ಜಿಪಂ ಚುನಾವಣೆ: ಕೈಗೆ ಒಲಿದ ಅದೃಷ್ಟ| ಶಿವಯೋಗೆಪ್ಪ ನೇದಲಗಿ ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆ| ಕಾಂಗ್ರೆಸ್ ಪಕ್ಷ ಬಿಜೆಪಿ ಜಿಪಂ ಸದಸ್ಯರನ್ನು ಅಪಹರಣ ಮಾಡಿದೆ ಎಂಬ ಬಿಜೆಪಿ ಆರೋಪ|
ರುದ್ರಪ್ಪ ಆಸಂಗಿ
ವಿಜಯಪುರ(ಜು. 01): ಜಿಲ್ಲಾ ಪಂಚಾಯತಿ ಅಧ್ಯಕ್ಷ ಗಾದಿ ಮತ್ತೆ ಕಾಂಗ್ರೆಸ್ ಪಾಲಾಗಿದ್ದು, ಕಾಂಗ್ರೆಸ್ ರಣತಂತ್ರದ ಮುಂದೆ ಬಿಜೆಪಿ ರಣತಂತ್ರ ಫಲಿಸಲಿಲ್ಲ.
undefined
ಶಿವಯೋಗೆಪ್ಪ ನೇದಲಗಿ ಅವರು ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಕಳ್ಳಿಮನಿ, ಬಿಜೆಪಿ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಅವರು ಚುನಾವಣೆ ಅಖಾಡಕ್ಕಿಳಿದಿದ್ದರು. ಈ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಈ ಇಬ್ಬರು ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟು ಅಧ್ಯಕ್ಷರು ಯಾರಾಗುತ್ತಾರೆ ಎಂಬುವುದು ತೀವ್ರ ಕುತೂಹಲ ಕೆರಳಿಸಿತ್ತು.
ಮದುಮಗನಿಗೆ ಕೊರೊನಾ ದೃಢ; ಇಂದು ನಡೆಯಬೇಕಿದ್ದ ಮದುವೆ ರದ್ದು
ಜಿಲ್ಲಾ ಪಂಚಾಯತಿಯಲ್ಲಿ 42 ಸದಸ್ಯ ಬಲವಿದೆ. 20 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ 18, ಜೆಡಿಎಸ್ 2 ಹಾಗೂ ಪಕ್ಷೇತರ 1 ಸ್ಥಾನ ಹೊಂದಿವೆ. ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಕಳೆದ ಎರಡು ಚುನಾವಣೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಜೆಡಿಎಸ್, ಪಕ್ಷೇತರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಳೆದ ಎರಡು ಸಲ ಅವಮಾನವಾಗಿದ್ದನ್ನು ಈ ಸಲ ಗೆಲುವು ಸಾಧಿಸಿ ಕಾಂಗ್ರೆಸ್‌ಗೆ ಶಾಕ್ ಕೊಡಲು ಬಿಜೆಪಿಯ ನಾಯಕರ ದಂಡು ಕಳೆದ ಒಂದು ವಾರದಿಂದ ತೆರೆಮರೆಯಲ್ಲಿ ಯತ್ನಿಸಿತ್ತು. ಸಭೆ ನಡೆಸಿ ಎಲ್ಲ 20 ಬಿಜೆಪಿ ಅಭ್ಯರ್ಥಿಗಳ ಪೈಕಿ ಸರ್ವ ಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಅದೇ ರೀತಿ ಚಡಚಣ ತಾಲೂಕಿನ ನಿವರಗಿ ಜಿಪಂ ಕ್ಷೇತ್ರದ ಭೀಮಾಶಂಕರ ಬಿರಾದಾರ ಅವರನ್ನು ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಕಣಕ್ಕಿಳಿಸಿತ್ತು. ಅಲ್ಲದೆ ಕಾಂಗ್ರೆಸ್ಸಿನ ಮೂವರು ಸದಸ್ಯರನ್ನು ಬಿಜೆಪಿ ತನ್ನ ತೆಕ್ಕೆಗೆ ತಗೆದುಕೊಂಡು ಈ ಬಾರಿ ಮಾಡು ಇಲ್ಲವೆ ಮಡಿ ಎಂಬ ತತ್ವದಡಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಬಿಜೆಪಿ ಮುಖಂಡರು ಈ ಬಾರಿ ಯಾವುದೇ ಪರಿಸ್ಥಿತಿ ಬಂದರೂ ಕಾಂಗ್ರೆಸ್ಸಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಂತೆ ತಂತ್ರಗಳನ್ನು ಹೆಣೆದಿದ್ದರು. ಆದರೂ ಕಾಂಗ್ರೆಸ್ ಪ್ರತಿತಂತ್ರದ ಮುಂದೆ ಬಿಜೆಪಿ ತಂತ್ರ ಫಲಿಸಲಿಲ್ಲ.
