ಬಾಗಿಲು ತೆರೆದ ದೇಗುಲಗಳು: ದೇವರುಂಟು, ಭಕ್ತರೇ ಇಲ್ಲ!

Kannadaprabha News   | Asianet News
Published : Jun 10, 2020, 09:19 AM ISTUpdated : Jun 10, 2020, 09:46 AM IST
ಬಾಗಿಲು ತೆರೆದ ದೇಗುಲಗಳು: ದೇವರುಂಟು, ಭಕ್ತರೇ ಇಲ್ಲ!

ಸಾರಾಂಶ

ಸೋಮವಾರದಿಂದಲೇ ಚಿಕ್ಕಮಗಳೂರು ಜಿಲ್ಲೆಯ ದೇವಸ್ಥಾನಗಳು ಬಾಗಿಲು ತೆರೆದಿವೆ. ಎಲ್ಲ ದೇವಾಲಯಗಳಲ್ಲೂ ಪೂಜಾ ವಿಧಿವಿಧಾನಗಳನ್ನು ಆರಂಭಿಸಲಾಗಿದೆ. ಆದರೆ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಾಳೆಹೊನ್ನೂರು(ಜೂ.10): ಕಳೆದ ಎರಡೂವರೆ ತಿಂಗಳಿನಿಂದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದ ದೇವಾಲಯ, ಮಸೀದಿ, ಚರ್ಚ್‌ಳಲ್ಲಿ ಸೋಮವಾರದಿಂದ ಪೂಜೆ, ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಪಟ್ಟಣದಲ್ಲಿ ಎಲ್ಲ ದೇವಾಲಯ, ಚರ್ಚ್‍, ಮಸೀದಿಗಳು ತೆರೆದಿದ್ದವು.

ವೀರಶೈವ ಪಂಚಪೀಠಗಳಲ್ಲಿ ಪ್ರಥಮ ಪೀಠವಾದ ರಂಭಾಪುರಿ ಪೀಠದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಈ ಹಿಂದಿನಂತೆ ಎಲ್ಲ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಶ್ರೀ ಪೀಠದ ಪುರೋಹಿತ ವರ್ಗದವರು ಪೀಠದ ಎಲ್ಲ ದೇವಾಲಯಗಳಲ್ಲೂ ಪೂಜಾ ವಿಧಿವಿಧಾನಗಳನ್ನು ಆರಂಭಿಸಿದರು.

ಸರ್ಕಾರದ ನಿಯಮಾವಳಿಗಳ ಪ್ರಕಾರ ಭಕ್ತರಿಗೆ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಜರ್‌ ಬಳಕೆ ಕಡ್ಡಾಯವಾಗಿದೆ. ಸರ್ಕಾರದ ಆದೇಶದಂತೆ ತೀರ್ಥ, ಪ್ರಸಾದ ವಿನಿಯೋಗ ಮಾಡುವುದಿಲ್ಲ. ಅನ್ನ ದಾಸೋಹವನ್ನು ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ, ನೀತಿ- ನಿಯಮಗಳನ್ನು ನೋಡಿಕೊಂಡು ಆರಂಭಿಸಲಾಗುವುದು ಎಂದು ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪತ್ರಿಕೆಗೆ ತಿಳಿಸಿದ್ದಾರೆ.

ಕೊಪ್ಪ ತಾಲೂಕಿನ ಮಸೀದಿಗಳಲ್ಲಿ ನಮಾಜು ಆರಂಭ

ಇನ್ನುಳಿದಂತೆ ಪಟ್ಟಣದ ಆಂಜನೇಯ ದೇವಾಲಯ, ಮಾರ್ಕಾಂಡೇಶ್ವರ ದೇಗುಲ, ಗಣಪತಿ ದೇವಸ್ಥಾನ, ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯಗಳನ್ನು ಸಹ ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದಿಲ್ಲ. ಕೇವಲ ಬೆರಳೆಣಿಕೆಯ ಭಕ್ತರು ದೇವರ ಪೂಜೆ, ದರ್ಶನಕ್ಕೆ ಆಗಮಿಸಿದ್ದರು. ಎಲ್ಲ ದೇವಾಲಯಗಳು ಭಕ್ತರಿಲ್ಲದೇ ಭಣಗುಡುತ್ತಿದ್ದವು.

ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮುಸಲ್ಮಾನ ಬಾಂಧವರ ನಮಾಜ್‌ಗೆ ಅವಕಾಶ ಕಲ್ಪಿಸಿದ್ದು, ಮಸೀದಿಯೊಳಗೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್‌ ರಚಿಸಲಾಗಿದೆ. ಮಸೀದಿಕೆರೆಯ ಅಲ್‌ ಬದ್ರಿಯಾ ಜುಮ್ಮಾ ಮಸೀದಿಯಲ್ಲಿಯೂ ಇದೇ ರೀತಿ ಮಾಡಲಾಗಿದೆ. ಪಟ್ಟಣದ ವಿಜಯಮಾತೆ ಚಚ್‌ರ್‍ನಲ್ಲಿ ವಾರದ ಪೂಜೆ ಭಾನುವಾರ ನಡೆಯುವ ಕಾರಣ ಮುಂದಿನ ವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC