ಬೆಂಗ್ಳೂರಿಂದ ಊರು ತಲುಪ್ತಿದ್ದಂತೆ ನಾನು ಬರ್ತಿದ್ದೀನಿ ಅಪ್ಪಾ ಎಂದ ಮಗ ಅಪ್ಪ ಬಂದಾಗ ಇನ್ನಿಲ್ಲವಾಗಿದ್ದ..!

Kannadaprabha News   | Asianet News
Published : Jun 17, 2020, 07:17 AM IST
ಬೆಂಗ್ಳೂರಿಂದ ಊರು ತಲುಪ್ತಿದ್ದಂತೆ ನಾನು ಬರ್ತಿದ್ದೀನಿ ಅಪ್ಪಾ ಎಂದ ಮಗ ಅಪ್ಪ ಬಂದಾಗ ಇನ್ನಿಲ್ಲವಾಗಿದ್ದ..!

ಸಾರಾಂಶ

ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್‌ವೊಂದರಲ್ಲಿ ಪ್ರಯಾಣ ಬೆಳೆಸಿದ್ದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಬಸ್‌ನಲ್ಲೇ ಅಸ್ವಸ್ಥಗೊಂಡು ಮೃತಪಟ್ಟಘಟನೆ ಕುದಾಪುರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿ ಆಚಾರಿ ಅವರ ಏಕೈಕ ಪುತ್ರ ಚೈತನ್ಯ (25) ಮೃತರು.

ಕುಂದಾಪುರ(ಜೂ.17): ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್‌ವೊಂದರಲ್ಲಿ ಪ್ರಯಾಣ ಬೆಳೆಸಿದ್ದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಬಸ್‌ನಲ್ಲೇ ಅಸ್ವಸ್ಥಗೊಂಡು ಮೃತಪಟ್ಟಘಟನೆ ಕುದಾಪುರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿ ಆಚಾರಿ ಅವರ ಏಕೈಕ ಪುತ್ರ ಚೈತನ್ಯ (25) ಮೃತರು.

ಬೆಂಗಳೂರಿನಲ್ಲೇ ಎಂಜಿನಿಯರಿಂಗ್‌ ಶಿಕ್ಷಣ ಪಡೆದ ಚೈತನ್ಯ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿ ದುಡಿಯುತ್ತಿದ್ದರು. ಕೆಲಸ ಕಡಿಮೆಯಿದ್ದ ಕಾರಣ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಆನ್‌ಲೈನ್‌ನಲ್ಲಿ ಬಸ್‌ ಟಿಕೆಟ್‌ ಕಾಯ್ದಿರಿಸಿದ್ದರು.

ದಕ್ಷಿಣ ಕನ್ನಡದಲ್ಲಿ ಮೂವರು ಗರ್ಭಿಣಿಯರು ಸಹಿತ 23 ಮಂದಿಗೆ ಪಾಸಿಟಿವ್

ಅಂತೆಯೇ ಸೋಮವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಊರಿಗೆ ಬರುತ್ತಿದ್ದ ಅವರು ಬೆಳಿಗ್ಗೆ 6.30ರ ಸುಮಾರಿಗೆ ಕರೆಮಾಡಿ ಬಾರ್ಕೂರು ಸಮೀಪ ಬರುತ್ತಿರುವುದಾಗಿ ತಂದೆಗೆ ತಿಳಿಸಿದ್ದರು. ಚೈತನ್ಯ ಕೋಟೇಶ್ವರದಲ್ಲಿ ಇಳಿಯದ ಹಿನ್ನೆಲೆ ನಿರ್ವಾಹಕ ಅನುಮಾನಗೊಂಡು ಹತ್ತಿರ ಬಂದಾಗ ಅಸ್ವಸ್ಥಗೊಂಡು ಮಲಗಿದ್ದರು ಎನ್ನಲಾಗಿದೆ. ಕೂಡಲೇ ಮನೆಯವರ ಕರೆಯನ್ನು ಸ್ವೀಕರಿಸಿ ವಿಷಯ ಮುಟ್ಟಿಸಿ ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

3 ತಿಂಗಳಿಂದ ಚಿಕಿತ್ಸೆ: 6 ಬಾರಿ ಪರೀಕ್ಷೆಯಲ್ಲೂ ಕೊರೋನಾ ಪಾಸಿಟಿವ್

ಕೋವಿಡ್‌ ಹಿನ್ನೆಲೆ ಆಸ್ಪತ್ರೆಯನ್ನು ಸ್ಥಳಾಂತರಿಸಿದ್ದರಿಂದ ಅಲ್ಲೇ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಚೈತನ್ಯ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ನಿಖರ ಕಾರಣ ತಿಳಿದುಬರಲಿದೆ. ಮೃತರಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರು ಇದ್ದಾರೆ.

ಮರಣೋತ್ತರ ಪರೀಕ್ಷೆ ಮಣಿಪಾಲಕ್ಕೆ: ಕುಟುಂಬಸ್ಥರ ಆಕ್ರೋಶ

ಕೋವಿಡ್‌-19 ಕಾರಣ ಮುಂದಿಟ್ಟುಕೊಂಡು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಚೈತನ್ಯ ಅವರ ಮರಣೋತ್ತರ ಪರೀಕ್ಷೆ ನಡೆಸಲು ಅಲ್ಲಿನ ವೈದ್ಯರು ನಿರಾಕರಿಸಿದ್ದರಿಂದ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಚೈತನ್ಯ ಅವರ ಕುಟುಂಬಿಕರು ಆರೋಪಿಸಿದ್ದಾರೆ. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಕುಟುಂಬದ ಸದಸ್ಯರೋರ್ವರು ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ನಿರ್ಲಕ್ಷ್ಯ ಧೋರಣೆ ತಾಳಿದ ವೈದ್ಯರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