ಬೆಂಗ್ಳೂರಿಂದ ಬಂದವರನ್ನು ಅನುಮಾನದಿಂದ ನೋಡ್ಬೇಡಿ: ಹರತಾಳು ಹಾಲಪ್ಪ

Kannadaprabha News   | Asianet News
Published : Jul 15, 2020, 08:00 AM IST
ಬೆಂಗ್ಳೂರಿಂದ ಬಂದವರನ್ನು ಅನುಮಾನದಿಂದ ನೋಡ್ಬೇಡಿ: ಹರತಾಳು ಹಾಲಪ್ಪ

ಸಾರಾಂಶ

ಕೊರೋನಾ ಹಿನ್ನೆಲೆಯಲ್ಲಿ ಹಲವರು ಬೆಂಗಳೂರಿನಿಂದ ಊರಿಗೆ ವಾಪಾಸಾಗುತ್ತಿದ್ದಾರೆ. ಹೀಗೆ ಊರಿಗೆ ಬಂದವರು ಪುನಃ ತಾವು ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಹೋಗುವುದು ವಿರಳ. ಅವರು ಇಲ್ಲಿಯೆ ಜೀವನ ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅಂಥವರ ನೆರವಿಗೆ ನಾವು ನಿಲ್ಲುತ್ತೇವೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಸಾಗರ(ಜು.15): ಕೊರೋನಾ ಸೋಂಕಿನ ಕಾರಣದಿಂದ ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಿಂದ ಊರಿಗೆ ವಾಪಾಸಾಗಿರುವ ಕೆಲಸಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಜೊತೆ ವೈಯಕ್ತಿಕವಾಗಿ ನಾನು, ಸರ್ಕಾರ ಹಾಗೂ ತಾಲೂಕು ಆಡಳಿತವಿದೆ ಎಂದು ಶಾಸಕ ಎಚ್‌. ಹಾಲಪ್ಪ ಭರವಸೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರದ ಅನೇಕ ಯುವಕರು, ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರು ಸೇರಿ ಬೇರೆಬೇರೆ ನಗರಗಳಿಗೆ ಹೋಗಿ, ಇದೀಗ ಕೊರೋನಾ ಹಿನ್ನೆಲೆಯಲ್ಲಿ ಊರಿಗೆ ವಾಪಾಸಾಗುತ್ತಿದ್ದಾರೆ. ಹೀಗೆ ಊರಿಗೆ ಬಂದವರು ಪುನಃ ತಾವು ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಹೋಗುವುದು ವಿರಳ. ಅವರು ಇಲ್ಲಿಯೆ ಜೀವನ ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅಂಥವರ ನೆರವಿಗೆ ನಾವು ನಿಲ್ಲುತ್ತೇವೆ ಎಂದು ತಿಳಿಸಿದರು.

ಕೊರೋನಾ ಇನ್ನೂ ಮೂರು ತಿಂಗಳು ತನ್ನ ಪ್ರಭಾವ ಬೀರುತ್ತದೆ. ಜೊತೆಗೆ ಮುಂದಿನ ಮೂರು ವರ್ಷ ಆರ್ಥಿಕತೆಯ ಮೇಲೆ ಅದರ ಪರಿಣಾಮ ಇರುತ್ತದೆ. ತಾವು ದುಡಿದು ಗಳಿಸಿ ತಂದಿರುವ ಹಣವನ್ನು ಜೋಪಾನವಾಗಿ ಖರ್ಚು ಮಾಡುವತ್ತ ಗಮನಹರಿಸಬೇಕು. ತೀರಾ ಸಮಸ್ಯೆಯಾದರೆ ತಮ್ಮನ್ನು ಸಂಪರ್ಕ ಮಾಡುವಂತೆ ತಿಳಿಸಿದರು.

ಶಿವಮೊಗ್ಗ ಲಾಕ್‌ಡೌನ್ ಕುರಿತು ಇಂದು ನಿರ್ಧಾರ: ಸಚಿವ ಈಶ್ವರಪ್ಪ

ಹೊರಜಿಲ್ಲೆಗಳಿಂದ ಬಂದವರು ಕಡ್ಡಾಯವಾಗಿ ಹದಿನೈದು ದಿನ ಸ್ವಯಂನಿರ್ಬಂಧಕ್ಕೆ ಒಳಗಾಗಬೇಕು. ಹೊರಗಿನ ಜನರ ಜೊತೆ ಸಂಪರ್ಕ ಬೆಳೆಸಿಕೊಳ್ಳಬಾರದು. ಅಕ್ಕಪಕ್ಕದ ಮನೆಯವರ ಜೊತೆ ಸಂಪರ್ಕ ಬೆಳೆಸಬೇಡಿ. ನಿಮ್ಮಲ್ಲಿನ ಕೀಳರಿಮೆ ಬಿಟ್ಟುಬಿಡಿ. ಅಕ್ಕಪಕ್ಕದವರು ಸಹ ಹೊರ ಊರಿನಿಂದ ಬಂದವರು ಎಂದು ಅವರನ್ನು ನಿಕೃಷ್ಟವಾಗಿ ಕಾಣಬೇಡಿ. ಹೊರ ಜಿಲ್ಲೆಗೆ ಉದ್ಯೋಗವರಸಿ ಹೋಗಿ, ವಾಪಸ್‌ ಬಂದವರು ನಮ್ಮೂರಿನ ಮಕ್ಕಳು, ಮಲೆನಾಡಿಗರು ಎನ್ನುವುದು ನೆನಪಿರಲಿ. ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿ. ಅವರನ್ನು ಅನುಮಾನದಿಂದ ನೋಡಬೇಡಿ ಎಂದು ಮನವಿ ಮಾಡಿದ ಶಾಸಕರು, ಹೊರ ಜಿಲ್ಲೆಗಳಿಗೆ ಉದ್ಯೋಗಕ್ಕೆ ಹೋದವರಿಂದ ನಮ್ಮೂರಿನ ಆರ್ಥಿಕ ಶಕ್ತಿ ಹೆಚ್ಚಿದೆ ಎನ್ನುವುದು ನೆನಪಿರಲಿ ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಜಿಲ್ಲಾ ಉಪಾಧ್ಯಕ್ಷ ಯು.ಎಚ್‌.ರಾಮಪ್ಪ, ನಗರ ಅಧ್ಯಕ್ಷ ಕೆ.ಆರ್‌.ಗಣೇಶಪ್ರಸಾದ್‌ ಹಾಜರಿದ್ದರು.

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