ಕೊರೋನಾ 2ನೇ ಅಲೆ: ತಪಾಸಣೆಗೆ ಇನ್ನೂ ಮೀನಾಮೇಷ

By Kannadaprabha NewsFirst Published Feb 26, 2021, 11:18 AM IST
Highlights

ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ತೀವ್ರವಾಗಿ ಹಬ್ಬುತ್ತಿರುವ ಕೊರೋನಾ 2ನೇ ಅಲೆ| ವಿಮಾನ, ರೈಲು ಹಾಗೂ ಬಸ್‌ ನಿಲ್ದಾಣಗಳಲ್ಲಿ ಈವರೆಗೂ ಆರೋಗ್ಯ ಇಲಾಖೆಯ ತಂಡ ನಿಯೋಜನೆಗೊಂಡಿಲ್ಲ| ಹುಬ್ಬಳ್ಳಿ -ಧಾರವಾಡ ಮಹಾನಗರದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ| 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.26): ಕೊರೋನಾ ಎರಡನೆಯ ಅಲೆ ಆರಂಭವಾಗಿದ್ದರೂ ಮಹಾರಾಷ್ಟ್ರ ಹಾಗೂ ಕೇರಳದಿಂದ ಬಸ್‌, ರೈಲು ಮತ್ತು ವಿಮಾನದ ಮೂಲಕ ಹುಬ್ಬಳ್ಳಿ -ಧಾರವಾಡ ಮಹಾನಗರಕ್ಕೆ ಆಗಮಿಸುವ ಪ್ರಯಾಣಿಕರ ತಪಾಸಣೆಗೆ ಇನ್ನೂ ತಂಡಗಳೇ ರಚನೆಯಾಗಿಲ್ಲ!

ಕೊರೋನಾ 2ನೇ ಅಲೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ತೀವ್ರವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಈ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೊರೋನಾ (ಆರ್‌ಟಿಪಿಸಿಆರ್‌) ನೆಗೆಟಿವ್‌ ವರದಿ ಹೊಂದಿರಬೇಕೆಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಅದಕ್ಕೆ ತಕ್ಕಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೂಡ ಅಧಿಕಾರಿಗಳ ಸಭೆ ನಡೆಸಿ ಕೂಡಲೇ ತಂಡ ರಚಿಸಿ ನಿಗಾವಹಿಸುವಂತೆ ಸೂಚಿಸಿದ್ದರು. ಆದರೆ ಸಭೆ ನಡೆಸಿ ಮೂರು ದಿನಗಳಾದರೂ ವಿಮಾನ, ರೈಲು ಹಾಗೂ ಬಸ್‌ ನಿಲ್ದಾಣಗಳಲ್ಲಿ ಈವರೆಗೂ ಆರೋಗ್ಯ ಇಲಾಖೆಯ ತಂಡ ನಿಯೋಜನೆಗೊಂಡಿಲ್ಲ. ಆರೋಗ್ಯ ಇಲಾಖೆ ಮಾತ್ರ ತಂಡಗಳನ್ನು ರಚಿಸಲಾಗಿದೆ. ಶುಕ್ರವಾರದಿಂದ ಕಾರ್ಯನಿರ್ವಹಿಸಲಿವೆ ಎಂದು ಹೇಳುತ್ತಿದೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಮಾನಗಳ ಮೂಲಕ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಟಿಕೆಟ್‌ ಬುಕ್‌ ಮಾಡುವಾಗಲೇ ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ವರದಿ ಖಚಿತಗೊಂಡ ಮೇಲೆ ಟಿಕೆಟ್‌ ನೀಡಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸುತ್ತವೆ. ಹುಬ್ಬಳ್ಳಿಗೆ ಮುಂಬೈನಿಂದ ಪ್ರತಿನಿತ್ಯ ಒಂದು ವಿಮಾನ ಹಾಗೂ ಮಂಗಳವಾರ, ಶುಕ್ರವಾರ ಹಾಗೂ ಶನಿವಾರ ಹೀಗೆ 3 ವಿಮಾನಗಳು ಬರುತ್ತವೆ. ಇನ್ನೂ ಕೇರಳದ ಕಣ್ಣೂರಿನಿಂದ 1 ಹಾಗೂ ಕೊಚಿನ್‌ನಿಂದ ಮಂಗಳವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ನಿತ್ಯ ಒಂದು ವಿಮಾನ ಹಾರಾಟ ನಡೆಸುತ್ತದೆ. ಅಲ್ಲಿ ವರದಿ ನೋಡಿಯೇ ಬುಕ್‌ ಮಾಡಲಾಗುತ್ತಿದ್ದರೂ ಇಲ್ಲಿ ವರದಿ ಪರಿಶೀಲನೆಗೆ ಯಾವುದೇ ತಂಡ ನಿಯೋಜಿಸಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆಯ ತಂಡ ನಿಯೋಜಿಸುವಂತೆ ಕೋರಲಾಗಿದೆ. ಆದರೆ ಈವರೆಗೂ ತಂಡ ನಿಯೋಜಿಸಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸುತ್ತಾರೆ.

