ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲ| ಕೃಷಿ ಕಾಯ್ದೆಗಳು ರೈತರ ಪರ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ| ಈ ಕರಾಳ ಕಾಯ್ದೆಗಳ ವಿರುದ್ಧ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲು ಚಳವಳಿ ನಡೆಸುತ್ತೇವೆ: ತಾಹೀರ್ ಹುಸೇನ್|
ಯಾದಗಿರಿ(ಮಾ.20): ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ಟೀಕಿಸಿದ್ದಾರೆ.
ನಗರದ ಎನ್.ವಿ.ಎಂ. ಹೋಟೇಲ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿದ್ದು ಖಂಡನೀಯವಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿಂದೆ ಪಡಿತರ ಹೊಂದಿದ ಗ್ರಾಹಕರಿಗೆ ನೀಡುತ್ತಿದ್ದ ತೊಗರಿಬೇಳೆ, ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ ಎಂದ ಅವರು, ಅಕ್ಕಿ 5 ಕೆ.ಜಿ. ಕೊಡಲಾಗುತ್ತಿದೆ. ಹಂತ ಹಂತವಾಗಿ ಪಡಿತರ ವ್ಯವಸ್ಥೆ ಸಮಾಧಿ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಸರ್ಕಾರಗಳ ವಿರುದ್ಧ ಹರಿಹಾಯ್ದರು.
undefined
ಸರ್ಕಾರಗಳ ಜನವಿರೋಧಿ ನೀತಿಗಳಿಂದ ಬದುಕು ದುರ್ಬರವಾಗಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ರೈಲ್ವೆ, ವಿದ್ಯುತ್, ಶಿಕ್ಷಣ, ಸಾರಿಗೆಯ ನಿರಂತರ ಖಾಸಗೀಕರಣದಿಂದ ಕೈಗೆಟುಕದಷ್ಟುದುಬಾರಿಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ತಾಹೀರ್ ಹುಸೇನ್, ಮೊದಲೇ ಸಮಸ್ಯೆಗಳಿಂದ ಬಳಲುತ್ತಿದ್ದ ರೈತನನ್ನು ಕಾರ್ಪೋರೇಟ್ ಮಾಲೀಕರ ಹಿಡಿತಕ್ಕೆ ಒಪ್ಪಿಸುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಕಾಯಿದೆ ವಿರುದ್ಧ ವಾಗ್ದಾಳಿ ನಡೆಸಿದರು.
ಯಾದಗಿರಿ: ಪೊಲೀಸರ ವೇಷದಲ್ಲಿ ಬೈಕ್ ಕಳ್ಳತನ, ಬೆಚ್ಚಿಬಿದ್ದ ಸುರಪುರ ಜನತೆ..!
ಕೃಷಿ ಕಾಯ್ದೆಗಳು ರೈತರ ಪರ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮೊದಲಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಕೃಷಿ ಕಾಯ್ದೆ ಅನುಷ್ಠಾನಕ್ಕೆ ತರಲಿ. ಆ ಕಾಯ್ದೆಗಳಿಂದ ಯಾವುದೇ ತೊಂದರೆ ಇಲ್ಲ ಎಂಬುವುದು ರೈತರಿಗೆ ಖಚಿತವಾದ ಮೇಲೆ ದೇಶದಾದ್ಯಂತ ಜಾರಿಗೊಳಿಸಲಿ. ಈ ಕರಾಳ ಕಾಯ್ದೆಗಳ ವಿರುದ್ಧ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲು ಚಳವಳಿ ನಡೆಸುತ್ತೇವೆ ಎಂದರು.
ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಇಂದಿಗೂ ಪರಿಹಾರ ಬಂದಿಲ್ಲ. ಆದ್ದರಿಂದ ಕೂಡಲೇ ರಾಜ್ಯದಲ್ಲಿನ ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡುವ ಮೂಲಕ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯ ಮಾಧ್ಯಮ ಕಾರ್ಯದರ್ಶಿ ಜಾಗೀರ್ದಾರ್, ಜಿಲ್ಲಾಧ್ಯಕ್ಷರಾದ ವಾಸೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.