ಗ್ರಾಪಂ ಬರ್ಕಾಸ್ತು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರದ್ದು?

By Kannadaprabha NewsFirst Published Sep 18, 2019, 12:33 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಒಂದನ್ನು ಬರ್ಕಾಸ್ತು ಮಾಡಿದ್ದು ಇದೀಗ ಜಿಲ್ಲಾ ಪಂಚಾಯತ್ ರದ್ದು ಮಾಡಲು ಒತ್ತಾಯ ಮಾಡಲಾಗಿದೆ. 

ಮಂಗಳೂರು [ಸೆ.18]:  ಬಿಜೆಪಿ ಆಡಳಿತದ ದ.ಕ. ಜಿಲ್ಲಾ ಪಂಚಾಯ್ತಿಯು ಹಳೆಯಂಗಡಿ ಗ್ರಾಮ ಪಂಚಾಯ್ತಿಯನ್ನು ಬರ್ಕಾಸ್ತುಗೊಳಿಸುವ ನಿರ್ಣಯ ಮಾಡಿದ್ದು ರಾಜಕೀಯ ಸೇಡಿನ ನಡೆ. ನಿಯಮ ಉಲ್ಲಂಘಿಸಿ ಅಧಿಕಾರ ದುರುಪಯೋಗ ಮಾಡಿದ ಜಿಲ್ಲಾ ಪಂಚಾಯ್ತಿಯನ್ನೇ ರಾಜ್ಯ ಸರ್ಕಾರ ವಜಾಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಒತ್ತಾಯಿಸಿದ್ದಾರೆ.

ಚುನಾಯಿತ ಆಡಳಿತವನ್ನು ಬರ್ಕಾಸ್ತುಗೊಳಿಸಿದ್ದು ರಾಜ್ಯದಲ್ಲೇ ಅಪರೂಪವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗಿದೆ. ಈ ಕರಾಳ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ. ಅಲ್ಲದೆ, ಮುಂದಿನ ಅಧಿವೇಶನದಲ್ಲಿ ಈ ವಿಚಾರದ ಕುರಿತು ನಿಲುವಳಿ ಮಂಡನೆ ಮಾಡಿ ರಾಜ್ಯದ ಗಮನ ಸೆಳೆಯುವುದಾಗಿ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. ಗಂಭೀರ ಕರ್ತವ್ಯಲೋಪ ಎಸಗಿದ ಜಿಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಕೂಡಲೆ ರಾಜಿನಾಮೆ ನೀಡಬೇಕು ಎಂದೂ ಆಗ್ರಹಿಸಿದರು.

ಕಾನೂನು ಬಾಹಿರ ಹೇಗೆ?: ಜಿಲ್ಲಾ ಪಂಚಾಯ್ತಿ ಕಾಯ್ದೆಯ ಸೆಕ್ಷನ್‌ 268ರ ಪ್ರಕಾರ ಯಾವುದೇ ಪಂಚಾಯ್ತಿಯನ್ನು ವಿಸರ್ಜನೆ ಮಾಡುವ ಮೊದಲು ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ನಂತರ ವಿಸರ್ಜಿಸಬೇಕು. ಅದಕ್ಕೆ ಸೂಕ್ತ ಅವಧಿ ನಿಗದಿಪಡಿಸಬೇಕು. ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಬೇಕು. ಜಿಲ್ಲಾ ಪಂಚಾಯ್ತಿ ಏಕಾಏಕಿ ಗ್ರಾಪಂ ಬರ್ಕಾಸ್ತುಗೊಳಿಸಿದ್ದು ಕಾಯ್ದೆ ಉಲ್ಲಂಘನೆಯ ಗಂಭೀರ ಪ್ರಕರಣವಾಗಿದೆ ಎಂದು ದಾಖಲೆ ಸಹಿತ ತಿಳಿಸಿದರು.

