'ಮೋದಿ 70 ವರ್ಷದ ಮುದಿಯ..' ಪ್ರಧಾನಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ್‌

Published : May 22, 2026, 11:38 AM IST
BK Hariprasad

ಸಾರಾಂಶ

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ದೇಶವು ಸಮಸ್ಯೆಗಳಿಂದ ಬಳಲುತ್ತಿರುವಾಗ ಮೋದಿ, ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸುತ್ತಿದ್ದ ನೀರೋ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು (ಮೇ.22): ದೇಶದಲ್ಲಿ ದಿನಕ್ಕೊಂದು ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿದ್ದರೂ, ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸಗಳಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ಮೋದಿ ಅವರನ್ನು ರೋಮ್ ಸಾಮ್ರಾಜ್ಯದ ನೀರೋ ಚಕ್ರವರ್ತಿ ಹಾಗೂ ಆಸ್ಟ್ರಿಚ್ (ಉಷ್ಟ್ರಪಕ್ಷಿ) ಪಕ್ಷಿಗೆ ಹೋಲಿಸಿರುವ ಅವರು, ಮೋದಿಯವರ ಇಟಲಿ ಪ್ರವಾಸದ ಫೋಟೋಗಳ ಕುರಿತು ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಪ್ರಧಾನಿ ವಿರುದ್ಧ ಚಾಣಕ್ಯ ನೀತಿಯನ್ನು ಉಲ್ಲೇಖಿಸಿ ಹರಿಹಾಯ್ದರು.

"ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದ!"

"ರೋಮ್ ನಗರವು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ಕ್ರೂರ ದೊರೆ ನೀರೋ ಮಹಾರಾಜ ಆರಾಮವಾಗಿ ಕುಳಿತು ಪಿಟೀಲು ನುಡಿಸುತ್ತಿದ್ದನಂತೆ. ಭಾರತದ ಇಂದಿನ ಪರಿಸ್ಥಿತಿಯೂ ಹಾಗೇ ಆಗಿದೆ. ದೇಶದಲ್ಲಿ ಪ್ರತಿದಿನವೂ ಹತ್ತಾರು ಜನವಿರೋಧಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದರೆ, ನಮ್ಮ ಪ್ರಧಾನಿ ಮೋದಿಯವರು ದೇಶದ ಗಂಭೀರ ಪರಿಸ್ಥಿತಿಯನ್ನು ಬದಿಗೊತ್ತಿ ವಿದೇಶಿ ಪ್ರವಾಸಗಳನ್ನು (Foreign Trips) ಮಾಡುತ್ತಿದ್ದಾರೆ" ಎಂದು ಹರಿಪ್ರಸಾದ್ ಆಪಾದಿಸಿದರು.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಪ್ರಧಾನಿ ಮೋದಿ ಅವರ ಭೇಟಿಯ ಸಾಮಾಜಿಕ ಜಾಲತಾಣದ ಟ್ರೆಂಡ್‌ಗಳ ಕುರಿತು ಮಾತನಾಡಿದ ಅವರು, "70 ವರ್ಷದ ಮುದಿಯ ಪ್ರಧಾನಿ ನರೇಂದ್ರ ಮೋದಿಯವರು, ತಮಗಿಂತ ತೀರಾ ಸಣ್ಣ ವಯಸ್ಸಿನ ಇಟಲಿ ಪ್ರಧಾನಿ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಹಾಗೂ ರೋಮ್ ನಗರದಲ್ಲಿ ಅವರಿಬ್ಬರು ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳನ್ನು ನೋಡಿದರೆ ದೇಶದ ಜನರಿಗೆ ನಗು ಬರುತ್ತದೆ. ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆ ಇರುವಾಗ, ಇವರು ಮಾತ್ರ ತಮಗಿಂತ ಸಣ್ಣ ವಯಸ್ಸಿನವರ ಜೊತೆಗೆ 'ಮೆಲೋಡಿ' (Melodi) ಹಂಚಿಕೊಂಡು ಕಾಲ ಕಳೆಯುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

ಮೋದಿ ಒಂಥರಾ 'ಆಸ್ಟ್ರಿಚ್' ಪಕ್ಷಿ ಇದ್ದ ಹಾಗೆ!

ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಟೀಕಿಸಿದ ಕಾಂಗ್ರೆಸ್ ನಾಯಕ, "ಮೋದಿಯವರು ಒಂಥರಾ ಆಸ್ಟ್ರಿಚ್ (ಉಷ್ಟ್ರಪಕ್ಷಿ) ಇದ್ದ ಹಾಗೆ. ಭೀಕರ ಬಿರುಗಾಳಿ ಅಥವಾ ಸಂಕಷ್ಟ ಎದುರಾದಾಗ ಆಸ್ಟ್ರಿಚ್ ಪಕ್ಷಿಯು ಮರಳಿನಲ್ಲಿ ತನ್ನ ಕತ್ತನ್ನು ಹೂತುಕೊಂಡು, ಜಗತ್ತಿನಲ್ಲಿ ಏನೂ ಆಗುತ್ತಿಲ್ಲ ಎಂದು ಸುಮ್ಮನೆ ಕೂರುತ್ತದೆ. ಮೋದಿಯವರೂ ಸಹ ದೇಶದ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟಿನಂತಹ ಬಿರುಗಾಳಿಗಳಿಗೆ ಹೆದರಿ ವಿದೇಶಗಳಲ್ಲಿ ಹೋಗಿ ಅಡಗಿಕೊಳ್ಳುತ್ತಾರೆ" ಎಂದು ಲೇವಡಿ ಮಾಡಿದರು.

ಇದೇ ವೇಳೆ ಇಟಲಿ ಪ್ರಧಾನಿಗೆ ಮೆಲೋನಿ ಚಾಕೊಲೇಟ್ ನೀಡಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು, "ಪ್ರಧಾನಿ ಮೋದಿಯವರು ಇಟಲಿಗೆ ಹೋಗಿ 'ಪಾರ್ಲೆ ಮೆಲೋಡಿ' ಚಾಕೊಲೇಟ್ ಅನ್ನು ಜಾರ್ಜಿಯಾ ಮೆಲೋನಿಗೆ ಕೊಟ್ಟು, ಭಾರತದಲ್ಲಿ ಪಾರ್ಲೆ ಕಂಪನಿಯ ಶೇರು ದರ ಹೆಚ್ಚಾಗುವಂತೆ ಮಾಡಿದ್ದಾರೆ. ಪ್ರಧಾನಿಯಾದವರು ದೇಶದ ರಾಜತಾಂತ್ರಿಕತೆ ಬಿಟ್ಟು, ಅಲ್ಲಿಯೂ ಪಾರ್ಲೆ ಕಂಪನಿಯ ಜೊತೆ ಸೇರಿಕೊಂಡು ವ್ಯಾಪಾರ ಕುದುರಿಸಿದ್ದಾರೆ" ಎಂದು ಗಂಭೀರವಾಗಿ ಆರೋಪಿಸಿದರು.

ಕೊನೆಯದಾಗಿ ಚಾಣಕ್ಯನ ಸೂತ್ರವನ್ನು ನೆನಪಿಸಿದ ಬಿ.ಕೆ. ಹರಿಪ್ರಸಾದ್, "'ರಾಜನೇ ವ್ಯಾಪಾರಿಯಾದಾಗ ದೇಶದ ಪ್ರಜೆಗಳು ಬಿಕಾರಿಯಾಗುತ್ತಾರೆ' ಎಂಬುದು ಚಾಣಕ್ಯ ನೀತಿ. ಭಾರತದ ಇತಿಹಾಸದಲ್ಲೇ ದೇಶದ ಜನರನ್ನು ಅತ್ಯಂತ ಕಡು ಬಿಕಾರಿ ಮಾಡಿದ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಾ, ಜನರ ಬದುಕನ್ನು ಬೀದಿಗೆ ತಂದಿದ್ದಾರೆ" ಎಂದು ತೀವ್ರ ವಾಗ್ದಾಳಿ ನಡೆಸಿದರು.

 

PREV
Read more Articles on
click me!

Recommended Stories

ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ: ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
Soujanya case re-investigation: ಸೌಜನ್ಯ ಪ್ರಕರಣದಲ್ಲಿ ಅಚ್ಚರಿ ಬೆಳವಣಿಗೆ, ಸೌಜನ್ಯ ಕೇಸ್ ಮರು ತನಿಖೆಗೆ ಸಿಬಿಐಗೆ ಹಸ್ತಾಂತರ ಸಾಧ್ಯತೆ!