ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಪೂರೈಕೆ ಮಾಡುತ್ತಿರುವುದು ವಿಜಯಪುರ ಮೂಲದ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರ ಸಂಸ್ಥೆಯಾದ ಮೇಘಾ ಸರ್ವೀಸಸ್ ಎನ್ನುವ ಸಂಸ್ಥೆ| ಕೊರೋನಾದಂತಾ ಸಂದರ್ಭದಲ್ಲಿ ವೇತನ ನೀಡದೇ ಸತಾಯಿಸುತ್ತಿರುವ ಸಂಸ್ಥೆಗೆ ಸರ್ಕಾರ, ಜಿಮ್ಸ್, ಜಿಲ್ಲಾಡಳಿತ ಬಿಸಿ ಮುಟ್ಟಿಸಬೇಕಿದೆ|
ಶಿವಕುಮಾರ ಕುಷ್ಟಗಿ
ಗದಗ(ಜು.08): ಕೊರೋನಾ ಕಂಟಕ ದಿನೇ ದಿನೇ ಜನರನ್ನು ಬೆಂಬಿಡದೇ ಕಾಡುತ್ತಿದೆ, ಈ ಸಂದರ್ಭದಲ್ಲಿ ಸಾರ್ವಜನಿಕರ ಜೀವ ಉಳಿಸುವುದಲ್ಲದೇ ಅವರಿಗೆ ಅಗತ್ಯ ಸೇವೆಗಳನ್ನು ನೀಡುತ್ತಿರುವ ಗದಗ ಜಿಮ್ಸ್‌ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್, ಗ್ರುಪ್ ಡಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಮಹತ್ವದ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ 2 ತಿಂಗಳಿಂದ ವೇತನವನ್ನೇ ನೀಡದೇ ಸೇವೆ ಪಡೆಯಲಾಗುತ್ತಿದೆ.
undefined
383 ಸಿಬ್ಬಂದಿಗಿಲ್ಲ ವೇತನ
ಜಿಮ್ಸ್‌ನಲ್ಲಿ ಸರ್ಕಾರ ನಿಗದಿ ಪಡಿಸಿದ ವಿವಿಧ ಹುದ್ದೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ 383 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮೇ ಹಾಗೂ ಜೂನ್ ತಿಂಗಳ ವೇತನವನ್ನು ನೀಡದೇ ಗುತ್ತಿಗೆ ಪಡೆದಿರುವ ಕಂಪನಿಯು ಸತಾಯಿಸುತ್ತಿದ್ದು ಇದರಿಂದಾಗಿ ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು, ವೇತನವಿಲ್ಲದೇ ಎದೆಗುಂದುವಂತಾಗಿದೆ.
ಗದಗ: ಕೊರೋನಾ ಸೋಂಕಿತನ ನರಳಾಟ ವಿಡಿಯೋ ವೈರಲ್
ಪ್ರಭಾವಿಗಳ ಸಂಬಂಧಿಗಳ ಸಂಸ್ಥೆ.
ಸಧ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಪೂರೈಕೆ ಮಾಡುತ್ತಿರುವುದು ವಿಜಯಪುರ ಮೂಲದ ಪ್ರಭಾವಿ ರಾಜಕಾರಣಿಗಳ ಸಂಬಂಧಿಕರ ಸಂಸ್ಥೆಯಾದ ಮೇಘಾ ಸರ್ವೀಸಸ್ ಎನ್ನುವ ಸಂಸ್ಥೆಯಾಗಿದೆ. ಸಂಸ್ಥೆಯ ಮೂಲಕ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಅದರಲ್ಲಿಯೂ ಕೊರೋನಾದಂತಾ ಸಂದರ್ಭದಲ್ಲಿ ವೇತನ ನೀಡದೇ ಸತಾಯಿಸುತ್ತಿರುವ ಸಂಸ್ಥೆಗೆ ಸರ್ಕಾರ, ಜಿಮ್ಸ್, ಜಿಲ್ಲಾಡಳಿತ ಬಿಸಿ ಮುಟ್ಟಿಸಬೇಕಿದೆ.
