
ಮೂಲ್ಕಿ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಅನುದಾನ ಮತ್ತು ಸತತ ಪ್ರಯತ್ನದಿಂದ ಸದಾ ಜನನಿಬಿಡವಾಗಿರುವ ಸುರತ್ಕಲ್ ರೈಲ್ವೆ ನಿಲ್ದಾಣವು ಸುಮಾರು 1.48 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಲಾಟ್ ಫಾರ್ಮ್ ಮತ್ತು ಮೇಲ್ಛಾವಣಿ ಕಾಮಗಾರಿ ಮುಕ್ತಾಯವಾಗಿದೆ ಎಂದು ಸುರತ್ಕಲ್ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ತಿಳಿಸಿದ್ದಾರೆ.
ಉತ್ತರ ಭಾರತಕ್ಕೆ ಹೋಗಿ ಬರುವ ಎರಡು ರೈಲು ಗಾಡಿ ಮತ್ತು ಸಂಭಾವಿತ ಬೆಂಗಳೂರು ಕಾರವಾರ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಸಂಸದರು ಪ್ರಯತ್ನಿಸಬೇಕಾಗಿದೆ. ಕೇಂದ್ರ ಸರ್ಕಾರದ ರೈಲ್ವೆ ಸಚಿವರು ಕೂಡ ನಮ್ಮ ರಾಜ್ಯದವರೇ ಆಗಿರುವುದರಿಂದ ಈ ನಮ್ಮ ಬೇಡಿಕೆ ಕಾರ್ಯಗತವಾಗಲು ಸಾಧ್ಯವಿದೆ. ಸುರತ್ಕಲ್ ರೈಲ್ವೆ ನಿಲ್ದಾಣವು ಮಂಗಳೂರು ಉತ್ತರ ನಗರದ ಹೆಬ್ಬಾಗಿಲಾಗಿದ್ದು ಇಲ್ಲಿ ಸಮುದ್ರ ತೀರ ಇರುವುದರಿಂದ ಪ್ರವಾಸೋಧ್ಯಮ ಬೆಳೆಯಲು ಅವಕಾಶ ಇದೆ. ಬೃಹತ್ ಕೈಗಾರಿಕೆಗಳು ಈ ಪ್ರದೇಶದಲ್ಲಿದ್ದು ಎನ್ ಐಟಿಕೆ ಮತ್ತು ಶ್ರೀನಿವಾಸ ಮಹಾವಿದ್ಯಾಲಯ ಕೂಡ ಪರಿಸರದಲ್ಲಿ ಇರುವುದರಿಂದ ರಾಜ್ಯದ ಜನರಿಗೆ, ವಿದ್ಯಾರ್ಥಿಗಳಿಗೆ, ತುಂಬಾ ಅನುಕೂಲವಾಗುವ ರೈಲ್ವೆ ನಿಲ್ದಾಣ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ 23 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ 8.15ಕ್ಕೆ ಮಂಗಳೂರು ವಿಮಾನ ನಿಲ್ದಾಣ ಆಗಮನ, 10ಕ್ಕೆ ನಗರದ ಪಾಲೆಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಗುರುಪುರ ಜಂಗಮ ಸಂಸ್ಥಾನ ಮಠ ಭೇಟಿ, 2ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಪರಿಶೀಲನೆ, ಸಂಜೆ 4.05ಕ್ಕೆ ಸಚಿವರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.