ಮುಚ್ಚಿದ ಹಂಪಿ ದೇವಸ್ಥಾನಗಳು|ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಹಂಪಿ|ಮಾ. 31ರ ವರೆಗೆ ಸಾರ್ವಜನಿಕ ಪ್ರವೇಶ ನಿಷೇಧ| ವಿರೂಪಾಕ್ಷೇಶ್ವರನಿಗೆ ಎಂದಿನಂತೆ ತ್ರಿಕಾಲ ಪೂಜೆ|
ಹೊಸಪೇಟೆ(ಮಾ.22): ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ಹಂಪಿಯ ಎಲ್ಲ ದೇವಸ್ಥಾನಗಳನ್ನು ಶನಿವಾರ ಬೆಳಗ್ಗೆಯಿಂದ ಬಂದ್ ಮಾಡಲಾಗಿದೆ.
ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನ, ಪಾಂಪಾಬಿಕಾ ದೇವಿ, ತಾಯಿ ಭುವನೇಶ್ವರಿ ದೇವಸ್ಥಾನ, ಉದ್ಧಾನ ವೀರಭದ್ರೇಶ್ವರ ದೇವಸ್ಥಾನ, ಯಂತ್ರೋದ್ಧಾರಕ ಆಂಜಿನೇಯಸ್ವಾಮಿ, ಚಕ್ರತೀರ್ಥ ಕೋದಂಡರಾಮ ದೇವಸ್ಥಾನಕ್ಕೆ ಮಾ. 31ರ ವರೆಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಹಂಪಿ ವಿರೂಪಾಕ್ಷೇಶ್ವರಸ್ವಾಮಿಗೆ ತ್ರಿಕಾಲ ಅಭಿಶೇಷ, ತ್ರಿಕಾಲ ನೈವೇದ್ಯ ಹಾಗೂ ಪೂಜಾ ವಿಧಿ-ವಿಧಾನಗಳು ಎಂದಿನಂತೆ ನಡೆಯಲಿದೆ. ಇದಲ್ಲದೆ ಹೊಸಪೇಟೆ ವಡಕರಾಯ ದೇವಸ್ಥಾನ, ಹೊಸೂರು ಗ್ರಾಮದ ಹೊಸೂರಮ್ಮ ದೇವಸ್ಥಾನ, ಬುಕ್ಕಸಾಗರದ ಏಳುಅಡಿ ನಾಗಪ್ಪ ದೇವಸ್ಥಾನ ಸೇರಿದಂತೆ ತಾಲೂಕಿನ ಇತರ ದೇವಸ್ಥಾನಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.
14 ದಿನದ ಕ್ವಾರೈಟೈನ್‌ನಲ್ಲಿ ಇರುವವರ ಕೈಗೂ ಸೀಲ್, ಮನೆಗೇ ತೆರಳಿ ಮುದ್ರೆ!
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಮಾ. 16ರಿಂದ ನಿಷೇಧಾಜ್ಞೆ ವಿಧಿಸಲಾಗಿದೆ. ವಿದೇಶಿ ಪ್ರವಾಸಿಗರನ್ನು ಹೊರಹಾಕಲಾಗಿದೆ. ಹೋಂ ಸ್ಟೇ ಲಾಡ್ಜ್‌ಗಳನ್ನು ಬಂದ್ ಮಾಡಿಸಲಾಗಿದೆ. ಆದರೆ ದೇವಸ್ಥಾನಗಳಲ್ಲಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿತ್ತು. ಹೀಗಾಗಿ ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ಇತರ ದೇವಾಲಯಗಳಿಗೆ ಕೆಲವು ಭಕ್ತರು ಆಗಮಿಸುತ್ತಿದ್ದರು. ಆದರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಶನಿವಾರ ಆದೇಶ ಹೊರಡಿಸಿ ಹಂಪಿಯ ದೇವಸ್ಥಾನಗಳನ್ನು ಶನಿವಾರದಿಂದ ಮಾ. 31ರ ವರೆಗೆ ಬಂದ್ ಮಾಡಿ, ಭಕ್ತರ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ. ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ರಾವ್ ಶನಿವಾರ ಹಂಪಿಯ ದೇವಸ್ಥಾನಗಳನ್ನು ಬಂದ್ ಮಾಡಿರುವ ಬಗ್ಗೆ ಖಚಿತಪಡಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸ್ತಾರಾ ಮೋದಿ?: ಬಾವಿ ಮುಚ್ಚಿದ ಜನ!
ಸೂರ್ಯಗ್ರಹಣ, ಚಂದ್ರಗ್ರಹಣದ ಸಮಯದಲ್ಲಿ ವಿರೂಪಾಕ್ಷೇಶ್ವರ ದೇವಾಲಯವನ್ನು ಕೆಲ ಗಂಟೆಗಳ ಕಾಲ ಮುಚ್ಚಲಾಗುತ್ತಿತ್ತು. ಅದನ್ನು ಹೊರತು ಪಡಿಸಿ ಈ ವರೆಗೆ ಬಾಗಿಲು ಮುಚ್ಚಿದ ಉದಾಹರಣೆಗಳಿಲ್ಲ. ಈ ದೇಗುಲವನ್ನು 10 ದಿನಗಳ ವರೆಗೆ ಮುಚ್ಚುವುದು ಇದೇ ಮೊದಲು.
ಬಸ್ ಬಂದ್:
ಮಾ. 16ರಿಂದ ಮಾ. 31ರ ವರೆಗೆ ಬಸ್ ಸಂಚಾರವನ್ನೂ ರದ್ದುಗೊಳಿಸಲಾಗಿದೆ. ಹಂಪಿಯ ನಿವಾಸಿಗಳು ಕಡ್ಡಿರಾಂಪುರ ಗ್ರಾಮದವರಿಗೆ ತೆರಳುವ ಬಸ್‌ಗಳಿಂದ ಮತ್ತು ಕಮಲಾಪುರ ಪಟ್ಟಣಕ್ಕೆ ತೆರಳುವ ಬಸ್‌ಗಳಿಂದ ಹಂಪಿ ತಲುಪಬಹುದು. ಸ್ವಂತ ವಾಹನ ಇರುವವರು ಸಂಚರಿಸಲು ಅಡ್ಡಿ ಇಲ್ಲ.