್ ಸಂಸದನಿಗೆ ಸೇರಿದ ನೂರಾರು ಕೋಟಿ ಹಣ ಪತ್ತೆ ಆಗಿದ್ದು, ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಕ್ರಮವಾಗಿ ಹಣ ಸಂಗ್ರಹಿಸಲು ಮುಂದಾಗಿದೆ. ಇದಕ್ಕೆ ನೂರಾರು ಕೋಟಿ ಅಕ್ರಮ ಹಣ ಪತ್ತೆ ಆಗಿರುವುದೇ ಸಾಕ್ಷಿ. ಮತ್ತಷ್ಟು ದಾಳಿ ಮಾಡಿದರೆ ಸಾವಿರಾರು ಕೋಟಿ ಹಣ ಪತ್ತೆಯಾಗಲಿದೆ. ಈ ಪ್ರಕರಣ ಕಾಂಗ್ರೆಸ್ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಚಕಾರವೆತ್ತದ ಇಂಡಿಯಾ ಮೈತ್ರಿ ಕೂಟದ ಪಕ್ಷಗಳ ನಾಯಕರು ಭ್ರಷ್ಟಾತಿಭ್ರಷ್ಟರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಇಂದಲ್ಲ, ನಾಳೆ ಪಾಕಿಸ್ತಾನ ಭಾರತಕ್ಕೆ ಸೇರುತ್ತೆ: ಈಶ್ವರಪ್ಪ ಭವಿಷ್ಯ
ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಏಕಾಏಕಿ ಐಟಿ ದಾಳಿ ನಡೆಸುವುದಿಲ್ಲ. ಐಟಿ ದಾಳಿಗೂ ಮುನ್ನಾ ಸಮಗ್ರವಾಗಿ ಮಾಹಿತಿ ಕಲೆ ಹಾಕಲಾಗುತ್ತದೆ. ಎಲ್ಲಾ ಮಾಹಿತಿಗಳನ್ನು ಖಚಿತಪಡಿಸಿಕೊಂಡ ಬಳಿಕವೇ ಐಟಿ ದಾಳಿ ನಡೆಸಲಾಗುತ್ತದೆ. ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದರು.