ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟ್| ಸುಪ್ರೀಂ ಕೋರ್ಟ್ ಮುಂದಿನ ಆದೇಶ ನೀಡುವವರೆಗೆ ಎಲ್ಲ ಪ್ರಕ್ರಿಯೆಗಳು ಸ್ಥಗಿತ| ಇನ್ನಷ್ಟು ಮುಂದಕ್ಕೆ ಹೋದ ಪಾಲಿಕೆ ಚುನಾವಣೆ|
ಹುಬ್ಬಳ್ಳಿ(ಫೆ.04): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಏಳೆಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎನ್ನುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಇದರಿಂದ ಪಾಲಿಕೆ ಚುನಾವಣೆ ಮತ್ತಷ್ಟುಮುಂದೆ ಹೋಗುವ ಸಾಧ್ಯತೆ ಇದೆ. ಇದರೊಂದಿಗೆ ಕ್ಷೇತ್ರದ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗಳಿಗೆಲ್ಲ ಬ್ರೇಕ್ ಬಿದ್ದಂತಾಗಿದೆ.
2020 ಡಿ. 16ರಂದು ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ವಿಜಯಪುರದ ಮಾಜಿ ಮೇಯರ್ ಒಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೊಪಣ್ಣ, ವಿ. ರಾಮಸುಬ್ರಮಣ್ಯಿಯನ್ ಅವರಿದ್ದ ಪೀಠ ಬುಧವಾರ ಅರ್ಜಿಯ ವಿಚಾರಣೆ ನಡೆಸಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹು-ಧಾ ಮಹಾನಗರದ ಕೆಲ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್ ವಿಂಗಡಣೆ, ಮೀಸಲಾತಿ ಹಾಗೂ ಚುನಾವಣೆ ವಿಳಂಬ ಆಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಚುನಾವಣೆ ನಡೆಯದೇ ಇರುವ ಎಲ್ಲ ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಏಳೆಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಡಿ. 16ರಂದು ಆದೇಶಿಸಿದ್ದರು.
ಹುಬ್ಬಳ್ಳಿ: ಬರೋಬ್ಬರಿ 10 ತಿಂಗಳ ಬಳಿಕ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ ಪ್ರಾರಂಭ
ಆರು ವಾರಗಳಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಂತರದ ಮೂರು ತಿಂಗಳಲ್ಲಿ ಮೀಸಲಾತಿ ಪ್ರಕಟಿಸಬೇಕು. ನಂತರ ಚುನಾವಣೆ ಮಾಡಬೇಕು. ಈ ಎಲ್ಲ ಪ್ರಕ್ರಿಯೆಗಳು ಏಳೆಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದರು.
ಪುನರ್ ವಿಂಗಡಣೆ ಸಲ್ಲಿಕೆ:
ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ್‌ಗಳ ಪುನರ್ ವಿಂಗಡನಾ ಕಾರ್ಯ ಪೂರ್ಣಗೊಳಿಸಿತ್ತು. ಪುನರ್ ವಿಂಗಡಣೆಯಿಂದ 79 ವಾರ್ಡ್‌ಗಳಾಗಿದ್ದವು. ಇದನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಈ ಕುರಿತು ನೋಟಿಫಿಕೇಶನ್ ಹೊರಡಿಸುವ ಸಿದ್ಧತೆಯಲ್ಲಿತ್ತು. ಅಷ್ಟರೊಳಗೆ ಸುಪ್ರೀಂ ಕೋರ್ಟ್ ಮುಂದಿನ ಆದೇಶ ನೀಡುವವರೆಗೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದರಿಂದ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪಾಲಿಕೆ ಚುನಾವಣೆ ಇನ್ನಷ್ಟು ಮುಂದಕ್ಕೆ ಹೋದಂತಾಗಿದೆ.