ಬಿಜೆಪಿಯು ಕಾಂಗ್ರೆಸ್ಸಿನ ಮೂವರು ಸದಸ್ಯರನ್ನು ತನ್ನತ್ತ ಸೆಳೆದುಕೊಂಡರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಿಜೆಪಿ ನಾಲ್ವರು ಸದಸ್ಯರಿಗೆ ಗಾಳ ಹಾಕಿತು. ಇಷ್ಟೇ ಅಲ್ಲದೆ ಜೆಡಿಎಸ್‌ನ ಇಬ್ಬರು ಹಾಗೂ ಪಕ್ಷೇತರ ಒಬ್ಬ ಸದಸ್ಯರ ಮತ ಗಳಿಸುವಲ್ಲಿಯೂ ಕಾಂಗ್ರೆಸ್ ಯಶಸ್ವಿಯಾಯಿತು. ಹೀಗಾಗಿ ಬಿಜೆಪಿ ತಂತ್ರ ಕಾಂಗ್ರೆಸ್ ಮುಂದೆ ಏನೂ ನಡೆಯಲಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಅವರು ಒಗ್ಗಟ್ಟಿನಿಂದ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಚುನಾವಣೆ ಎದುರಿಸಲು ನೆರವಾದರು. ಹೀಗಾಗಿ ಜಿಲ್ಲಾ ಪಂಚಾಯತಿಯಲ್ಲಿ ಕೇವಲ 18 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದು ಗದ್ದುಗೆ ಏರಿತು.
ಕಾಂಗ್ರೆಸ್ಸಿನ ಉಮೇಶ ಕೋಳಕೂರ ಅವರು ಹಂಗಾಮಿ ಅಧ್ಯಕ್ಷ ಪ್ರಭು ದೇಸಾಯಿ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಿ ತಂತ್ರ ಹೆಣೆದಿದ್ದರು. ಆದರೆ ಈ ತಂತ್ರಕ್ಕೆ ಕಾಂಗ್ರೆಸ್ಸಿನ ಬೇರೆ ಯಾವುದೇ ಸದಸ್ಯರು ಬಲಿಯಾಗಲಿಲ್ಲ. ಹೀಗಾಗಿ ಈ ತಂತ್ರವೂ ಟುಸ್ ಆಗಿದೆ.
ಕಾಂಗ್ರೆಸ್ ಪಕ್ಷ ಬಿಜೆಪಿ ಜಿಪಂ ಸದಸ್ಯರನ್ನು ಅಪಹರಣ ಮಾಡಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಚುನಾವಣೆಗೆ ಮತ ಚಲಾಯಿಸಲು ಆಗಮಿಸಿದ ಕಾಂಗ್ರೆಸ್ ವಾಹನವನ್ನು ತಡೆದು ಬಿಜೆಪಿ ಕಾರ್ಯಕರ್ತರೂ ಗಲಾಟೆ ಕೂಡಾ ಮಾಡಿದರು. ಅದೂ ಕೂಡ ಫಲ ನೀಡಲಿಲ್ಲ.