ಜೀವಕ್ಕೆ ಕುತ್ತಾಯ್ತು ಪ್ರೇಮಿಗಳ ಆ ವಿಡಿಯೋ?

By Kannadaprabha NewsFirst Published Sep 18, 2019, 12:08 PM IST
Highlights

ಪ್ರೇಮಿಗಳ ಆ ವಿಡಿಯೋವೇ ಜೀವಕ್ಕೆ ಕುತ್ತಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಏನದು ವಿಚಾರ ಇಲ್ಲಿದೆ ಮಾಹಿತಿ.

ಹುಬ್ಬಳ್ಳಿ [ಸೆ.18]:  ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಗಣೇಶ ವಿಸರ್ಜನೆ ವೇಳೆ ನಡೆದ ಕೊಲೆ, ಹಲ್ಲೆ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಹತ್ಯೆಯಾಗಿದೆ. ಪ್ರೇಮಿಗಳ ವಿಡಿಯೋ ಜೀವಕ್ಕೆ ಕುತ್ತಾಗಿದ್ದು, ಗೆಳೆಯರೇ ಸೇರಿಕೊಂಡು ಹಾಡಹಗಲೇ ಇರಿದು ಕೊಂದಿದ್ದಾರೆ.

ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿ ನಿವಾಸಿ ಕರಣ್ ಅಲಿಯಾಸ್ ನಿತುನ್ ಪ್ರಕಾಶ ಶಟ್ವಾ (23 ) ಹತ್ಯೆಗೀಡಾದ ಯುವಕ. ಆರೋಪಿಗಳಾದ ರಾಹುಲ್ ಯಲ್ಲಪ್ಪ ಕಾಳುನಿ (24) ಹಾಗೂ ಶಾಂತಕುಮಾರ ಬಸವರಾಜ ಚಳಗೇರಿ (21) ಇಬ್ಬರನ್ನು ಬಂಧಿಸಲಾಗಿದೆ. ಈ ಎಲ್ಲರೂ ಸ್ನೇಹಿತರಾಗಿದ್ದು, ಪೇಂಟಿಂಗ್ ಕೆಲಸ ಮಾಡುತ್ತಿದ್ದರು. 

ರಾಹುಲ್ ಕಳೆದ ಕೆಲ ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಅವರಿಬ್ಬರು ಓಡಾಡುವುದನ್ನು ಕರಣ ಶಟ್ವಾ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದನು. ಅದನ್ನು ಪಾಲಕರಿಗೆ ತೋರಿಸುವುದಾಗಿ ಬೆದರಿಸಿ ಹಣ ನೀಡುವಂತೆ ರಾಹುಲ್‌ಗೆ ಪೀಡಿಸುತ್ತಿದ್ದನಂತೆ. ಈ ಕಿರಿಕಿರಿ ಸಹಿಸದೇ ರಾಹುಲ್ ಕರಣ್‌ಗೆ 10 ಸಾವಿರ ನೀಡಿದ್ದನಂತೆ. ಮತ್ತೆ 10 ಸಾವಿರ ಕೊಡುವಂತೆ ಕರಣ್ ಬೇಡಿಕೆ ಇಟ್ಟಿದ್ದನಂತೆ. ಹಣ ಕೊಡುತ್ತೇನೆ ಎಂದು ಮನೆಗೆ ಬಾ ಎಂದು ರಾಹುಲ್ ಕರಣ್‌ನನ್ನು ಕರೆದಿದ್ದಾನೆ. ಕರಣ್ ಮಧ್ಯಾಹ್ನ 12.30ರ ಸುಮಾರಿಗೆ ರಾಹುಲ್ ಮನೆ ಬಳಿ ತೆರಳಿದ್ದಾನೆ. ಅಲ್ಲಿ ಶಾಂತಕುಮಾರ ಕೂಡ ಇದ್ದ. 

ಮೂವರ ನಡುವೆ ವಾಗ್ವಾದ ನಡೆದಿದೆ. ಬೈಕ್ ಮೇಲಿದ್ದ ಕರಣ್‌ಗೆ ರಾಹುಲ್ ಹಾಗೂ ಶಾಂತಕುಮಾರ ಚಾಕು ಹಾಗೂ ಬ್ಲೇಡ್‌ನಿಂದ ಇರಿದಿದ್ದಾರೆ. ಆಗ ಕರಣ್ ನೆಲಕ್ಕೆ ಬಿದ್ದಿದ್ದಾನೆ. ಬಳಿಕ ಎದೆ ಹಾಗೂ ಹೊಟ್ಟೆಗೆ ಇರಿದಿದ್ದಾರೆ.  ರಕ್ತದ ಮಡುವಿನಲ್ಲಿ ಬಿದ್ದಿದ್ದ ಕರಣ್‌ನನ್ನು ಸಂಬಂಧಿಕರು, ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದ ಯುವಕ ಅರ್ಧಗಂಟೆ ಬಳಿಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕರಣ್ ಮೃತದೇಹ ಕಿಮ್ಸ್ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಕಾನೂನು ಪ್ರಕ್ರಿಯೆ ಮುಂದುವರಿದಿದೆ. 

ಮೃತ ಸಂಬಂಧಿಕ ಗಣೇಶ ಬಿಲ್ಲಾ ಮಾತ್ರ ರಾಹುಲ್‌ಗೆ ಕರಣ್ ಸಾಲವಾಗಿ ದುಡ್ಡು ಕೊಟ್ಟಿದ್ದ. ಮರಳಿ ಪಡೆಯಲು ಅಲ್ಲಿಗೆ ತೆರಳಿದ್ದ. ಆಗ ರಾಹುಲ್, ಶಾಂತಕುಮಾರ ಸೇರಿ ಇರಿದು ಕೊಂದಿದ್ದಾರೆಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಶರಣಾದ ರಾಹುಲ್: ಕೊಲೆ ನಡೆದ ಕೆಲವೇ ಹೊತ್ತಲ್ಲಿ ರಾಹುಲ್ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕರಣ್ ಸಂಬಂಧಿಕರು, ಸ್ಥಳೀಯರು ಪ್ರತಿಕಾರದ ನುಡಿಯಿಂದ ಬೆದರಿ ಈತ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಂತಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ. ಕಿಮ್ಸ್ ಎದುರು ಸೇರಿದ ಕರಣ್ ತಾಯಿ, ತಂಗಿ, ತಮ್ಮ, ಸಂಬಂಧಿಕರು ಹಾಗೂ ಸ್ನೇಹಿತರ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿತ್ತು. ಕೊಲೆ ಮಾಡಿದವರನ್ನು ಸುಮ್ಮನೆ ಬಿಡಬಾರದು. 3 ದಿನದಲ್ಲಿ ಪೊಲೀಸರು ಆರೋಪಿಗಳಿಗೆ ಶಿಕ್ಷೆ ಕೊಡದಿದ್ದಲ್ಲಿ ನಾವು ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕರಣ್ ತಾಯಿ ಲಕ್ಷ್ಮೀ ಎಚ್ಚರಿಕೆ ನೀಡಿದಳು.

click me!