Bengaluru: ಪೆರಿಫೆರಲ್‌ ರಿಂಗ್‌ ರಸ್ತೆಗೆ ಟೆಂಡರ್‌ ಆಹ್ವಾನ

Published : Apr 06, 2022, 05:56 AM IST
Bengaluru: ಪೆರಿಫೆರಲ್‌ ರಿಂಗ್‌ ರಸ್ತೆಗೆ ಟೆಂಡರ್‌ ಆಹ್ವಾನ

ಸಾರಾಂಶ

*  73 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕೊನೆಗೂ ಬಿಡ್‌ ಕರೆದ ಬಿಡಿಎ *  ಬಿಡ್‌ ಸಲ್ಲಿಕೆಗೆ ಮೇ 18 ಕೊನೆಯ ದಿನ *  150 ಕೋಟಿ ಭದ್ರತಾ ಠೇವಣಿ, ಕಂಪನಿಗೆ 50 ವರ್ಷ ಟೋಲ್‌ ಗುತ್ತಿಗೆ  

ಬೆಂಗಳೂರು(ಏ.06): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ಮಹತ್ವಾಕಾಂಕ್ಷೆಯ ಪೆರಿಫೆರಲ್‌ ರಿಂಗ್‌ ರಸ್ತೆ(PPR) ಯೋಜನೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಟೆಂಡರ್‌ ಆಹ್ವಾನಿಸಲಾಗಿದೆ.

73.04 ಕಿ.ಮೀ ಉದ್ದದ ಪೆರಿಫೆರಲ್‌ ರಿಂಗ್‌ ರಸ್ತೆ(Peripheral Ring Road) ನಿರ್ಮಾಣ ಯೋಜನೆ ಇದಾಗಿದ್ದು, ಈಗಾಗಲೇ ಟೆಂಡರ್‌(Tender) ಪ್ರಕ್ರಿಯೆ ಆರಂಭಗೊಂಡಿದೆ. ಬಿಡ್‌ ಸಲ್ಲಿಕೆಗೆ ಮೇ 18 ಕಡೆಯ ದಿನ. ಮೇ 20ರಂದು ಟೆಕ್ನಿಕಲ್‌ ಬಿಡ್‌ ತೆರೆಯಲಿದೆ. ಬಿಡ್‌ದಾರರು ಭದ್ರತಾ ಠೇವಣಿಯಾಗಿ .150 ಕೋಟಿ ಪಾವತಿಸಬೇಕಾಗುತ್ತದೆ. ಯೋಜನೆಯ ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣ ಭರಿಸುವ ಬಿಡ್‌ದಾರ ಕಂಪನಿಗೆ 50 ವರ್ಷ ಭೋಗ್ಯದ ಆಧಾರದ ರಸ್ತೆ ಹಾಗೂ ಟೋಲ್‌ ಗುತ್ತಿಗೆ ಸಿಗಲಿದೆ.

Bengaluru: ಪೆರಿಫೆರಲ್‌ ರಸ್ತೆ ಆರಂಭಕ್ಕೆ ಬೇಕು ವರ್ಷ..!

ಪೆರಿಫೆರಲ್‌ ರಿಂಗ್‌ ರಸ್ತೆಯ ನಿರ್ಮಾಣದಿಂದ ನಗರದಲ್ಲಿ ವಾಹನ ದಟ್ಟಣೆ(Traffic) ನಿವಾರಣೆಯಾಗಲಿದೆ. 8 ಪಥದ ಈ ರಸ್ತೆಯು 100 ಮೀಟರ್‌ ಅಗಲ ಇರಲಿದೆ. ಈ ರಸ್ತೆಯು ತುಮಕೂರು ರಸ್ತೆಯಿಂದ ಸರ್ಜಾಪುರ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಬಳ್ಳಾರಿ ರಸ್ತೆ ಮೂಲಕ ಹೊಸೂರು ರಸ್ತೆಗೆ ಸೇರಲಿದೆ. ಇದರೊಂದಿಗೆ ಬೆಂಗಳೂರು ತನ್ನ ಪರಿಧಿಯಲ್ಲಿ 116 ಕಿ.ಮೀ. ಉದ್ದದ ಬೈಪಾಸ್‌ ರಸ್ತೆಯನ್ನು ಹೊಂದಿದ ನಗರವಾಗಲಿದೆ. ಯೋಜನೆಯ ಸದ್ಯದ ಮಾಹಿತಿಯಂತೆ ಹೋಗುವ ಮತ್ತು ಬರುವ ಮಾರ್ಗ ಸೇರಿ 17 ಟೋಲ್‌ ಪ್ಲಾಜಾಗಳು(Toll Plaza) ಇರಲಿದೆ. ಬಳ್ಳಾರಿ ರಸ್ತೆ, ಹಳೇ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆಯಲ್ಲಿ ನಾಲ್ಕು ಇಂಟರ್‌ಚೇಂಜ್‌ಗಳು ಇರಲಿವೆ. ಎರಡು ಮೇಲ್ಸೇತುವೆ ಮತ್ತು 4 ಅಂಡರ್‌ಪಾಸ್‌ಗಳನ್ನು ಯೋಜನೆ ಒಳಗೊಂಡಿದೆ.

