ರಾಜಕೀಯ ಪಕ್ಷವೊಂದರ ಪರವಾಗಿ ಪ್ರಚಾರ ಮಾಡುವುದರ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಪ್ರಿಯದರ್ಶಿನಿ ಪ್ರೌಢಶಾಲೆ(ಅನುದಾನಿತ)ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್. ಯೋಗೀಶ್ ಬಿನ್ ಆಂಜಿನಪ್ಪ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ
ತುಮಕೂರು : ರಾಜಕೀಯ ಪಕ್ಷವೊಂದರ ಪರವಾಗಿ ಪ್ರಚಾರ ಮಾಡುವುದರ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಪ್ರಿಯದರ್ಶಿನಿ ಪ್ರೌಢಶಾಲೆ(ಅನುದಾನಿತ)ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್. ಯೋಗೀಶ್ ಬಿನ್ ಆಂಜಿನಪ್ಪ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಈತನು ಸರ್ಕಾರಿ ಅನುದಾನಿತ ಯ ನೌಕರನಾಗಿದ್ದು, ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಲೀ ಅಥವಾ ಯಾವುದೇ ರಾಜಕೀಯ ಪಕ್ಷದ ಸಭೆ, ಸಮಾರಂಭಗಳಲ್ಲಿ ಭಾಗವಹಿಸಬಾರದು ಎಂಬ ನಿಯಮವಿದ್ದರೂ ಸಹ ಎ.ಎಸ್.ಯೋಗೀಶ್ ಬಿನ್ ಆಂಜಿನಪ್ಪ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ವೈ.ಎನ್.ಹೊಸಕೋಟೆ ಗ್ರಾಮದ ಗ್ರಾಮಸ್ಥರು ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ 137-ಪಾವಗಡ(ಎಸ್.ಸಿ) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ವರದಿ ಸಲ್ಲಿಸಿರುತ್ತಾರೆ. ಸದರಿ ವರದಿಯೊಂದಿಗೆ ಗ್ರಾಮಸ್ಥರು ದೂರಿನೊಂದಿಗೆ ನೀಡಿದ ಫೋಟೋ ಮತ್ತು ಸಿಡಿಯನ್ನು ಸಲ್ಲಿಸಿದ್ದು, ಇವುಗಳನ್ನು ಪರಿಶೀಲಿಸಿದಾಗ ಎ.ಎಸ್.ಯೋಗೀಶ್ ಬಿನ್ ಆಂಜಿನಪ್ಪ ಅವರು ಕಾಂಗ್ರೇಸ್ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಎ.ಎಸ್.ಯೋಗೀಶ್ ಬಿನ್ ಆಂಜಿನಪ್ಪ ಅವರ ಮೇಲಿನ ಆರೋಪಗಳ ಕುರಿತು ಇಲಾಖಾ ವಿಚಾರಣೆ ಕಾಯ್ದಿರಿಸಿ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರಿಗೆ ಕೆಸಿಎಸ್‌ಆರ್ 98(ಎ)ರನ್ವಯ ಜೀವನಾಧಾರ ಭತ್ಯೆ ಪಾವತಿಸಲಾಗುವುದು. ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ಸೂಚಿಸಿದ್ದಾರೆ.
300 ಕೋಟಿ ದಾಟಿದ ಅಕ್ರಮ
ಬೆಂಗಳೂರು(ಏ.30): .ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳು ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಬಳಿಕ ಈವರೆಗೆ ವಶಪಡಿಸಿಕೊಂಡ ನಗದು, ಮದ್ಯ ಸೇರಿದಂತೆ ಇತರೆ ವಸ್ತುಗಳ ಮೌಲ್ಯವು 300 ಕೋಟಿ ರು. ದಾಟಿದೆ.
2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ 186 ಕೋಟಿ ರು.ನಷ್ಟುಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 2018ರಲ್ಲಿ ನಗದು 94.3 ಕೋಟಿ ರು. ವಶಪಡಿಸಿಕೊಂಡಿದ್ದರೆ, ಈಗ 109 ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದೆ.
Karnataka Assembly Elections 2023: ಚುನಾವಣಾ ಅಕ್ರಮ ತಡೆಗೆ ಮೊಬೈಲ್ ಸ್ಕ್ವಾಡ್
ಶನಿವಾರ 6.24 ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದೆ. ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಕೋಟಿ ರು. ನಗದು ಮತ್ತು ಬಾಗಲಕೋಟೆ ಕ್ಷೇತ್ರದಲ್ಲಿ 30 ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 109.14 ಕೋಟಿ ರು. ನಗದು, 22.14 ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ. 72.70 ಕೋಟಿ ರು. ಮೌಲ್ಯದ 19.10 ಲಕ್ಷ ಲೀಟರ್ ಮದ್ಯ, 18.29 ಕೋಟಿ ರು. ಮೌಲ್ಯದ 1,438 ಕೆಜಿ ಮಾದಕ ವಸ್ತುಗಳು, 76.05 ಕೋಟಿ ರು. ಮೌಲ್ಯದ 149.42 ಕೆಜಿ ಚಿನ್ನ, 4.44 ಕೋಟಿ ರು. ಮೌಲ್ಯದ 637.94 ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು 80.49 ಕೋಟಿ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 302.78 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
2,288 ಎಫ್‌ಐಆರ್, 69,819 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,422 ಪ್ರಕರಣಗಳನ್ನು ದಾಖಲಿಸಲಾಗಿದೆ. 9,896 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 15,182 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದಿದೆ.