
ಬೆಳ್ತಂಗಡಿ: ಸುಮಾರು 15 ವರ್ಷಗಳ ಹಿಂದೆ ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ ತನಿಖೆಯ ಪ್ರಗತಿಯನ್ನು ತಿಳಿದುಕೊಳ್ಳಲು ದೂರುದಾರ ಜಯಂತ್ ಟಿ ಅವರು ಬೆಳ್ತಂಗಡಿ ಎಸ್ಐಟಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿವರಗಳನ್ನು ಕೇಳಿದ್ದಾರೆ. ಜಯಂತ್ ಟಿ ಅವರು ತಮ್ಮ ಹೇಳಿಕೆಯಲ್ಲಿ, “ಪ್ರಕರಣದ ತನಿಖೆ ಪ್ರಸ್ತುತ ನಡೆಯುತ್ತಿದ್ದು, ಅಗತ್ಯ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತನಿಖೆಯನ್ನು ತುಂಬಾ ಉತ್ತಮ ರೀತಿಯಲ್ಲಿ ಮುಂದುವರೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದರೆ, ದೂರುದಾರ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಅವರು ಈ ಪ್ರಕರಣದಲ್ಲಿ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಅವರ ಪ್ರಕಾರ, 2002-03 ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಸಾವಿನ ಪ್ರಕರಣ ನಡೆದಿದೆ. ಈ ಸಂದರ್ಭದಲ್ಲಿ ಸಂಬಂಧಿತ ಪೊಲೀಸ್ ಅಧಿಕಾರಿ ಕಾನೂನು ಪ್ರಕ್ರಿಯೆಯನ್ನು ಅನುಸರಿಸದೇ, ಆ ಬಾಲಕಿಯ ಶವವನ್ನು ಅರಣ್ಯದಲ್ಲೇ ಹೂತುಹಾಕಿದ್ದಾರೆ ಎಂಬ ಆರೋಪವಿದೆ.
ಜಯಂತ್ ಟಿ ಅವರ ಪ್ರಕಾರ, ಸಂಬಂಧಿತ ಪೊಲೀಸ್ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದು, ಈ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. “ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಬಾಲಕಿಯ ಸಾವು ಕುರಿತು ನಿಜಾಂಶ ಬಹಿರಂಗವಾಗಬೇಕು,” ಎಂದು ಅವರು ಆಗ್ರಹಿಸಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ವಶಕ್ಕೆ ತೆಗೆದುಕೊಂಡಿದ್ದು, ದೂರುದಾರರಿಂದ ಹೊಸ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ.
ಸಾಮಾಜಿಕ ಹೋರಾಟಗಾರ ಜಯಂತ್ 2010 ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಗೆ ದೂರು ನೀಡಿದ್ದರು. 35 ರಿಂದ 40 ವಯಸ್ಸಿನ ಮಹಿಳೆ ಮಹಿಳೆಯ ಕೊಲೆ ನಡೆದಿದ್ದು, ಲಾಡ್ಜ್ ನಲ್ಲಿ ಕೊಲೆಯಾದ ಸ್ಥಿತಿಯಲ್ಲಿದ್ದ ಮಹಿಳೆ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಒಂದೇ ದಿನದಲ್ಲಿ ದಫನ್ ಮಾಡಿದ್ದಾರೆಂದು ಗಂಭೀರ ಆರೋಪ ಹೊರಿಸಿ ಗುರುತು ಪತ್ತೆಯಾಗದಿದ್ದರೂ ಅಪರಿಚಿತ ಶವವನ್ನು ವಿಲೇವಾರಿ ಮಾಡಿದ್ದು ಯಾಕೆ? ಎಂದು ಆರ್‌ಟಿಐ ಮೂಲಕ ದಾಖಲೆಗಳನ್ನು ಪಡೆದು ಎಸ್‌ಐಟಿಗೆ ಬಂದಿದ್ದರು. 6 -4 -2010ರಂದು ಈ ಪ್ರಕರಣ ನಡೆದಿದೆ. ಬೆಳ್ತಂಗಡಿ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಈ ಶವವನ್ನು ಧರ್ಮಸ್ಥಳ ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ. ಪಂಚಾಯತ್ ನವರು ದಫನ ಮಾಡಿದ್ದಾರೆ. ಕೊಲೆ ಹಾಗೂ ಸಾಕ್ಷಿ ನಾಶದ ಪ್ರಕರಣ ಇದಾಗಿದೆ. ಒಂದೇ ದಿನಕ್ಕೆ ಸಾಕ್ಷ ನಾಶ ಎಂದು ಹೇಗೆ ನಿರ್ಧರಿಸಿದರು. ಮರು ದಿನವೇ ಶವವನ್ನು ಹೇಗೆ ದಫನ ಮಾಡಿದರು. ಈ ಬಗ್ಗೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ 160 ಅಪರಿಚಿತ ಮಹಿಳೆಯರ ಸಾವಿನ ವಿವರ ಪಡೆದಿದ್ದೇನೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನವೇ ಅಪ್ರಾಪ್ತ ಬಾಲಕಿಯ ಅನುಮಾನಾಸ್ಪದ ಸಾವಿನ ಬಗ್ಗೆ ಹೇಳಿದ್ದರು.