2017-18ರಲ್ಲಿ 12 ಸಾಮಾನ್ಯ ಸಭೆ ಮಾಡಬೇಕಿತ್ತು ಎಂಬ ಕಾರಣ ನೀಡಿದ್ದಾರೆ. ಆದರೆ 3 ಸಾಮಾನ್ಯ ಸಭೆ, 2 ವಿಶೇಷ ಸಭೆ, 2 ಗ್ರಾಮ ಸಭೆಗಳು ನಡೆದಿವೆ. ಮಾಚ್‌ರ್‍ 12ರಿಂದ ಮೇ 23ರವರೆಗೆ ಮೂರು ತಿಂಗಳು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ. ನಂತರದ 2 ತಿಂಗಳು ಗ್ರಾಪಂ ಪಿಡಿಒ ಗ್ರಾಪಂ ಕಚೇರಿಗೆ ಬಂದದ್ದು ಎರಡೇ ಬಾರಿ (ಪೂರ್ಣಕಾಲಿಕ ಪಿಡಿಒ ಇರಲಿಲ್ಲ). 5 ತಿಂಗಳು ಸಭೆ ಮಾಡಲಿಕ್ಕೇ ಸಾಧ್ಯವಾಗಿಲ್ಲ. ತಿಂಗಳ ಹಿಂದೆ ಪೂರ್ಣಕಾಲಿಕ ಪಿಡಿಒ ನೇಮಕವಾದ ಮೇಲೆ 1 ಸಾಮಾನ್ಯ ಸಭೆ, 1 ವಿಶೇಷ ಸಭೆ, 1 ತುರ್ತು ಸಭೆ, 1 ಗ್ರಾಮ ಸಭೆ ನಡೆದಿದೆ. ಇದು ಯಾರ ತಪ್ಪು? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ನೀಡಿದ್ದೀರಿ ಎಂದು ಐವನ್‌ ಪ್ರಶ್ನಿಸಿದರು.

ಒಂದು ವೇಳೆ ಗ್ರಾಪಂ ಸಭೆ ನಡೆಸಲು ವಿಫಲವಾದರೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಸಭೆ ಕರೆಯಬಹುದು ಎಂಬುದು ನಿಯಮಗಳಲ್ಲಿದೆ. ಅದನ್ನೇಕೆ ಮಾಡಲಿಲ್ಲ? ತಾ.ಪಂ. ಇಒ, ಗ್ರಾಪಂ ಪಿಡಿಒ ಮೇಲೆ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ಜಿಪಂ ಸದಸ್ಯರಾದ ಶಾಹುಲ್‌ ಹಮೀದ್‌, ಎಂ.ಎಸ್‌. ಮಹಮ್ಮದ್‌, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಮುಖಂಡರಾದ ವಸಂತ ಬರ್ನಾಡ್‌, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾ ಕುಮಾರಿ ಇದ್ದರು.

ಜೀವಕ್ಕೆ ಕುತ್ತಾಯ್ತು ಪ್ರೇಮಿಗಳ ಆ ವಿಡಿಯೋ?

ಸಚಿವ ಕೋಟ ಉತ್ತರಿಸಲಿ :  ಹಳೆಯಂಗಡಿ ಗ್ರಾಪಂನಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿಗರು ಆಡಳಿತದಲ್ಲಿದ್ದಾರೆ ಎಂಬ ಕಾರಣಕ್ಕಾಗಿ ರಾಜಕೀಯ ದುರುದ್ದೇಶದ ತೀರ್ಮಾನ ಕೈಗೊಂಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿದ ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಕೂಡಲೆ ರಾಜಿನಾಮೆ ನೀಡಬೇಕು. ಸ್ಥಳೀಯಾಡಳಿತ ಪ್ರತಿನಿಧಿಗಳಿಂದ ಆಯ್ಕೆಯಾದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಐವನ್‌ ಡಿಸೋಜ ಆಗ್ರಹಿಸಿದರು.

click me!