ಮಾನವೀಯತೆಯಿಂದ ವಿಮುಖರನ್ನಾಗಿಸುತ್ತಿರುವ ತಂತ್ರಜ್ಞಾನ : ನ್ಯಾಯಾಧೀಶ

By Kannadaprabha News  |  First Published Mar 8, 2023, 5:50 AM IST

ಶೈಕ್ಷಣಿಕ ಹಂತದಲ್ಲಿ ಶಿಕ್ಷಣ ಚಟುವಟಿಕೆಗಳತ್ತ ಗಮನ ಹರಿಸಬೇಕೇ ಹೊರತು ಇತರೆ ಅನವಶ್ಯಕ ವಿಷಯಗಳತ್ತ ಆಸಕ್ತಿ ತೋರಬಾರದು ಎಂದು ವಿದ್ಯಾರ್ಥಿನಿಯರಿಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ನಾರಾಯಣ ಆಚಾರ್ಯ ಸಲಹೆ ನೀಡಿದರು.


 ತುಮಕೂರು :  ಶೈಕ್ಷಣಿಕ ಹಂತದಲ್ಲಿ ಶಿಕ್ಷಣ ಚಟುವಟಿಕೆಗಳತ್ತ ಗಮನ ಹರಿಸಬೇಕೇ ಹೊರತು ಇತರೆ ಅನವಶ್ಯಕ ವಿಷಯಗಳತ್ತ ಆಸಕ್ತಿ ತೋರಬಾರದು ಎಂದು ವಿದ್ಯಾರ್ಥಿನಿಯರಿಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ನಾರಾಯಣ ಆಚಾರ್ಯ ಸಲಹೆ ನೀಡಿದರು.

ವಿಶ್ವ ಮಹಿಳಾ ದಿನಾಚರಣೆ ಸಪ್ತಾಹದ ಅಂಗವಾಗಿಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಸಾಂತ್ವನ ಕೇಂದ್ರ, ವರದಕ್ಷಿಣೆ ವಿರೋಧಿ ವೇದಿಕೆ ಮತ್ತಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಿ.ಎಚ್‌.ರಸ್ತೆಯ ಸರ್ಕಾರಿ ನಿಲಯದಲ್ಲಿ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಆರ್‌.ಜೆ.ಪವಿತ್ರ ಮುಖ್ಯ ಅತಿಥಿಗಳಾಗಿ ಮಾತನಾಡಿ ಪ್ರೌಢಾವಸ್ಥೆಗೆ ಬಂದ ಕೂಡಲೇ ಸಾಕಿ ಸಲಹಿದ ಅಪ್ಪ ಅಮ್ಮಂದಿರನ್ನು ಮರೆತು ಪ್ರೀತಿ ಪ್ರೇಮದ ಹಿಂದೆ ಬೀಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳಿಗೆ ಸಿಲುಕಿ ತಮ್ಮ ಬದುಕನ್ನು ಸಮಸ್ಯೆಗಳಿಗೆ ದೂಡಿಕೊಳ್ಳುತ್ತಿದ್ದಾರೆ. ಚಂಚಲ ಮನಸ್ಸಿನ ಈ ಅವಧಿಯಲ್ಲಿ ಭವಿಷ್ಯ ಯೋಚಿಸುವ ಮುಕ್ತ ಮನಸ್ಸು ನಮ್ಮಗಳದ್ದಾಗಬೇಕು. ಇಲ್ಲದೆ ಹೋದರೆ ಭವಿಷ್ಯದ ಬದುಕು ಭಯಾನಕವಾಗಲಿದೆ. ಹೆಣ್ಣು ಮಕ್ಕಳನ್ನು ಅಪಹರಿಸಿ ಬೇರೆ ಬೇರೆ ಕೃತ್ಯಕ್ಕೆ ಬಳಸುವ ಅಪಾಯಗಳು ಇವೆ. ಲೈಂಗಿಕ ದೌರ್ಜನ್ಯಗಳಿಗೆ ಮಕ್ಕಳು ಬಲಿಯಾಗುತ್ತಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕು ಎಂದ ಅವರು, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಪೋಕ್ಸೋ ಕಾಯ್ದೆಯ ಪರಿಣಾಮಗಳು ಕುರಿತು ಮಾತನಾಡಿದರು.

ಲೇಖಕಿ ಎಂ.ಸಿ.ಲಲಿತ ಮಾತನಾಡಿ, 1908ರಿಂದಲೇ ಮಹಿಳಾ ಹಕ್ಕುಗಳ ಬಗ್ಗೆ ಹೋರಾಟಗಳು ಆರಂಭವಾದವು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಮತದಾನದ ಹಕ್ಕಿಗಾಗಿ ಹೋರಾಟಗಳು ನಡೆದ ಪರಿಣಾಮವಾಗಿ ಮಹಿಳೆಯರಿಗೆ ಹಕ್ಕುಗಳು ಪ್ರಾಪ್ತವಾಗಿವೆ. 1975 ರಲ್ಲಿ ವಿಶ್ವಸಂಸ್ಥೆಯು ಮಾಚ್‌ರ್‍ 8ನ್ನು ವಿಶ್ವ ಮಹಿಳಾ ದಿನಾಚರಣೆಯನ್ನಾಗಿ ಘೋಷಿಸಿತು. ಎಲ್ಲ ರಾಷ್ಟ್ರಗಳಲ್ಲಿಯೂ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರ ಸಮಸ್ಯೆಗಳು ಮತ್ತು ಹಕ್ಕುಗಳ ಬಗ್ಗೆ ಈ ದಿನ ಚರ್ಚೆಗಳು ನಡೆಯುತ್ತವೆ ಎಂದರು.

