ರಾಜ್ಯ ಸರ್ಕಾರ ಕುಂಚಿಟಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ತುರ್ತಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ನಂಜಾವಧೂತ ಸ್ವಾಮೀಜಿಯವರು ಒತ್ತಾಯಿಸಿದರು.
ಶಿರಾ : ರಾಜ್ಯ ಸರ್ಕಾರ ಕುಂಚಿಟಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ತುರ್ತಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ನಂಜಾವಧೂತ ಸ್ವಾಮೀಜಿಯವರು ಒತ್ತಾಯಿಸಿದರು.
ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಚಿಕ್ಕ ಹುಲಿಕುಂಟೆ ಗ್ರಾಮದ ಶ್ರೀರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ರಂಗನಾಥ ಸ್ವಾಮಿ ಹೂವಿನ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಮುಂದಿನ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಕುಂಚಿಟಿಗ ಸಮುದಾಯಕ್ಕೆ ಕೇಂದ್ರ ಓಬಿಸಿ ಮೀಸಲಾತಿ ಕೊಡಿಸಲು ಬದ್ಧರಾಗಿರಬೇಕು. ಕುಂಚಿಟಿಗರಿಗೆ ಕೇಂದ್ರ ಓಬಿಸಿ ಮೀಸಲಾತಿ ಕಲ್ಪಿಸುವ ಇಚ್ಛಾಶಕ್ತಿ ಹೊಂದಿರಬೇಕು ಎಂದರು.
ಒಕ್ಕಲಿಗರಿಗೆ ಶೇ. 12ರಷ್ಟುಮೀಸಲಾತಿ ನೀಡಿ: ಯಾವುದೇ ಸರ್ಕಾರ ಬಂದರೂ ಸಹ ಒಕ್ಕಲಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ 3ಎ ಮೀಸಲಾತಿಯ ಪ್ರಮಾಣವನ್ನು ಶೇ. 4 ರಿಂದ 16ಕ್ಕೆ ಏರಿಸಬೇಕು. ಇದು ನಮ್ಮ ಬಹಳ ದಿನಗಳ ಬೇಡಿಕೆಯಾಗಿದೆ. ಒಂದು ವೇಳೆ ಶೇ. 16ಕ್ಕೆ ಏರಿಸದಿದ್ದರೇ ಕನಿಷ್ಠ 12ರಷ್ಟಾದರೂ ಏರಿಕೆ ಮಾಡಬೇಕು. ರಾಜಕೀಯ ಪಕ್ಷಗಳು ಇದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಬೇಕು. ಕೃಷಿಯನ್ನೇ ನಂಬಿ ಬದುಕುವ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ನೀಡುವ 3ಎ ಮೀಸಲಾತಿಯಡಿ ಶೇ. 4ರಷ್ಟುಮೀಸಲಾತಿ ಪಡೆಯುತ್ತಿದ್ದಾರೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯದ ಬಡ ಕುಟುಂಬಗಳಿದ್ದು ಈ ಮೀಸಲಾತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶಗಳು ಕೈತಪ್ಪಿದ್ದು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 12ಕ್ಕಾದರೂ ಏರಿಕೆ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಕ್ಕಲಿಗರಿಗೆ 2ಸಿ ಮೀಸಲಾತಿ ಕಲ್ಪಿಸಿ ಹೆಚ್ಚಳ ಮಾಡಿದ್ದೇವೆ ಎಂಬ ಭರವಸೆ ನೀಡಿತ್ತು, ಆದರೆ ಅದಕ್ಕೆ ಅಡೆತಡೆಗಳು ಬಂದಿದ್ದು ಸರ್ಕಾರ ತಕ್ಷಣ ಅಡೆತಡೆಗಳನ್ನು ತೆರುವು ಮಾಡಿ ಹೆಚ್ಚಳವಾದ ಮೀಸಲಾತಿ ಪ್ರಮಾಣವನ್ನು ಅಧಿಸೂಚನೆ ಮೂಲಕ ಘೋಷಿಸಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕ ಶ್ರೀರಾಮೇಗೌಡ ಮಾತನಾಡಿ ಎಲ್ಲರೂ ಒಗ್ಗೂಡಿ ದೇವತಾ ಕಾರ್ಯಗಳು ಮಾಡಿದಾಗ ಗ್ರಾಮಗಳಲ್ಲಿ ನೆಮ್ಮದಿ ಮೂಡಲಿದೆ. ನಂಜಾವಧೂತ ಶ್ರೀಗಳ ಒತ್ತಾಸೆಯಂತೆ ಚಿಕ್ಕ ಹುಲಿಕುಂಟೆ ರಂಗನಾಥ ಸ್ವಾಮಿಗೆ ನೂತನ ರಥ ನಿರ್ಮಾಣ ವೆಚ್ಚವನ್ನು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹುಲಿಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಮ್ಮ, ಉಪಾಧ್ಯಕ್ಷ ರವಿಕುಮಾರ್, ಮಾಜಿ ಉಪಾಧ್ಯಕ್ಷ ಗಿರೀಶ್, ನಿವೃತ್ತ ಶಿಕ್ಷಕ ಶಿವರಾಮಯ್ಯ, ವಕೀಲ ಕುಮಾರ್, ಲಕ್ಷ್ಮಣಗೌಡ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರು.