ಪ್ರೀತಿಯ ಸಂಕೇತವಾಗಿ ಆಕರ್ಷಕವಾದ ಉಡುಗೊರೆ ನೀಡಿ ಸಂಭ್ರಮಿಸಲು ಸಜ್ಜಾಗುತ್ತಿರುವ ಪ್ರೇಮಿಗಳು| ಪೋಷಕರ ಕಣ್ತಪ್ಪಿಸಿ ಪ್ರೇಮಿಗಳ ದಿನ ಆಚರಿಸಲು ಕೆಲವರ ಉತ್ಸುಕ| ಈ ಬಾರಿ ಭಾನುವಾರ ಬಂದ ಪ್ರೇಮಿಗಳ ದಿನ|
ಬೆಂಗಳೂರು(ಫೆ.04): ಪ್ರೇಮಿಗಳ ದಿನ (ಫೆ.14) ಸಮೀಪಿಸುತ್ತಿದ್ದಂತೆ ಪ್ರೇಮಿಗಳು ಹಾಗೂ ಮಾರಾಟಗಾರರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು ಮಾರುಕಟ್ಟೆಯಲ್ಲೂ ವ್ಯಾಪಾರ-ವಹಿವಾಟು ಗರಿಗೆದರುತ್ತಿದೆ.
ನಗರದ ವಿವಿಧ ಪಾಲಿ ಹೌಸ್‌ಗಳಲ್ಲಿ ಕೆಂಪು ಗುಲಾಬಿ ಹೂವುಗಳನ್ನು ಪ್ರೇಮಿಗಳ ದಿನಕ್ಕೆಂದೇ ಕಟಾವು ಮಾಡದೆ ರೈತರು ಬಿಟ್ಟಿದ್ದಾರೆ. ಗುಣಮಟ್ಟದ ಹೂವಿಗಾಗಿ ವ್ಯಾಪರಿಗಳು ಅರಸುತ್ತಿದ್ದಾರೆ. ಇನ್ನೊಂದೆಡೆ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಆಕರ್ಷಕವಾದ ಉಡುಗೊರೆ ನೀಡಿ ಸಂಭ್ರಮಿಸಲು ಸಜ್ಜಾಗುತ್ತಿದ್ದಾರೆ.
undefined
ದುಬಾರಿ ಗೆಳತಿಯರ ವ್ಯಾಲಂಟೈನ್ ಸಹವಾಸ ಕಷ್ಟ ಕಷ್ಟ!
ಗಿಫ್ಟ್ ಸೆಂಟರ್ಗಳಲ್ಲಿ ಕೂಡ ಹೃದಯಾಕಾರದ ಉಡುಗೊರೆಗಳು, ಪಿಲ್ಲೊಗಳು, ವೆಲ್ವೆಟ್ನಲ್ಲಿ ತಯಾರಿಸಿದ ಹಾರ್ಟ್ ಶೇಪ್ನ ಹ್ಯಾಂಗಿಂಗ್ಗಳು, ಅದೃಷ್ಟದ ಗಿಡಗಳು, ಕಣ್ಮನ ಸೆಳೆಯುವ ಚಾಕೊಲೇಟ್ಗಳು, ಬಟ್ಟೆಗಳು, ಆಭರಣಗಳು ಇತ್ಯಾದಿಗಳು ಗಮನ ಸೆಳೆಯುತ್ತಿವೆ. ಈ ಬಾರಿ ವಾರಾಂತ್ಯ ದಿನವಾದ ಭಾನುವಾರ ಪ್ರೇಮಿಗಳ ದಿನ ಬಂದಿದೆ. ಜತೆಗೆ ಕಾಲೇಜುಗಳು ಇತ್ತೀಚೆಗಷ್ಟೇ ಆರಂಭವಾಗಿವೆ. ಹೀಗಾಗಿ ಪೋಷಕರ ಕಣ್ತಪ್ಪಿಸಿ ಪ್ರೇಮಿಗಳ ದಿನ ಆಚರಿಸಲು ಕೆಲವರು ಉತ್ಸುಕರಾಗಿದ್ದಾರೆ.
ಉತ್ಪಾದನೆ ಶೇ.20ರಷ್ಟು ಕುಸಿತ
ಕಳೆದ ವರ್ಷ ಈ ಅವಧಿಯಲ್ಲಿ ಒಂದು ಗುಲಾಬಿ ಹೂವಿಗೆ ಐಫ್ಯಾಬ್ (ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ)ನಲ್ಲಿ 7 ರು. ನಿಗದಿಯಾಗಿತ್ತು. ಈಗ 5 ರು.ಗೆ ಇಳಿಕೆಯಾಗಿದೆ. ಕಳೆದ ಬಾರಿ ನಿತ್ಯ 3.50 ಲಕ್ಷ ಗುಲಾಬಿ ಹೂವುಗಳು ಐಫ್ಯಾಬ್ಗೆ ಬರುತ್ತಿದ್ದವು. ಈ ವರ್ಷ ಸುಮಾರು 3 ಲಕ್ಷ ಹೂವುಗಳು ಮಾತ್ರ ಬರುತ್ತಿವೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಬೆಳೆಗಾರರು ಗುಲಾಬಿ ಬೆಳೆಯುವ ಉದ್ಯಮದಿಂದ ವಿಮುಖರಾಗಿದ್ದು, ಉತ್ಪಾದನೆ ಪ್ರಮಾಣ ಶೇ.20ರಷ್ಟು ಕುಸಿದಿದೆ. ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಹೂವಿನ ಇಳುವರಿ, ಗುಣಮಟ್ಟ ಹಾಗೂ ಬೇಡಿಕೆ ಮೇರೆಗೆ ದರ ಹೆಚ್ಚಾಗುವ ಸಾಧ್ಯತೆಯಿದೆ. ಕೊಲ್ಕತ್ತಾ, ಮುಂಬೈ ಮತ್ತಿತರ ಮಹಾನಗರಗಳಿಗೂ ಇಲ್ಲಿನ ಗುಲಾಬಿ ರವಾನೆಯಾಗಲಿದೆ. ಬೆಂಗಳೂರು ನಗರದಾದ್ಯಂತ ಅಂದು ಸುಮಾರು ಏಳೆಂಟು ಲಕ್ಷಕ್ಕೂ ಹೆಚ್ಚು ಗುಲಾಬಿಗಳು ಮಾರಾಟವಾಗಲಿವೆ ಎನ್ನಲಾಗಿದೆ.