
ಪಾವಗಡ : ತಳ ಸಮುದಾಯಗಳ ಪ್ರಗತಿಗೆ ವಿಶೇಷ ಒತ್ತು ನೀಡಿದು,್ದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಕಾಣುವಂತೆ ಶಾಸಕ ವೆಂಕಟರಮಣಪ್ಪ ಬುಡಬುಡಿಕೆ ಸಮಾಜಕ್ಕೆ ಕರೆ ನೀಡಿದರು.
ಅವರು ಭಾನುವಾರ ಪಟ್ಟಣದಲ್ಲಿ ಹಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಹಾಗೂ ಬುಡಬುಡಕೆ ಸಮಾಜದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಊರಿಂದ ಊರಿಗೆ ಅಲೆದು ಜೀವನ ನಡೆಸುತ್ತಿದ್ದ ಬುಡಬುಡಿಕೆ ಸಮಾಜ ಇತ್ತೀಚೆಗೆ ಸ್ವಾವಂಲಬನೆ ಬದುಕಿನತ್ತ ಸಾಗುತ್ತಿದ್ದು ನಾಗರಿಕ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿರುವುದು ಶ್ಲಾಘನೀಯ. ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ಸಮಾಜಕ್ಕೆ ಶಾಶ್ವತ ನೆಲೆ ಕಲ್ಪಿಸುವ ಹಿನ್ನಲೆಯಲ್ಲಿ ಪಟ್ಟಣದ ಸಮೀಪ ಒಂದುವರೆ ಎಕರೆ ಸರ್ಕಾರಿ ಜಮೀನು ಗುರ್ತಿಸಿ ಸುಮಾರು 60 ಬುಡಬುಡಿಕೆ ಸಮಾಜ ಕುಟುಂಬಗಳಿಗೆ ನಿವೇಶನ ಕಲ್ಪಿಸಲಾಗಿದೆ. ಈ ಸಂಬಂಧ ಕಿರಿಕಿರಿ ಮಾಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಕೆಲವರು ಗುಡಿಸಲು ಹಾಗೂ ಇನ್ನೂ ಕೆಲವರು ಗುಡಾರ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ ಅವರು ಬಡ ಹಾಗೂ ಶೋಷಿತರ ಪ್ರಗತಿ ಕಾಂಗ್ರೆಸ್‌ನಿಂದ ಸಾಧ್ಯ. ಹೀಗಾಗಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.
ತಾಲೂಕು ಕಾಂಗ್ರೆಸ್ ಮುಖಂಡ ಎಚ್.ವಿ.ವೆಂಕಟೇಶ್ ಮಾತನಾಡಿ, ಬುಡಬುಡಿಕೆ ಸಮಾಜದ ಪ್ರಗತಿಗೆ ವಿಶೇಷ ಒತ್ತು ನೀಡಲಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆನೇಕ ಯೋಜನೆ ಜಾರಿಯಾಗಲಿವೆ. ಹೀಗಾಗಿ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಜಿಪಂ ಮಾಜಿ ಸದಸ್ಯ ಮಹಮ್ಮದ್ ಫಜುಲುಲ್ಲಾ ಮಾತನಾಡಿ, ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಇಲ್ಲಿನ ಸಂಭವವನೀಯ ಕಾಂಗ್ರೆಸ್ ಅಭ್ಯರ್ಥಿಯಾದ ಎಚ್.ವಿ.ವೆಂಕಟೇಶರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು, ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಬುಡಬುಡಿಕೆ ಸಮಾಜದ ಹಿರಿಯ ಮುಖಂಡ ಪೆಟ್ರೋಲ್ ಬಂಕ್ ರಾಮಪ್ಪ ಮಾತನಾಡಿದರು.
ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್,ಮಹಮ್ಮದ್ ಇಮ್ರಾನ್ ವೇಲುರಾಜ್, ನರಸಿಂಹಪ್ಪ ಇತರೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಕ್ಕಳ ಪ್ರಗತಿಗೆ ಆದ್ಯತೆ ನೀಡಿರುವೆ: ಶಾಸಕ
ಪಾವಗಡ ತಾಲೂಕಿನ ಜ್ವಲಂತ ಸಮಸ್ಯೆ ಹಾಗೂ ಕುಡಿವ ನೀರಿನ ಅಭಾವ ಕುರಿತು ಗಮನ ಸೆಳೆದ ಮೇರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2,350 ಕೋಟಿ ವೆಚ್ಚದಲ್ಲಿ ಬಯಲು ಸೀಮೆ ವಾಪ್ತಿಯ ಬಹು ಗ್ರಾಮಗಳಿಗೆ ತುಂಗಭದ್ರಾ ಯೋಜನೆ ಅನುಷ್ಟಾನ ಮಾಡಿದ್ದು, ಕಾಮಗಾರಿ ಜರೂರಾಗಿ ನಡೆಯುತ್ತಿದೆ. ನೀರಾವರಿ ಅನುಷ್ಟಾನಕ್ಕೆ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿವೆ. ಕೊಟ್ಟಮಾತಿಗೆ ತಪ್ಪದಂತೆ ರೈಲ್ವೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿದ್ದು ಯೋಜನೆ ಅಡಿ ಶೀಘ್ರ ತಾಲೂಕಿನಲ್ಲಿ ರೈಲ್ಪೆ ಸಂಚಾರಕ್ಕೆ ಚಾಲನೆ ನೀಡಲಾಗುವುದು. ಈ ಹಿಂದೆ ಬುಡಬುಡಿಕೆ ಸಮಾಜದ ಮುಖಂಡ ರಾಮಪ್ಪ ಗಮನ ಸೆಳೆದ ಮೇರೆಗೆ ದೇವಸ್ಥಾನದ ಪ್ರಗತಿಗೆ 5 ಲಕ್ಷ ಅನುದಾನ ನೀಡಿದ್ದೇನೆ. ಸಮಾಜದ ಪ್ರಗತಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡಿರುವುದಾಗಿ ಶಾಸಕ ವೆಂಕಟರಮಣಪ್ಪ ಹೇಳಿದರು.