ವಿಜಯನಗರ: ಕೊರೋನಾ 2ನೇ ಅಲೆ ಭೀತಿ, ಕೊಟ್ಟೂರೇಶ್ವರ ರಥೋತ್ಸವ ರದ್ದು

ಬಸ್‌ ನಿಲ್ದಾಣ:

ಹುಬ್ಬಳ್ಳಿಯಿಂದ ಮಹಾರಾಷ್ಟ್ರದ ಕೊಲ್ಲಾಪುರ, ಮುಂಬೈ, ಶಿರಡಿ ಸೇರಿದಂತೆ ಮತ್ತಿತರರ ಪ್ರದೇಶಗಳಿಗೆ ಇಲ್ಲಿಂದ ತೆರಳುತ್ತವೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 478 ಬಸ್‌ಗಳು ಮಹಾರಾಷ್ಟ್ರಕ್ಕೆ ಸಂಚರಿಸುತ್ತವೆ. ಬಸ್‌ಗಳಲ್ಲೂ ವರದಿ ನೋಡಿಯೇ ಪ್ರಯಾಣಿಕರಿಗೆ ಹತ್ತಿಸಿಕೊಳ್ಳುವಂತೆ ನಿರ್ವಾಹಕರು ಹಾಗೂ ಚಾಲಕರಿಗೆ ಸಂಸ್ಥೆ ಸೂಚನೆಯನ್ನೆನೋ ನೀಡಿದೆ. ಅದರಂತೆ ಚಾಲಕರು, ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಬಂದ ಮೇಲೆ ಬಸ್‌ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು, ವರದಿ ಪರಿಶೀಲನೆಗೆ ತಂಡ ನಿಯೋಜಿಸಬೇಕು. ಆ ಕೆಲಸವಿನ್ನೂ ಆಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ರೈಲು ನಿಲ್ದಾಣ:

ಕೇರಳದಿಂದ ಹುಬ್ಬಳ್ಳಿಗೆ ಯಾವ ರೈಲೂ ಬರಲ್ಲ. ಆದರೆ ಮಹಾರಾಷ್ಟ್ರದಿಂದ ಮೀರಜ್‌- ಬೆಂಗಳೂರು (ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌) ರೈಲು ಸಂಚರಿಸುತ್ತಿರುತ್ತದೆ. ಮಹಾರಾಷ್ಟ್ರದಿಂದ ಸಂಚರಿಸುವ ಇನ್ನುಳಿದ ರೈಲುಗಳು ಸದ್ಯಕ್ಕೆ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದವು. ಇನ್ನೆರಡು ದಿನಗಳಲ್ಲಿ ಮತ್ತೆ ಪುನಾರಂಭಗೊಳ್ಳಲಿವೆ. ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆಗೆ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಶುಕ್ರವಾರದಿಂದ ತಪಾಸಣೆ ಕಾರ್ಯ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕರುನಾಡಿಗೆ ಕಂಟಕವಾಗುತ್ತಾರಾ ಆ 27 ಜನ ..?

ತಂಡಗಳ ನಿಯೋಜನೆ:

ಜಿಲ್ಲಾಧಿಕಾರಿ ನಿರ್ದೇಶನದಂತೆ ತಂಡ ರಚಿಸಲಾಗಿದೆ. ಶುಕ್ರವಾರ (ಫೆ. 26)ರಿಂದ ವಿಮಾನ, ಬಸ್‌ ಹಾಗೂ ರೈಲು ನಿಲ್ದಾಣಗಳಲ್ಲಿ ತಂಡಗಳು ನಿಯೋಜನೆಗೊಳ್ಳಲಿವೆ. ಇದರೊಂದಿಗೆ ಖಾಸಗಿ ಬಸ್‌ಗಳನ್ನು ಪರಿಶೀಲನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಈವರೆಗೂ ಹೊರರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆ ಕುರಿತು ಈವರೆಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮಾತ್ರ ಗೋಚರವಾಗುತ್ತದೆ. ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ಕೂಡಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಬೋರ್ಡಿಂಗ್‌ ವೇಳೆ ವರದಿ ನೋಡಿಯೇ ಟಿಕೆಟ್‌ ನೀಡಲಾಗುತ್ತಿರುವುದರಿಂದ ಅಷ್ಟೊಂದು ಸಮಸ್ಯೆಯಾಗದು. ಆದರೂ ವಿಮಾನ, ರೈಲು, ಬಸ್‌ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ತಂಡಗಳನ್ನು ಶುಕ್ರವಾರದಿಂದ ನಿಯೋಜಿಸಲಾಗುತ್ತಿದೆ. ಇಲ್ಲೂ ತಪಾಸಣೆ ನಡೆಸಲಾಗುವುದು ಎಂದು ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್‌.ಎಸ್‌. ಹಿತ್ತಲಮನಿ ತಿಳಿಸಿದ್ದಾರೆ.  

ಕಳೆದ ಬಾರಿಯಂತೆ ಈ ಸಲ ನಿರ್ಲಕ್ಷ್ಯ ಮಾಡದೇ ಕೂಡಲೇ ಎಲ್ಲೆಡೆ ತಂಡಗಳನ್ನು ನಿಯೋಜಿಸಬೇಕು. ಅತ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಕೊರೋನಾ ಎರಡನೆಯ ಅಲೆ ಬಾರದಂತೆ ತಡೆಗಟ್ಟಬೇಕು ಎಂದು ಹುಬ್ಬಳ್ಳಿ ನಿವಾಸಿ ಮಂಜುನಾಥ ಪಾಟೀಲ ಹೇಳಿದ್ದಾರೆ. 
 

click me!