Mangaluru: ಯೆನೆಪೋಯ ಆಸ್ಪತ್ರೆಯಲ್ಲಿ ಐತಿಹಾಸಿಕ ಶಸ್ತ್ರಚಿಕಿತ್ಸೆ; ಇದು ದೇಶದಲ್ಲಿಯೇ ಮೊದಲು

Published : Apr 29, 2026, 10:27 AM IST
Yenepoya Specialty Hospital

ಸಾರಾಂಶ

ಕ್ಯಾನ್ಸರ್‌ನಿಂದಾಗಿ ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ರೋಗಿಗೆ ಯೆನೆಪೋಯ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಭಾರತದಲ್ಲೇ ಪ್ರಥಮ ಎನ್ನಲಾದ ಈ 13 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ, ಕ್ಯಾನ್ಸರ್ ಪೀಡಿತ ಮೂಳೆ ಮತ್ತು ಸ್ನಾಯುಗಳನ್ನು ತೆಗೆದು, ಕಾಲನ್ನು ಪುನರ್ ನಿರ್ಮಿಸಿ ರೋಗಿ ಮತ್ತೆ ನಡೆಯುವಂತೆ ಮಾಡುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಮಂಗಳೂರು: ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ಅಂಗವನ್ನು ಉಳಿಸಿಕೊಳ್ಳುವ ಐತಿಹಾಸಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.

ಈ ಶಸ್ತ್ರಚಿಕಿತ್ಸೆಯು ವೈದ್ಯಕೀಯ ಇತಿಹಾಸದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ನಡೆದಿದ್ದರೆ, ವಿಶ್ವ ಮಟ್ಟದಲ್ಲಿ ಮೂರನೆದಾಗಿ ದಾಖಲಾಗುವ ಮೂಲಕ ಯೆನೆಪೋಯ ಆಸ್ಪತ್ರೆ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ದೇರಳಕಟ್ಟೆ ಯೆನೆಪೋಯ ಅಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜಲಾಲುದ್ದೀನ್ ಅಕ್ಬರ್ ಹೇಳಿದರು.

ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಉಂಟಾದ ಕ್ಯಾನ್ಸರ್‌

ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಮೂಲದ ಸುಮಾರು 39 ವರ್ಷದ ರೋಗಿಯೊಬ್ಬರು ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಉಂಟಾದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ವಿವಿಧ ಹೆಸರಾಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರ ಬಲ ಕಾಲನ್ನು ಸಂಪೂರ್ಣವಾಗಿ ತುಂಡರಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಹಿನ್ನೆಲೆ ಯೆನೆಪೋಯ ಆಸ್ಪತ್ರೆಗೆ ಬಂದ ರೋಗಿಗೆ, ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿಯ ತಜ್ಞ ವೈದ್ಯರ ತಂಡವು ಹೊಸ ಪರಿಹಾರ ಕ್ರಮಕ್ಕೆ ಮುಂದಾಯಿತು. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಜಲಾಲುದ್ಧೀನ್ ಅಕ್ಬರ್ ಅವರ ನೇತೃತ್ವದ ತಂಡ ಸವಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಯಿತು.

13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ

ಮಾ. 10ರಂದು ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಜಲಾಲುದ್ಧೀನ್ ಅಕ್ಬರ್ ನೇತೃತ್ವದ ತಂಡದಲ್ಲಿ ಸುಮಾರು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾನ್ಸರ್ ಪೀಡಿತ ತೊಡೆಯ ಮೂಳೆ ಮತ್ತು ಸ್ನಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಬಳಿಕ ಟೈಟಾನಿಯಂ ಮೆಗಾಪ್ರೊಸ್ಟೆಸಿಸ್ ಮೂಲಕ ಮೂಳೆಯನ್ನು ಪುನರ್ ನಿರ್ಮಿಸಲಾಗಿದ್ದು, ಮೈಕ್ರೋನ್ಯೂರೋವಾಸ್ಕ್ಯುಲರ್ ತಂತ್ರಜ್ಞಾನ ಬಳಸಿ ಎದೆಗೋಡೆಯ ಸ್ನಾಯುಗಳನ್ನು ವರ್ಗಾಯಿಸಿ ಅಂಗದ ಕಾರ್ಯಕ್ಷಮತೆಯನ್ನು ಪುನಃ ಸ್ಥಾಪಿಸಲಾಯಿತು. ಶಸ್ತ್ರಚಿಕಿತ್ಸೆ ನಂತರ ರೋಗಿ ಮತ್ತೆ ನಡೆಯಲು ಸಾಧ್ಯವಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ವೈದ್ಯರಾದ ಡಾ. ರೋಹನ್ ಶೆಟ್ಟಿ, ಡಾ.ಎಚ್.ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್, ಡಾ. ದೇವಿಪ್ರಸಾದ್, ಡಾ.ಚಾಂದಿನಿ, ಡಾ.ಶೃತಿ, ಡಾ. ತೇಜೇಶ್ ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಡಾ. ಪ್ರೀತಿ ಹಾಗೂ ಡಾ. ಮಹಮ್ಮದ್ ಚೌಧರಿ ಸೇರಿದಂತೆ ಹಲವರು ಈ ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸಿದ್ದರು.

