ಆತಂಕದಲ್ಲಿ ಮಹಿಳೆ, ಮಕ್ಕಳ ಹಕ್ಕುಗಳು: ಶೈಲಜಾ ಟೀಚರ್‌

By Kannadaprabha News  |  First Published Mar 8, 2023, 5:38 AM IST

ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಹರಣವಾಗುತ್ತಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ, ಶಾಸಕಿ ಶೈಲಜಾ ಟೀಚರ್‌ ಆತಂಕ ವ್ಯಕ್ತಪಡಿಸಿದರು.


  ತುಮಕೂರು :  ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಹರಣವಾಗುತ್ತಿದ್ದು, ಆತಂಕದ ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ, ಶಾಸಕಿ ಶೈಲಜಾ ಟೀಚರ್‌ ಆತಂಕ ವ್ಯಕ್ತಪಡಿಸಿದರು.

ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನಮನೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

Latest Videos

undefined

ಇಂದು ಮನುಸ್ಮೃತಿಯ ಪರವಾದ ಆಡಳಿತ ನಡೆಸಲಾಗುತ್ತಿದೆ. ಮಹಿಳೆಯರು ಮತ್ತು ಗಳನ್ನು ನಿರಂತರವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇಂದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆಡಳಿತ ನಡೆಯುತ್ತಿದೆ. ಮೂಲಭೂತವಾದ ನಮ್ಮ ದೇಶದ ಬಹಳ ದೊಡ್ಡ ಶತ್ರುವಾಗಿದೆ. ಬಿಲ್ಕಿಸ್‌ಬಾನು ಪ್ರಕರಣದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಗುಜರಾತ್‌ ಸರ್ಕಾರ ಇಂತಹ ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ಸನ್ನಡತೆ ಆಧಾರದ ಮೇಲೆ ಅವರನ್ನು ಉತ್ತಮ ವ್ಯಕ್ತಿಗಳು ಎಂದು ಬಿಡುಗಡೆ ಮಾಡಿದೆ. ಹೀಗಾಗಿ ಅವರು ಇಂದು ಮುಕ್ತವಾಗಿ ಎಲ್ಲೆಡೆ ತಿರುಗಾಡಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಇಂದು ಮಕ್ಕಳ ಸಾವುಗಳು, ಶಿಶು ಮರಣ, ಹೆರಿಗೆಯ ಸಂದರ್ಭದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಾವುಗಳು ಸಂಭವಿಸುತ್ತಿವೆ. ನಿರಂತರ ಹೋರಾಟದ ಫಲವಾಗಿ ಶಿಶು ಮತ್ತು ತಾಯಿ ಮರಣದ ಪ್ರಕರಣಗಳು ಕಡಿಮೆ ಆಗಿವೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ. ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ತಮ್ಮ ಎಲ್ಲ ಬಗೆಯ ಹಕ್ಕುಗಳಿಗಾಗಿ ತಮಗೆ ಬೇಕಾಗಿರುವ ಶಿಕ್ಷಣ, ಮತದಾನ, ಸಮಾನತೆ, ಸಮಾನವಾದ ಅವಕಾಶಗಳ ಹಕ್ಕಿಗಾಗಿ ಮಹಿಳೆಯರು ಹೋರಾಟ ಮಾಡಿದ ಫಲವಾಗಿ ನಾವು ಇಲ್ಲಿ ಸೇರಿ ಚರ್ಚಿಸಲು ಸಾಧ್ಯವಾಗಿದೆ ಎಂದ ಶೈಲಜಾ ಟೀಚರ್‌, ಆಸ್ತಿ ಉಳ್ಳವರಾಗಿರಲಿ ಅಥವಾ ಇಲ್ಲದವರಾಗಿರಲಿ ಎಲ್ಲ ಮಹಿಳೆಯರು ಸಮಾನವಾಗಿರಬೇಕು. ಸಮಾನವಾದÜಂತಹ ಹಕ್ಕುಗಳಿರಬೇಕು. ಶಿಕ್ಷಣ, ಉದ್ಯೋಗ ಮತ್ತು ಮತದಾನಕ್ಕೆ ಪ್ರಬಲ ಹೋರಾಟ ನಡೆಯಿತು ಎಂಬುದನ್ನು ಮರೆಯಲಾಗದು ಎಂದರು.

