ಬೆಂಗಳೂರು ಟೆಕ್ಕಿ ಪೂಜಾ ದತ್ತ ಸಾವು ಪ್ರಕರಣ: ಗೋಡೆ ಮೇಲಿದ್ದ ಆ ಪದಗಳೇ ನಿಗೂಢ ಸಾವಿಗೆ ಕಾರಣ ಹೇಳ್ತಿದೆಯಾ?

Published : Apr 29, 2026, 01:41 PM IST
Techie Pooja Dutta

ಸಾರಾಂಶ

ಬೆಂಗಳೂರಿನಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವು ಸಂಭವಿಸಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ, ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಕೊಠಡಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದ ವಿಚಿತ್ರ ಪದಗಳು ಮತ್ತು ಅವರ ಖಿನ್ನತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 ಬೆಂಗಳೂರು: ನಗರದಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವು ಮಹತ್ವದ ಹಾಗೂ ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.

ಜಾರ್ಖಂಡ್ ಮೂಲದ ಪೂಜಾ ದತ್ತ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಸುಮಾರು ಒಂದು ವರ್ಷ ಹಿಂದೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಬಳಿಕ ಮೊಬೈಲ್ ಫೋನ್‌ನ್ನು ಆಫ್ ಮಾಡಿಕೊಂಡಿದ್ದರು. ಹಳೆಯ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಬಳಸಿದರೂ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕೂಡ ಕಳೆದ ಒಂದು ವರ್ಷದಿಂದ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.

ಮೂರು ತಿಂಗಳ ಹಿಂದೆ ಅವರು ಬಳಸುತ್ತಿದ್ದ ಹೊಸ ಸಿಮ್‌ನ ವ್ಯಾಲಿಡಿಟಿ ಕೂಡ ಮುಗಿದು ಹೋಗಿದ್ದು, ಅದರ ಬಳಿಕ ಅವರ ಮೊಬೈಲ್ ಸಂಪೂರ್ಣವಾಗಿ ಆಫ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಪೂಜಾ ದತ್ತ ಅವರು ಹೊರಗೆ ಕಾಣಿಸಿಕೊಂಡಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ತೀವ್ರ ಖಿನ್ನತಗೆ ಒಳಗಾಗಿ ಇದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸರು ಪರಿಶೀಲಿಸಿದಾಗ, ಪೂಜಾ ದತ್ತ ಅವರ ಕೊಠಡಿಯಲ್ಲಿ ಅನೇಕ ಕಾಗದಗಳ ಮೇಲೆ “Peace”, “Ego”, “Trust”, “Satisfaction”, “Love”, “Solo Love” ಎಂಬ ಪದಗಳನ್ನು ಬರೆದು ಗೋಡೆಗಳಿಗೆ ಅಂಟಿಸಿರುವುದು ಕಂಡುಬಂದಿದೆ. ಇದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆ ಬಗ್ಗೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ

ಪ್ರಸ್ತುತ ತನಿಖೆಯಲ್ಲಿ ಕೊಲೆ ನಡೆದಿರುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೂ ಸಾವಿನ ನಿಜಸ್ವರೂಪ ಪತ್ತೆಹಚ್ಚಲು ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರೀತಿ ವೈಫಲ್ಯ, ಕೌಟುಂಬಿಕ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳೇನಾದರೂ ಇದಕ್ಕಿದ್ದೆಯೇ ಎಂಬುದರ ಕುರಿತು ಆಡುಗೋಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪೂಜಾ ದತ್ತ ಅವರು ಕಳೆದ ಒಂದು ವರ್ಷದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ತಿಳಿಯಲು, ಅವರ ಮೊಬೈಲ್ ನಂಬರಿನ ಕಾಲ್ ಡೀಟೇಲ್ ರೆಕಾರ್ಡ್ (CDR) ಅನ್ನು ಒಂದು ವರ್ಷದ ಅವಧಿಗೆ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜೊತೆಗೆ, ಅವರು ಕೆಲಸ ಬಿಟ್ಟ ನಂತರ ಜೀವನ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತಿತ್ತು, ಬಾಡಿಗೆ ಹೇಗೆ ಪಾವತಿಸುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಇದಕ್ಕಾಗಿ ಪೂಜಾ ದತ್ತ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದು, ಸಂಬಂಧಿತ ಬ್ಯಾಂಕ್‌ಗೆ ನೋಟಿಸ್ ನೀಡಲಾಗಿದೆ. ಕಳೆದ ಒಂದು ವರ್ಷದ ಹಣಕಾಸು ವಹಿವಾಟಿನ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ. ಇದೇ ವೇಳೆ, ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೂ ನೋಟಿಸ್ ಜಾರಿ ಮಾಡಿದ್ದು, ಯಾವ ಕಾರಣಕ್ಕೆ ಅವರು ಕೆಲಸ ತೊರೆದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಕೊರೋನಾ ಅವಧಿಯಲ್ಲಿ ವಿವಾಹ, ಪತಿ ನಿಧನ

ಇದರ ಮಧ್ಯೆ, ಪೂಜಾ ದತ್ತ ಅವರು ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಅವಧಿಯಲ್ಲಿ ಅವರ ವಿವಾಹವಾಗಿದ್ದು, ನಂತರ ಅವರ ಪತಿ ನಿಧನರಾಗಿದ್ದಾರೆ. ಪತಿಯ ಸಾವಿನ ಬಳಿಕ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಬಳಿಕ 2023ರಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೂ ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ. ನಂತರ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದ್ದು, ಇದೇ ಒಂಟಿತನ ಮತ್ತು ಖಿನ್ನತೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಪೂಜಾ ದತ್ತ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವು ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯುತ್ತಿದ್ದು, ಒಂಟಿತನ ಮತ್ತು ಖಿನ್ನತೆ ಎದುರಿಸುವವರಿಗೆ ಸಮಯೋಚಿತ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.

PREV
Read more Articles on
click me!

Recommended Stories

ರಾಯಚೂರು: ಚಿಕ್ಕಪ್ಪನಿಂದ ಅಮ್ಮನ ಜೀವ ಉಳಿಸಲು ಹೋಗಿ 12 ವರ್ಷದ ಬಾಲಕ ಸಾವು
ಉತ್ತರ ಕನ್ನಡ: ನಿವೃತ್ತ ಎಲ್‌ಐಸಿ ಏಜೆಂಟ್‌ ಗೆ ಮುಂಬೈನಿಂದ ಡಿಜಿಟಲ್ ಅರೆಸ್ಟ್ ₹1.74 ಕೋಟಿ ಕಳೆದುಕೊಂಡ ವೃದ್ಧ!