ಅಂತಿಮ ನೋಟಿಫಿಕೇಷನ್‌ ಬಾಕಿ

ಪಿಆರ್‌ಆರ್‌ ಯೋಜನೆಯಡಿ ಸುಮಾರು 73.04 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕಾಗಿ 2,560 ಎಕರೆ ಭೂಸ್ವಾಧೀನಕ್ಕೆ ಯೋಜಿಸಲಾಗಿದೆ. ಈ ಪೈಕಿ 2017ರಲ್ಲಿಯೇ 1,810 ಎಕರೆಗೆ ನೋಟಿಫಿಕೇಷನ್‌ ಅಗಿದ್ದು, ಪರಿಹಾರ ಕೊಟ್ಟಿಲ್ಲ. ಇನ್ನುಳಿದ 750 ಎಕರೆ ಭೂಸ್ವಾಧೀನಕ್ಕೆ(Land Acquisition) ಪ್ರಾಥಮಿಕ ನೋಟಿಫಿಕೇಷನ್‌ ಆಗಬೇಕಿದೆ. ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿಯನ್ನು ಗುರುತಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗಿದೆ. ಯೋಜನೆಗೆ 232 ಎಕರೆ ಸರ್ಕಾರಿ ಭೂಮಿ(Government Land) ಬಳಕೆಯಾಗಲಿದ್ದು, ಉಳಿದದ್ದೆಲ್ಲ ಖಾಸಗಿ ಭೂಮಿಯಾಗಿದೆ. ಬಾಕಿ ಇರುವ ಭೂಸ್ವಾಧೀನಕ್ಕೆ ಪ್ರಾಥಮಿಕ ನೋಟಿಫಿಕೇಷನ್‌ ಆದ ನಂತರ ಸಾರ್ವಜನಿಕರಿಂದ ಆಕ್ಷೇಪಣೆಗೆ ಅವಕಾಶ ನೀಡಬೇಕಿದೆ. ಬಳಿಕ ಅಂತಿಮ ನೋಟಿಫಿಕೇಷನ್‌ ಹೊರಬೀಳಬೇಕಿದೆ.

ರಸ್ತೆ ನಿರ್ಮಾಣಕ್ಕೆ 3 ಸಾವಿರ ಕೋಟಿ ಬದಲು 14,616 ಕೋಟಿ ವೆಚ್ಚ!

ಇತ್ತೀಚಿನ ಅಂದಾಜಿನ ಪ್ರಕಾರ, ಬಿಡಿಎ ಭೂಸ್ವಾಧೀನ ಕಾಯ್ದೆ ಅನ್ವಯ ಮತ್ತು ಈಗಿನ ಮಾರುಕಟ್ಟೆ ದರದ ಹಿನ್ನೆಲೆಯಲ್ಲಿ ಭೂಸ್ವಾಧೀನಕ್ಕೆ 9 ಸಾವಿರ ಕೋಟಿ ವೆಚ್ಚವಾಗಲಿದೆ. ಜೊತೆಗೆ ಯೋಜನಾ ವೆಚ್ಚ ನಿರ್ಮಾಣ ವೆಚ್ಚ .5,616 ಕೋಟಿ ಆಗಲಿದ್ದು, ಒಟ್ಟು ಸಂಪೂರ್ಣ ಯೋಜನೆಗೆ ಅಂದಾಜು .14,616 ಕೋಟಿ ವೆಚ್ಚವಾಗಲಿದೆ ಎಂದು ಯೋಜಿಸಲಾಗಿದೆ. ಸುಮಾರು 15 ವರ್ಷಗಳ ಹಿಂದೆ ಯೋಜನೆಗೆ ಸುಮಾರು .3 ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ನಿರ್ಮಾಣದಲ್ಲಿನ ದೀರ್ಘ ವಿಳಂಬದಿಂದ ಭಾರಿ ವೆಚ್ಚ ಮಾಡಬೇಕಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಸ್ತೆಗೆ ಮರುಜೀವ!

2008ರಲ್ಲಿ ಬಿಡಿಎ ಪಿಆರ್‌ಆರ್‌ ಮಾರ್ಗವನ್ನು ಪ್ರಸ್ತಾಪಿಸಿದ್ದ ವೇಳೆ, ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆಗೆ 1,810 ಎಕರೆ ಭೂಸ್ವಾಧೀನಕ್ಕೆ ಸೂಚಿಸಿತ್ತು. ಆದರೆ ನಂತರದ ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ 750 ಎಕರೆಗಳಷ್ಟುಭೂಮಿ ಹೆಚ್ಚುವರಿಯಾಗಿ ಬೇಕಾಗಿದೆ. ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರದ ಅನುಮೋದನೆ ಸಿಕ್ಕಿದ ಕೂಡಲೇ ಭೂಸ್ವಾಧೀನ ಪಡಿಸಿಕೊಂಡು ಯೋಜನೆ ನಿರ್ಮಾಣದ ಕಾರ್ಯ ಆರಂಭಗೊಳ್ಳಲಿದೆ.

ರಾಜಧಾನಿ ಬೆಂಗಳೂರು(Bengaluru) ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಪಿಆರ್‌ಆರ್‌ ರಸ್ತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದು, ಟೆಂಡರ್‌ ಆಹ್ವಾನಿಸಲಾಗಿದೆ. ಆದಷ್ಟುಶೀಘ್ರವೇ ಯೋಜನೆ ಆರಂಭಗೊಳ್ಳಲಿದ್ದು, ಲಕ್ಷಾಂತರ ಜನರಿಗೆ ಈ ಯೋಜನೆ ಅನುಕೂಲ ಮಾಡಿಕೊಡಲಿದೆ. ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೂ ನ್ಯಾಯಯುತ ಪರಿಹಾರ ಒದಗಿಸಲಾಗುವುದು ಅಂತ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.  
 

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!