ಹಣದ ಚೀಲ ಎಸೆದು ಅರೆಸ್ಟಾಗಿದ್ದ ಅಧಿಕಾರಿಗೆ ಮತ್ತೆ ಮುಖ್ಯ ಹುದ್ದೆ!

By Kannadaprabha NewsFirst Published Aug 23, 2019, 10:38 AM IST
Highlights

ಬೆಂಗಳೂರಲ್ಲಿ ಕೆಲ ತಿಂಗಳುಗಳ ಹಿಂದೆ ಕಿಡಕಿ ಮೂಲಕ ಹಣದ ಚೀಲವನ್ನೆ ಎಸೆದು ಎಸಿಬಿ ದಾಳಿ ಬಳಿಕ ಅಮನಾತಾಗಿದ್ದ ಅಧಿಕಾರಿಗೆ ಇದೀಗ ಕರ್ನಾಟಕ ಸರ್ಕಾಋ ಪ್ರಮುಖ ಹುದ್ದೆಯನ್ನೇ ನೀಡಿದೆ. 

ಬೆಂಗಳೂರು [ಆ.23]:  ಕೋಟ್ಯಂತರ ರು. ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗೊಳಗಾಗಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್‌-2 ಟಿ.ಆರ್‌.ಸ್ವಾಮಿಗೆ ಬಿಜೆಪಿ ಸರ್ಕಾರವು ಕೃಪೆ ತೋರಿದ್ದು, ಮುಖ್ಯ ಎಂಜಿನಿಯರ್‌ 1 ಮತ್ತು 2 ಹುದ್ದೆಯ ಜವಾಬ್ದಾರಿ ನೀಡಿದೆ.

ಅಕ್ರಮ ಗಸ್ತಿ ಗಳಿಕೆ ಆರೋಪದ ಮೇಲೆ ಟಿ.ಆರ್‌.ಸ್ವಾಮಿಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅದೇ ವಿಭಾಗದಲ್ಲಿ ಪ್ರಮುಖ ಹುದ್ದೆಯನ್ನೇ ನೀಡಿ ಆದೇಶ ಹೊರಡಿಸಿದ್ದಾರೆ.

ಸ್ವಾಮಿ ಎಸಿಬಿ ದಾಳಿ ವೇಳೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಮತ್ತು ಮುಖ್ಯ ಅಭಿಯಂತರರು -2 ಹುದ್ದೆಯಲ್ಲಿದ್ದರು. ವಿಚಾರಣೆ ವೇಳೆ ಅವರನ್ನು ಅಮಾನತುಗೊಳಿಸಲಾಗಿತ್ತು. ಸಾಮಾನ್ಯವಾಗಿ ಯಾವುದೇ ಭ್ರಷ್ಟಾಚಾರ ಆರೋಪಕ್ಕೊಳಗಾಗುವ ಅಧಿಕಾರಿಗಳಿಗೆ ಬೇರೆ ಇಲಾಖೆಯ ಹುದ್ದೆಯನ್ನು ನೀಡಲಾಗುತ್ತದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವಾಮಿ ಮೇಲೆ ಕರುಣೆ ತೋರಿ ಕೆಐಎಡಿಬಿಯಲ್ಲಿಯೇ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಸ್ಥಾನ ನೀಡಿದ್ದಾರೆ.

ಕೆಐಎಡಿಬಿ ತಾಂತ್ರಿಕ ವಿಭಾಗದ ಮುಖ್ಯ ಅಭಿವೃದ್ಧಿ ಅಧಿಕಾರಿ ಹಾಗೂ ಮುಖ್ಯ ಎಂಜಿನಿಯರ್‌ 1 ಮತ್ತು 2 ಹುದ್ದೆಯ ಹೊಣೆಯನ್ನು ನೀಡಲಾಗಿದೆ. ಪ್ರಸ್ತುತ ಮುಖ್ಯ ಎಂಜಿನಿಯರ್‌ -1 ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮ ಅವರಿಗೆ ಅಧೀಕ್ಷಕ ಎಂಜಿನಿಯರ್‌ ಸ್ಥಾನದಲ್ಲಿ ಮುಂದುವರಿಯುವಂತೆ ಆದೇಶದಲ್ಲಿ ಸೂಚಿಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಸ್ವಾಮಿ ಅವರ ಮಲ್ಲೇಶ್ವರದಲ್ಲಿನ ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೇ, ಅವರ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರು. ನಗದು ಮತ್ತು ಆಸ್ತಿ-ಪಾಸ್ತಿ ದಾಖಲೆ ಪತ್ರಗಳು ಲಭ್ಯವಾಗಿದ್ದವು. ಎಸಿಬಿ ದಾಳಿಯಾಗುತ್ತಿದ್ದಂತೆ ಅಪಾರ್ಟ್‌ಮೆಂಟ್‌ ಬಾಗಿಲು ತೆರೆಯದೆ ಹೈಡ್ರಾಮಾ ನಡೆಸಿದ್ದಲ್ಲದೇ, ಬ್ಯಾಗ್‌ವೊಂದನ್ನು ಹೊರಗೆ ಬಿಸಾಡಿದ್ದರು. ದಾಳಿ ವೇಳೆ 4.52 ಕೋಟಿ ರು. ನಗದು, 1.6 ಕೆ.ಜಿ. ಚಿನ್ನ, 10 ನಿವೇಶನದ ಕಾಗದ ಪತ್ರ, ಕುಟುಂಬಸ್ಥರ ಹೆಸರಲ್ಲಿದ್ದ 8 ಮನೆಯ ದಾಖಲೆ, 10 ಎಕರೆ ಕೃಷಿ ಜಮೀನಿನ ಪತ್ರ ಸೇರಿದಂತೆ ಇತರೆ ದಾಖಲೆಗಳು ಪತ್ತೆಯಾಗಿದ್ದವು.

click me!