ಸಂವಿಧಾನ ಸಂರಕ್ಷಣೆ ತುರ್ತಿದೆ:

ಭಾರತದ ಸಂವಿಧಾನ ಅತ್ಯದ್ಭುತ ಸಂವಿಧಾನವಾಗಿದೆ. ಇಡೀ ಪ್ರಪಂಚದಲ್ಲಿರುವಂತಹ ಅತ್ಯುತ್ತಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಇಟ್ಟುಕೊಂಡು ನಮ್ಮ ಸಂವಿಧಾನ ರಚನೆಯಾಗಿದೆ. ಇಂತಹ ಸಂವಿಧಾನ ಇಂದು ಅಪಾಯದಲ್ಲಿದ್ದು ಇದನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಶೈಲಜಾ ಎಚ್ಚರಿಸಿದರು.

ಸಂವಿಧಾನದ ಕಾರಣಕ್ಕಾಗಿ ಇಲ್ಲಿದ್ದೇನೆ:

ಉದ್ಘಾಟನಾ ನುಡಿಗಳನ್ನಾಡಿದ ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ ಜಮ್‌, ನಾನು ಇಂದು ಈ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದು ಸಂವಿಧಾನದ ಕಾರಣಕ್ಕಾಗಿ ಎಂಬುದನ್ನು ಮರೆಯಲಾಗದು. ನನ್ನ, ನನ್ನಂತವರ ಶಿಕ್ಷಣ, ಉದ್ಯೋಗ, ಸಮಾನತೆ ಇತರೆ ವಿಷಯಗಳಲ್ಲಿ ಸಂವಿಧಾನದ ಪಾತ್ರವೇ ಬಹುಮುಖ್ಯ. ಭಾರತದ ಸಂವಿಧಾನ ಇಲ್ಲದಿದ್ದರೆ ನಾನಿಲ್ಲಿ ಭಾಷಣ ಮಾಡಲು ಸಾಧ್ಯವಿರಲಿಲ್ಲ ಎಂದು ಸ್ಮರಿಸಿ, ಆಡಳಿತದಲ್ಲಿನ ಮಹಿಳೆಯರ ಸಂಕಷ್ಟಗಳು, ಕೊರೋನಾ ಸಂದರ್ಭದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡು, ಸ್ಪೂರ್ತಿಯ ಮಾತುಗಳನ್ನಾಡಿದರು.

ಒಕ್ಕೂಟದ ಸಂಗಾತಿಗಳಿಂದ ಆಶಯ ಗೀತೆ ಹಾಡಲಾಯಿತು. ಸೈಯದ್‌ ಮುಜೀಬ್‌ ಸ್ವಾಗತಿಸಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಸಂವಿಧಾನ ಪೀಠಿಕೆ ವಾಚಿಸಿದರು. ಮಹಿಳಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮಕ್ಕೆ ತಮಟೆ ನರಸಮ್ಮ, ಸ್ಲಂ ಕಲಾ ತಂಡದವದರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಯೂಸಿಎಲ್‌ನ ಪ್ರೊ. ಕೆ. ದೊರೈರಾಜ್‌, ಸಿಸ್ಟರ್‌ ಡಯಾನ, ಡಾ. ಹನುಮಕ್ಕ, ಡಾ. ಎಚ್‌.ಎಸ್‌. ಅನುಪಮಾ, ಮಂಜುಳಾ ಗೋನಾವರ, ಗಂಗಮ್ಮ ಕೆಂಪಯ್ಯ, ಪರ್ವಿನ್‌ ತಾಜ್‌, ಗಂಗರಾಜಮ್ಮ, ಸಾವಯವ ಕೃಷಿಕರಾದ ಅರುಣಾ, ಅಕೈ ಪದ್ಮಶಾಲಿ, ಹೇಮಲತಾ ತಿಪಟೂರು, ವಾಣಿ ಪೆರಿಯೋಡಿ, ವಿಮಲ, ಅಕ್ಕಯ… ಪದ್ಮಶಾಲಿ, ಕಲ್ಯಾಣಿ, ವಿಜಯಮ್ಮ, ಡಾ.ಅರುಂಧತಿ, ರೇಣುಕಾ ಕೆಸರುಮಡು, ಜಿ. ಕಮಲ ಇತರರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಲೇಖಕಿ ಬಾ.ಹ. ರಮಾಕುಮಾರಿ ವಹಿಸಿದ್ದರು.

