ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಂಡು ಮತ್ತೊಮ್ಮೆ ಸ್ಪರ್ಧಿಸುವ ಪ್ರಯತ್ನಕ್ಕೆ ಮುಂದಾಗುವ ಸಾಧ್ಯತೆಗಳಿವೆ.
ಮಂಡ್ಯ ಮಂಜುನಾಥ
ಮಂಡ್ಯ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಂಡು ಮತ್ತೊಮ್ಮೆ ಸ್ಪರ್ಧಿಸುವ ಪ್ರಯತ್ನಕ್ಕೆ ಮುಂದಾಗುವ ಸಾಧ್ಯತೆಗಳಿವೆ.
ಈಗಾಗಲೇ ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವೆಡೆ ಮೈತ್ರಿಯ ಪರ-ವಿರೋಧ, ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದ್ದು, ಕ್ಷೇತ್ರ ಹಂಚಿಕೆ ಮಾತುಕತೆಗೂ ಮುನ್ನವೇ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳುವ ಮೂಲಕ ಸುಮಲತಾ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಇರಾದೆಯನ್ನು ಪರೋಕ್ಷವಾಗಿ ವ್ಯಕ್ರಪಡಿಸಿದ್ದಾರೆ
ಕಳೆದ ಲೋಕಸಭಾ ಚುನಾವಣೆಯಿಂದಲೂ ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸಿಕೊಂಡು ಹೋರಾಟ ಮಾಡುತ್ತಾ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದಿರುವ ಸುಮಲತಾ ಅಂಬರೀಶ್, ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಅಧಿಕೃತ ಬೆಂಬಲ ಘೋಷಿಸಿದರು.
ಇದೀಗ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಹಿನ್ನೆಲೆ ಯಾವ ಪಕ್ಷಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ಧಕ್ಕಬಹುದು ಎಂಬ ಚರ್ಚೆಗಳು ಜೋರಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಅಭರ್ಥಿಯಾಗಿ ಸುಮಲತಾ ಅವರೇ ಕಣಕ್ಕಿಳಿಯುತ್ತಾರ ಪ್ರಶ್ನೆ ಜಿಲ್ಲೆಯ ಜನತೆಯಲ್ಲಿದೆ.
ಕಾಂಗ್ರೆಸ್ ಬಗ್ಗೆ ಮೃದುಧೋರಣೆ:
ಸಂಸದರಾದ ಆರಂಭದಿಂದಲೂ ಕಾಂಗ್ರೆಸ್ಸಿಗರ ವಿರುದ್ಧ ಎಲ್ಲಿಯೂ ಟೀಕೆಗಳನ್ನು ಮಾಡದೆ ಮೃದುಧೋರಣೆ ಅನುಸರಿಕೊಂಡು ಬಂದಿರುವ ಸುಮಲತಾ, ಬಿಜೆಪಿ ಜೊತೆ ಉತ್ತಮ ಒಡನಾಟ ಹೊಂದಿ ಆ ಪಕ್ಷದ ನಾಯಕರೊಂದಿಗೂ ಉತ್ತಮ ವಿಶ್ವಾಸ ಮುಂದುವರೆಸಿಕೊಂಡು ಬಂದಿದ್ದಾರೆ. ಈಗ ತಮಗೆ ಸಂಪರ್ಕವಿರುವ ಬಿಜೆಪಿ ವರಿಷ್ಠರ ಮೂಲಕ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಂಡು ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂಬ ಹಿನ್ನೆಲೆಯಲ್ಲಿ ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ವರಿಷ್ಠರಿಗೆ ಮನವಿ ಮಾಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರ ಕೈತಪ್ಪದಂತೆ ನೋಡಿಕೊಳ್ಳಲು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಬಿಜೆಪಿ ಪಕ್ಷದ ಹಲವು ಮುಖಂಡರು ಸುಮಲತಾ ಬೆನ್ನಿಗೆ ನಿಂತಿದ್ದಾರೆ.
ಬಿಜೆಪಿಯಷ್ಟೇ ಜೆಡಿಎಸ್ ಪ್ರಾಬಲ್ಯ
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವನ್ನು ಕಂಡಿತ್ತು. ಆದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಲಾಗದೆ ಜೆಡಿಎಸ್ ವೈಫಲ್ಯ ಕಂಡಿತು. ೨೦೨೩ರ ಚುನಾವಣೆಯಲ್ಲಿ ಜೆಡಿಎಸ್ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾತ್ರ ಗೆಲುವನ್ನು ಕಂಡು ಶೋಚನೀಯ ಪರಿಸ್ಥಿತಿಯಲ್ಲಿದೆ. ಸದ್ಯದ ಮಟ್ಟಿಗೆ ಜೆಡಿಎಸ್‌ನಷ್ಟೇ ಪ್ರಾಬಲ್ಯವನ್ನು ಬಿಜೆಪಿ ಕೂಡ ಹೊಂದಿದೆ. ಆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು. ಸುಮಲತಾಗೆ ಟಿಕೆಟ್ ನೀಡಬೇಕೆಂಬುದು ಬಿಜೆಪಿ ಮುಖಂಡರ ವಾದವಾಗಿದೆ.
ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸುತ್ತಲೇ ಲೋಕಸಭಾ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ವರಿಷ್ಠರು ಕ್ಷೇತ್ರವಾರು ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಹೇಳುವುದರೊಡನೆ ಮುಂದಿನ ಚುನಾವಣೆಗೆ ತಾವು ಸ್ಪರ್ಧೆಗೆ ಸಿದ್ಧ ಎಂಬ ಸಂದೇಶವನ್ನು ಜೆಡಿಎಸ್ ವರಿಷ್ಠರಿಗೆ ರವಾನಿಸಿದ್ದಾರೆ.
ಬಿಜೆಪಿ ಸ್ಥಿತಿ ಸುಧಾರಣೆ:
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಉಂಟಾದ ನಷ್ಟವನ್ನೂ ಪ್ರಸ್ತಾಪಿಸಿರುವ ಅವರು, ಸ್ಥಳೀಯವಾಗಿ ಕಾರ್ಯಕರ್ತರ ಮಟ್ಟದಲ್ಲಿ ಮೈತ್ರಿ ಬಲಗೊಳ್ಳದಿದ್ದರೆ ನಿರೀಕ್ಷಿತ ಫಲಿತಾಂಶ ಬರುವುದಿಲ್ಲವೆಂಬ ಮುಂಜಾಗ್ರತೆಯ ಮಾತನ್ನೂ ಆಡಿದ್ದಾರೆ. ಈ ಎಲ್ಲಾ ಅಭಿಪ್ರಾಯಗಳ ಒಟ್ಟಾರೆ ಆಶಯ ಜಿಲ್ಲೆಯಲ್ಲಿ ಬಿಜೆಪಿ ಹಿಂದಿಗಿಂತಲೂ ಇಂದು ಸಾಕಷ್ಟು ಸುಧಾರಣೆಯನ್ನು ಕಂಡಿದ್ದು ಬಲವರ್ಧನೆಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಪಕ್ಷ ಗಟ್ಟಿಗೊಳ್ಳಲು ಲೋಕಸಭಾ ಚುನಾವಣಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕೆಂಬ ಅಭಿಪ್ರಾಯ ಅವರದ್ದಾಗಿದೆ.
ಸಾಧನೆಗಳನ್ನು ಮುಂದಿಡುತ್ತಿರುವ ಜೆಡಿಎಸ್
ರಾಜಕೀಯವಾಗಿ ಈಗಾಗಲೇ ತೀವ್ರ ಹಿನ್ನಡೆ ಅನುಭವಿಸಿರುವ ಜೆಡಿಎಸ್ ಮಂಡ್ಯ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಸೋಲನುಭವಿಸಿ ಒಟ್ಟಾರೆ ೧೯ ಕ್ಷೇತ್ರಗಳನ್ನು ಮಾತ್ರವೇ ರಾಜ್ಯದಲ್ಲಿ ಗಳಿಸಿದೆ. ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯದಿಂದಲೇ ಪಕ್ಷ ಬಲವರ್ಧನೆಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಆದರೆ, ಮೈತ್ರಿ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ಗಂಭೀರವಾಗಿ ಪರಿಗಣಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಜೆಡಿಎಸ್ ಮಂಡ್ಯ, ರಾಮನಗರ, ಹಾಸನದಿಂದಲೇ ತನ್ನ ನೆಲೆ ಕಂಡುಕೊಳ್ಳಬೇಕಾದ ಅಗತ್ಯವಿದೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಹಿಂದೆ ಮಾಡಿದ ಸಾಧನೆಗಳನ್ನು ಮುಂದಿಟ್ಟು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.
ಒಂದು ವೇಳೆ ಜೆಡಿಎಸ್ ಅಂದುಕೊಂಡಂತೆ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಂಡರೆ ತನ್ನ ಸಾಂಪ್ರದಾಯಿಕ ಎದುರಾಳಿ ಸುಮಲತಾ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿದಂತಾಗುವುದು ಅಥವಾ ಬಿಜೆಪಿಯೇ ಮಂಡ್ಯದಿಂದ ಸ್ಪರ್ಧಿಸಿದರೆ ಜೆಡಿಎಸ್‌ಗೆ ಮತ್ತೊಂದು ನಷ್ಟ ಉಂಟಾದಂತಾಗುವುದು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಲೆಕ್ಕಾಚಾರವಾಗಿದೆ.
ಜೆಡಿಎಸ್‌ನೊಳಗೂ ಮೌನದ ವಾತಾವರಣ
೨೦೨೪ರ ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿ ಸ್ಥಳೀಯ ಜೆಡಿಎಸ್ ನಾಯಕರಿಗೂ ಬೇಸರ ಮೂಡಿಸಿದೆ. ಪಕ್ಷದೊಳಗೆ ಮೌನ ಆವರಿಸಿದೆ. ಯಾರೂ ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ಉತ್ಸಾಹವನ್ನೇ ತೋರುತ್ತಿಲ್ಲ.
ಮೈತ್ರಿ ಘೋಷಣೆಯಾದ ನಂತರದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು-ಕಾರ್ಯಕರ್ತರು ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕಾವೇರಿ ಹೋರಾಟದಲ್ಲೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಎರಡೂ ಪಕ್ಷದ ನಾಯಕರು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆಯೇ ವಿನಃ ಒಗ್ಗಟ್ಟಿನ ಹೋರಾಟಕ್ಕೆ ಇಳಿಯಲೇ ಇಲ್ಲ.
೨೦೧೯ರ ಚುನಾವಣೆ ನಂತರ ಜೆಡಿಎಸ್ ನಾಯಕರಿಗೆ ಕಡುವೈರಿಯಾಗಿರುವ ಸುಮಲತಾ ಮೈತ್ರಿಕೂಟದ ಅಭ್ಯರ್ಥಿಯಾಗುವರೆಂಬ ಮಾತು ಕೇಳಿಬರುತ್ತಿರುವುದನ್ನು ಬಹುತೇಕರು ಸಹಿಸಿಕೊಳ್ಳುತ್ತಿಲ್ಲ. ಅವರ ಪರವಾಗಿ ಚುನಾವಣಾ ಪ್ರಚಾರಕ್ಕಿಳಿಯುವುದಕ್ಕೂ ಅವರ ಮನಸ್ಸು ಒಪ್ಪುತ್ತಿಲ್ಲ. ಮತ್ತೊಂದೆಡೆ ಲೋಕಸಭಾ ಚುನಾವಣೆ ಎದುರಿಸುವ ಸಮರ್ಥ ಅಭ್ಯರ್ಥಿ ಜೆಡಿಎಸ್‌ನಲ್ಲೂ ಇಲ್ಲ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸಿ.ಎಸ್.ಪುಟ್ಟರಾಜು ಈಗ ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿಲ್ಲ. ಏಕೆಂದರೆ, ಅಂದು ಇದ್ದ ರಾಜಕೀಯ ಪರಿಸ್ಥಿತಿಯೇ ಬೇರೆ. ಈಗಿರುವ ಪರಿಸ್ಥಿತಿಯೇ ಬೇರೆಯಾಗಿದೆ. ಮಾಜಿ ಶಾಸಕ ಡಿ.ಸಿ.ತಮ್ಮಣ್ಣನವರಿಗೂ ವಯಸ್ಸು ಸ್ಪಂದಿಸುತ್ತಿಲ್ಲ, ಜೊತೆಗೆ ಅವರಲ್ಲಿ ಸರ್ಧಿಸುವ ಉತ್ಸಾಹವೂ ಇಲ್ಲ. ಉಳಿದಂತೆ ಜೆಡಿಎಸ್‌ನಿಂದ ಅಭ್ಯರ್ಥಿ ಯಾರೆಂಬುದೇ ಪ್ರಶ್ನೆಯಾಗಿದೆ.
ಇನ್ನು ಕಾಂಗ್ರೆಸ್‌ನೊಳಗೂ ಸಮರ್ಥ ಅಭ್ಯರ್ಥಿ ಕೊರತೆ ಕಾಡುತ್ತಿದೆ. ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ, ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಅವರ ಪತ್ನಿ ಧನಲಕ್ಷ್ಮೀ ಹೆಸರು ಸೇರಿದಂತೆ ಸ್ಥಳೀಯವಾಗಿ ಹಲವು ಮುಖಂಡರ ಹೆಸರು ಕೇಳಿಬರುತ್ತಿವೆಯಷ್ಟೇ. ಸ್ಥಳೀಯ ನಾಯಕರು ಅಭ್ಯರ್ಥಿಯ ಆಯ್ಕೆಯನ್ನು ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನೊಳಗೆ ಸಮರ್ಥ ಅಭ್ಯರ್ಥಿಗಳಿಲ್ಲದಿರುವ ಲಾಭವನ್ನು ಪಡೆದುಕೊಂಡು ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾಗಲು ಸುಮಲತಾ ಉತ್ಸುಕರಾಗಿದ್ದಾರೆ.