ನಿಯಮ ಗಾಳಿಗೆ
ರಾಜ್ಯ ಸರ್ಕಾರ ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ, ವೈದ್ಯರಿಗೆ ವಿಶೇಷ ರಿಸ್ಕ್ ಭತ್ಯೆಗಳನ್ನು ನೀಡಲು ಮುಂದಾಗಿದೆ, ಏಪ್ರೀಲ್, ಮೇ, ಜೂನ್ ತಿಂಗಳಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಸೇವೆ ಸಲ್ಸಿಸಿದ ಸಿಬ್ಬಂದಿಗಳ ವೇತನದಲ್ಲಿ ಪಿಎಪ್ ಮುರಿದುಕೊಳ್ಳದೇ ಪೂರ್ಣ ವೇತನ ನೀಡಬೇಕು, ಸೇವೆ ಸಲ್ಲಿಸಿದ ಸಿಬ್ಬಂದಿಯ ಪಿಎಫ್ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಣೆ ಮಾಡಿದೆ, ಆದರೆ ಗದಗ ಜಿಮ್ಸ್‌ನಲ್ಲಿ ಈ ನಿಯಮವನ್ನು ಗಾಳಿಗೆ ತೂರಿದ್ದು ಈಗಾಗಲೇ ನೀಡಿರುವ ವೇತನದಲ್ಲಿಯೇ ಪಿಎಫ್ ಮುರಿದಿದ್ದಾರೆ.
ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನರ ವಿಳಂಬ ಮಾತ್ರವಲ್ಲ, ಜಿಮ್ಸ್‌ನಲ್ಲಿರುವ ಸುಪ್ರವೈಜರ್‌ಗಳಿಂದ ನಿರಂತರ ಶೋಷಣೆ ನಡೆಯುತ್ತಿದ್ದು, ಯಾರು ಸುಪ್ರವೈಜರ್ ಕೈ ಬೆಚ್ಚಗೆ ಮಾಡುತ್ತಾರೆ ಅವರಿಗೆ ಜನರಲ್ ಡ್ಯೂಟಿ, ಯಾರು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಸುಪ್ರವೈಜರ್‌ಗೆ ಸೊಪ್ಪು ಹಾಕುವುದಿಲ್ಲವೋ ಅವರಿಗೆ ನಿತ್ಯವೂ ಕೊರೋನಾ ವಾರ್ಡಗಳ ಡ್ಯೂಟಿ, ಕೊರೋನಾ ವಾರ್ಡ್‌ಗಳಲ್ಲಿ ಡ್ಯೂಟಿ ಮುಗಿಸಿದ ನಂತರ ಕನಿಷ್ಠ 2 ದಿನಗಳ ಕ್ವಾರಂಟೈನ್ ಆದರೂ ನೀಡಬೇಕು ಎನ್ನುವ ಸರ್ಕಾರದ ಸ್ಪಷ್ಟ ನಿರ್ದೇಶನವಿದೆ, ಇನ್ನು ಆಸ್ಪತ್ರೆಯ ಶೌಚಾಲಯ, ಬೆಡ್‌ಗಳು ರೂಂಗಳನ್ನು ಸ್ವಚ್ಚಗೊಳಿಸುವ ಡಿ ದರ್ಜೆ ನೌಕರರ ಪಾಡಂತೂ ತೀರಾ ಕಷ್ಟ ಸಾಧ್ಯವಾಗಿದ್ದು, ಏನಾದರೂ ಪ್ರಶ್ನೆ ಮಾಡಿದರೆ ಕೈಯಲ್ಲಿರುವ ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಇಲ್ಲಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ನೌಕರರನೋರ್ವ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದು ಇದನ್ನು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣವೇ ಪರಿಶೀಲನೆ ನಡೆಸಬೇಕಿದೆ.
ಈಗಾಗಲೇ 383 ಜನರಿಗೆ ವೇತನ ಪ್ರತಿ ತಿಂಗಳು ನೀಡಲಾಗುತ್ತಿತ್ತು, ಆದರೆ ಇತ್ತೀಚಿಗೆ ಮತ್ತೆ 100 ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ. ಹೊಸದಾಗಿ ನೇಮಕವಾದವರೂ ಸೇರಿದಂತೆ ಒಟ್ಟಿಗೆ ಎಲ್ಲಾ ೪೮೩ ಜನರಿಗೂ ವೇತನ ಹಾಕುವಂತೆ ಸೂಚಿಸಲಾಗಿದೆ ಈ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕವಾದವರ ದಾಖಲೆಗಳ ಸಲ್ಲಿಕೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ವೇತನ ವಿಳಂಬವಾಗಿದೆ. ಈ ಕುರಿತು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರಡ್ಡಿ ಅವರು ತಿಳಿಸಿದ್ದಾರೆ.