ಗಗನಕ್ಕೇರಿದ ದಿನಸಿ ವಸ್ತುಗಳ ಬೆಲೆ:

ಕೇಂದ್ರ ಸರ್ಕಾರ ಇಂದು ಬಹುರಾಷ್ಟ್ರೀಯ ಕಾರ್ಪೋರೇಚ್‌ಗಳ ಪರವಾಗಿ ಕೆಲಸ ಮಾಡುತ್ತಿದೆ. ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಹಿಳೆಯರು ಇಷ್ಟೊಂದು ಬೆಲೆಯನ್ನು ಭರಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ ಅವರು ದಿನಬಳಕೆ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.

ಬಂಗಾಳದ ಕವಿ ದೇವೇಂದ್ರನಾಥ ಟ್ಯಾಗೋರ್‌ ಯಾವ ರೀತಿಯ ಭಾರತ ನಮಗೆ ಬೇಕು ಎಂಬುದನ್ನು ಹೇಳಿದ್ದಾರೆ. ಎಲ್ಲಿ ಮಾತುಗಳು ನಿರ್ಬಂಧಿತವಾಗಿಲ್ಲವೋ ಅಂತಹ ಸಮಾಜ ನಮಗೆ ಬೇಕು. ಸಮಾನತೆಯ ದೇಶ ನಮಗೆ ಬೇಕಾಗಿದೆ. ಇದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಸಮಾನತೆಯ ಸಮಾಜ ನಮಗೆ ಬೇಕು ಎಂಬ ಕನಸಿನ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಯಾಗಿತ್ತು ಎಂದು ಕೇರಳದ ಮಾಜಿ ಸಚಿವೆ ಶೈಲಜಾ ಹೇಳಿದರು.

ವಿವಿಧತೆಯಲ್ಲಿ ಏಕತೆಯಿರುವ ಭಾರತ:

ಜಾತ್ಯತೀತತೆ ಬಹಳ ಮುಖ್ಯ ವಿಚಾರವಾಗಿದೆ. ಸಂವಿಧಾನ ಬಂದ ಮೇಲೆ ಭೂಮಾಲಿಕರ ಅಧಿಕಾರದ ವಿರುದ್ಧ ನಿರಂತರ ಹೋರಾಟದ ಫಲವಾಗಿ ಉತ್ತಮ ಕಾನೂನುಗಳನ್ನು ಜಾರಿಗೆ ತಂದು ಸಾಕಷ್ಟುಬದಲಾವಣೆ ಕಾಣುವಂತಾಗಿದೆ. ಇದು ಸಂವಿಧಾನದ ಶಕ್ತಿ ಎಂದರು. ನಮ್ಮ ಭಾರತವನ್ನು ಯಾವುದೋ ಒಂದು ಸಮುದಾಯದ ಭಾರತವೆಂದು ಹೇಳಲು ಬರುವುದಿಲ್ಲ. ಇದು ಹಿಂದೂ ಭಾರತ, ಮುಸ್ಲಿಮರ ಭಾರತ ಮತ್ತು ಕ್ರಿಶ್ಚಿಯನ್ನರ ಭಾರತ ಎಂದು ಹೇಳಲು ಸಾಧ್ಯವಿಲ್ಲ. ಅದೊಂದು ಜಾತ್ಯತೀತ ಭಾರತ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಎನ್ನುವುದನ್ನು ಸ್ವಾತಂತ್ರ್ಯ ನಂತರ ರಚನೆಯಾಗಿರುವ ಸಂವಿಧಾನ ನಮಗೆ ಹೇಳಿಕೊಟ್ಟಿದೆ ಎಂದರು.

click me!