ಬಿಜೆಪಿಯಿಂದ ಗಾಂಧೀಜಿ ಕನಸು ನನಸು: ತೇಜಸ್ವಿನಿಗೌಡ

By Web Desk  |  First Published Sep 28, 2019, 8:09 AM IST

ಬಿಜೆಪಿ ಗಾಂಧೀಜಿ ಕನಸು ನನಸು ಮಾಡುತ್ತಿದೆ ಎಂದ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿಗೌಡ ರಮೇಶ| ಬಿಜೆಪಿ ವತಿಯಿಂದ ಒಂದು ರಾಷ್ಟ್ರ-ಒಂದು ಸಂವಿಧಾನ ಎಂಬ ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ವಿಶೇಷ ಉಪನ್ಯಾಸ ನೀಡಿದ ತೇಜಸ್ವಿನಿಗೌಡ| ಮಹಾತ್ಮಾ ಗಾಂಧೀಜಿ ಅವರು ಕಂಡ ಕನಸು ಮತ್ತು ತತ್ವ ಸಿದ್ಧಾಂತಗಳನ್ನು ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನಸು ಮಾಡುತ್ತಿದೆ| 


ಬಾದಾಮಿ:(ಸೆ.28) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಲಂ 370 ಹಾಗೂ 35ಎ ರದ್ದುಪಡಿಸಿ ಕಾಶ್ಮೀರವು ಭಾರತದ ಎನ್ನುವುದನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದೆ. ಈ ಮೂಲಕ ಬಿಜೆಪಿ ಗಾಂಧೀಜಿ ಕನಸು ನನಸು ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿಗೌಡ ರಮೇಶ ಅವರು ಹೇಳಿದ್ದಾರೆ. 

ಅವರು ಶುಕ್ರವಾರ ನಗರದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಒಂದು ರಾಷ್ಟ್ರ-ಒಂದು ಸಂವಿಧಾನ ಎಂಬ ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅವರು ಕಂಡ ಕನಸು ಮತ್ತು ತತ್ವ ಸಿದ್ಧಾಂತಗಳನ್ನು ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನಸು ಮಾಡುತ್ತಿದೆ ಎಂದು ಹೇಳಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಲು ಈ ಹಿಂದಿನಿಂದಲೂ ದೇಶದಲ್ಲಿ ಕೂಗು ಕೇಳಿ ಬರುತ್ತಿದ್ದರೂ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಸರ್ಕಾರ ಕಿವಿಗೊಡಲಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅದನ್ನು ರದ್ದುಗೊಳಿಸಿ ನವಭಾರತದ ಪರಿಕಲ್ಪನೆಯ ಜೊತೆಗೆ ಕಾಶ್ಮೀರವನ್ನು ಭಾರತ ದೇಶದ ಸ್ವರ್ಗವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳು ಪಾಕಿಸ್ತಾನದ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸಿ ಭಾರತದ ಜೊತೆಗೆ ವಾಸಿಸಲು ಸಮ್ಮತಿ ಸೂಚಿಸುತ್ತಿದ್ದಾರೆ. ಇಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಾಗರಿಕ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಅವರ ಜೀವನ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶವಾಸಿಗಳು ಕಾಶ್ಮೀರದೊಂದಿಗೆ ಕೈ ಜೋಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

370 ಮತ್ತು 35ಎ ರದ್ದುಗೊಂಡ ನಂತರ ಅಲ್ಲಿನ ನಿವಾಸಿಗಳಿಗೆ ನಮ್ಮ ಸಂವಿಧಾನದಲ್ಲಿರುವ ಎಲ್ಲ ಹಕ್ಕು, ಭಾದ್ಯತೆಗಳು ಒಳಪಡಲಿವೆ. ಈ ಮೊದಲಿದ್ದ ಕಾನೂನುಗಳು ರದ್ದಾಗಿ ದೇಶದಲ್ಲಿನ ಕಾನೂನುಗಳು ಅನ್ವಯವಾಗಿ ಸುಖ, ಸಂತೋಷದ ನೆಮ್ಮದಿಯ ಜೀವನ ನಡೆಸಲು ನೆರವಾಗಲಿದೆ. ಹೀಗಾಗಿ ದೇಶದಲ್ಲಿ ಒಂದು ರಾಷ್ಟ್ರ-ಒಂದು ಸಂವಿಧಾನ ಎನ್ನುವುದನ್ನು ಎಲ್ಲರು ಗೌರವಿಸಬೇಕು ಎಂದರು.

ಈ ಸಂದರ್ಭದಲ್ಲಿ ಲೇಖಕ ಚಂದ್ರಶೇಖರ ಕಾಳನ್ನವರ ಹಾಗೂ ಪ್ರಕಾಶ ಗಿರಿಮಲ್ಲನವರ ರಚಿಸಿರುವ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಈ ಗ್ರಂಥದಲ್ಲಿ ಒಟ್ಟು ಏಳು ಅಧ್ಯಾಯ ಮತ್ತು 100 ಪುಟಗಳಲ್ಲಿ ಪಂ.ದೀನ್‌ದಯಾಳ ಅವರ ಜೀವನದ ಕ್ರಮ ಕುರಿತು ಮಾಹಿತಿ ನೀಡಲಾಗಿದೆ. ಅವರು ಬದುಕು, ಮಾನವ ದರ್ಶ, ರೈತಪರ ಕಾಳಜಿ, ಜನಸಂಘ, ಭ್ರಷ್ಟಾಚಾರ ನಿರ್ಮೂಲನೆ, ಕಾಶ್ಮೀರ-ಗೋವಾ ಮುಕ್ತಿ ಆಂದೋಲನ ಹಾಗೂ ಉರಿಯುಂಡ ಕರ್ಪುರ ಕುರಿತು ವಿವರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡ ಮುರಡಿ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಬಿ.ಪಿ. ಹಳ್ಳೂರ, ಶರಣಪ್ಪ ಹಂಚಿನಮನಿ ಬಸವರಾಜ ಹೊಸಮನಿ ಎಫ್‌.ಆರ್‌.ಪಾಟೀಲ, ಸಿದ್ದನಗೌಡ ಪಾಟೀಲ, ಭಾಗ್ಯಾ ಉದ್ನೂರ, ಕೃಷ್ಣಾ ಓಗೇನ್ನವರ, ನಾಗರಾಜ ಕಾಚಟ್ಟಿ, ಹೊನ್ನಯ್ಯ ಹಿರೇಮಠ, ಎಸ್‌.ಎಸ್‌.ಮಿಟ್ಟಲಕೋಡ ಮುತ್ತು ಉಳ್ಳಾಗಡ್ಡಿ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳಿಂದ ಬಿಜೆಪಿ ಕಾರ‍್ಯಕರ್ತರು ಜಿಪಂ ತಾಪಂ ಉಪಸ್ಥಿತರಿದ್ದರು. 
 

click me!