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ಸಹ ಕುಲಾಧಿಪತಿಗಳಾದ ಫರ್ಹಾದ್ ಯೆನೆಪೋಯ, ಡಾ.ಎಂ. ವಿಜಯ ಕುಮಾರ್ ಹಾಗೂ ಉಪಕುಲಪತಿ ಡಾ. ಗಂಗಾಧರ ಸೋಮಯಾಜಿ ಅವರು ವೈದ್ಯರ ತಂಡದ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಯೆನೆಪೋಯ ವಿವಿ ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್, ಸಹ ಪ್ರಾಧ್ಯಾಪಕರಾದ ಡಾ. ರೋಹನ್‌ಶೆಟ್ಟಿ, ಡಾ. ಎಚ್.ಟಿ. ಅಮರ್ ರಾವ್, ಡಾ. ನೂರ್‌ ಮೊಹಮ್ಮದ್, ವೈದ್ಯಕೀಯ ಕ್ಯಾನ್ಸರ್ ತಜ್ಞರಾದ ಡಾ. ತೇಜೇಶ್‌ ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಇಂಟರ್ ವೆನ್ನನಲ್ ರೇಡಿಯೋಲಾಜಿಸ್ಟ್ ಡಾ.ಟಿ.ವಿ. ಸತೀಶ್ ಬಾಬು, ಆರ್ಥೋಪೆಡಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ

ಡಾ. ದೇವಿಪ್ರಸಾದ್, ಡಾ. ಚಾಂದಿನಿ,ಡಾ. ಶೃತಿ, ಕ್ಯಾನ್ಸರ್ ಅರಿವಳಿಕೆ ತಜ್ಞೆ ಡಾ. ಪ್ರೀತಿ ಹಾಗೂ ಆಕ್ಯುಪೇಶನಲ್ ಥೆರಪಿಸ್ಟ್ ಡಾ. ಮಹಮ್ಮದ್ ಚೌಧರಿ ಸುದ್ದಿಗೋಷ್ಠಿಯಲ್ಲಿದ್ದರು‌.

ಸಹಕುಲಾಧಿಪತಿ ಡಾ.ಎಂ. ವಿಜಯ್ ಕುಮಾರ್

ಕಾಲು ತುಂಡರಿಸಿ ತೆಗೆಯುವುದು ಬಹಳ ಸುಲಭ. ಆದರೆ ರೋಗಿಯ ಕಾಲನ್ನು ಉಳಿಸುವುದು ನಮ್ಮ ಬಳಿ ಇದ್ದ ದೊಡ್ಡ ಸವಾಲಿನ ಕೆಲಸವಾಗಿತ್ತು. ರೋಗಿಯ ಕಾಲನ್ನು ತೆಗೆಯದೆ ಅದರಲ್ಲಿನ ಕ್ಯಾನ್ಸರ್‌ನ್ನು ತೆಗೆದಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಈ ಸಾಧನೆಗೆ ಕೈಜೋಡಿಸಿದ ನಮ್ಮ ತಂಡದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು. ಈ ಶಸ್ತ್ರಚಿಕಿತ್ಸೆ ಬಹಳ ಸಂಕೀರ್ಣ ಮತ್ತು ಸವಾಲಿನದ್ದಾಗಿದೆ. ಇದು ನಮ್ಮ ದೇಶದಲ್ಲೇ ಮೊದಲ ಸಾಧನೆ ಎಂದು ಹೇಳಬಹುದು ಎಂದು ಯೆನೆಪೋಯ ಪರಿಗಣಿತ ವಿವಿಯ ಸಹಕುಲಾಧಿಪತಿ ಡಾ.ಎಂ. ವಿಜಯ್ ಕುಮಾರ್ ಹೇಳುತ್ತಾರೆ.

PREV
Read more Articles on
click me!

Recommended Stories

ಬೆಂಗಳೂರು ಡ್ರಗ್ಸ್ ಜಾಲ: ಚೂಡಿದಾರ ಉಡುಪು ಸಾಗಿಸುವ ನೆಪದಲ್ಲಿ ದೆಹಲಿಯಿಂದ ₹35 ಕೋಟಿ ಎಂಡಿಎಂಎ ಸಾಗಾಟ!
Bengaluru horror: ಬೇರೆಯವರ ಹೆಸರಲ್ಲಿ ರೂಂ ಬುಕ್, ಎಂಟ್ರಿ ಇಲ್ಲದೇ ಲಾಡ್ಜ್‌ಗೆ ಬಂದವನು ನಿಗೂಢ ಸಾವು! ಜೊತೆಗಿದ್ದವನು ಎಸ್ಕೇಪ್!