ವಕೀಲರಾದ ಮಮತ ರವಿಕುಮಾರ್‌ ಮಾತನಾಡಿ, ಬೆಳೆಯುವ ಹಂತದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಯಾವುದೇ ಸಮಸ್ಯೆಗಳು ಬರಲಿ ಎದೆಗುಂದದೆ ಎದುರಿಸಬೇಕು. ಇತರೆಯವರೊಂದಿಗೆ ಚರ್ಚಿಸಬೇಕು. ಆಗ ಮಾತ್ರ ದೌರ್ಜನ್ಯಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಬಹಳಷ್ಟುಹೆಣ್ಣು ಮಕ್ಕಳು ಮೌನವಾಗಿ ಸಹಿಸುತ್ತಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರತಿರೋಧ ಒಡ್ಡುವ ಗುಣ ಬೆಳೆಸಿಕೊಂಡಾಗ ಆಕ್ರಮಣಕಾರಿ ಪ್ರವೃತ್ತಿಗಳು ದೂರವಾಗುತ್ತವೆ ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಪ್ರಾಸ್ತಾವಿಕ ನುಡಿಗಳನ್ನಾಡಿ ಪಿಯು ಹಂತದ ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣ ಏನು ಎಂಬುದನ್ನು ಹುಡುಕಿದಾಗ ಮೊಬೈಲ್‌ ಬಳಕೆ, ಪ್ರೀತಿ ಪ್ರೇಮದ ಹುಚ್ಚಾಟದಂತಹ ವಿಷಯಗಳೇ ಕಂಡುಬರುತ್ತಿವೆ. ಆರೋಗ್ಯ ಸುಸ್ಥಿತಿಯಲ್ಲಿ ಇಟ್ಟುಕೊಂಡು ಬದುಕಿನ ಗುರಿ ಮುಟ್ಟುವುದೊಂದೇ ಉದ್ದೇಶವಾಗಬೇಕು ಎಂದರು.

ಎಸ್‌.ಐ.ಟಿ. ವನಿತೆಯರ ಬಳಗದ ಅಧ್ಯಕ್ಷೆ ಹೇಮಾ ಮಲ್ಲಿಕಾರ್ಜುನ್‌, ಸಖಿ ಕೇಂದ್ರದ ರಾಧಾಮಣಿ ಮಾತನಾಡಿದರು. ರಾಜೇಶ್ವರಿ ಚಂದ್ರಶೇಖರ್‌, ನಿಲಯ ಪಾಲಕರಾದ ವಸಂತ, ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು. ಪಾರ್ವತಮ್ಮ, ಅಕ್ಕಮ್ಮ, ಸವಿತ ಸಂಗಡಿಗರು ಜಾಗೃತಿ ಗೀತೆಗಳನ್ನು ಹಾಡಿದರು.

ಆಸೆ, ಆಮಿಷಕ್ಕೆ ಬಲಿಯಾಗಬೇಡಿ: ಆಚಾರ್ಯ

ಬಹಳಷ್ಟುವಿದ್ಯಾರ್ಥಿಗಳು ಅನ್ಯ ವಿಷಯಗಳ ಕಡೆಗೆ ಗಮನ ಹರಿಸಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಆದಕಾರಣ ವಿದ್ಯಾರ್ಥಿನಿಯರು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಹಿಂದೆ ಕುಟುಂಬಗಳಲ್ಲಿ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಮಾರ್ಗದರ್ಶನ ನೀಡುತ್ತಿದ್ದರು. ಇಂದಿನ ದಿನಗಳಲ್ಲಿ ಮಾರ್ಗದರ್ಶನದ ಕೊರತೆ ಇದೆ. ಹೀಗಾಗಿ ತಕ್ಷಣದ ಆಮಿಷಗಳಿಗೆ ಮತ್ತು ಆಸೆಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ತಂತ್ರಜ್ಞಾನ ನಮ್ಮನ್ನು ಮಾನವೀಯತೆಯಿಂದ ವಿಮುಖರನ್ನಾಗಿ ಮಾಡುತ್ತಿದೆ. ಹಿಂದಿನಿಂದಲೂ ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ಒಂದು ಸ್ಥಾನ ಇದೆ. ಈ ಸ್ಥಾನಮಾನ ಉಳಿಯಬೇಕು ಮತ್ತು ಹಕ್ಕುಗಳನ್ನು ಗೌರವಿಸಬೇಕು ಎಂದು ನ್ಯಾ.ನಾರಾಯಣ ಆಚಾರ್ಯ ಹೇಳಿದರು.

click me!